ಶಿವಮೊಗ್ಗ: ಇಲ್ಲಿನ ವಾಸವಿ ಶಾಲೆ ಆವರಣದಲ್ಲಿ ನಡೆದ ಗಜಪ್ರಸವದ ಸಂಗತಿ ಸಕ್ರೆಬೈಲು ಆನೆ ಬಿಡಾರದ ಆಡಳಿತ ವ್ಯವಸ್ಥೆಯ ಬಗ್ಗೆಯೇ ಚರ್ಚೆಗಳ ಹುಟ್ಟುಹಾಕಿದೆ. ತುಂಬು ಗರ್ಭಿಣಿ ಆನೆ ನೇತ್ರಾವತಿಯನ್ನು ಜಂಬೂಸವಾರಿಗೆ ಕರೆತಂದು ತಾಲೀಮು ನಡೆಸಿದ್ದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರು ದಸರಾ ಜಂಬೂ ಸವಾರಿಗೆ ಕರೆದೊಯ್ಯಲು ಬಂದಿದ್ದ ವೈದ್ಯರ ತಂಡ ಆನೆಗಳ ಆರೋಗ್ಯ ಪರೀಕ್ಷೆ ಮಾಡಿತ್ತು. ಆಗ ನೇತ್ರಾವತಿ ಗರ್ಭಿಣಿ ಅನ್ನುವುದು ಗೊತ್ತಿರಲಿಲ್ಲ ಎಂದು ಸಕ್ರೆಬೈಲು ಅಧಿಕಾರಿಗಳು ಹೇಳಿದರೂ ಆಗ ಮೈಸೂರಿನಿಂದ ಬಂದವರು ಆನೆಗಳಿಗೆ ಶಾಸ್ತ್ರೀಯವಾಗಿ ಆರೋಗ್ಯ ಪರೀಕ್ಷೆ ನಡೆಸಿರಲಿಲ್ಲ. ಬರೀ ಪಟಾಕಿ ಹಚ್ಚಿ ಆನೆಗಳು ದಸರಾದ ಸದ್ದು–ಗದ್ದಲವನ್ನು ಹೇಗೆ ನಿಭಾಯಿಸುತ್ತವೆ ಎಂಬುದನ್ನು ಮಾತ್ರ ಪರೀಕ್ಷೆ ಮಾಡಿದ್ದರು ಎಂದು ಮೂಲಗಳು ಹೇಳುತ್ತವೆ.
ಲದ್ದಿ ಮೂತ್ರದ ಪರೀಕ್ಷೆ ಮಾಡಿಲ್ಲ..
ಆನೆಗಳು ಗರ್ಭ ಧರಿಸಿದ್ದನ್ನು ತಿಳಿಯಲು ಅದರ ಲದ್ದಿ ಇಲ್ಲವೇ ಮೂತ್ರದಲ್ಲಿನ progubesterone ಹಾರ್ಮೋನ್ ಪ್ರಮಾಣದ ಪರೀಕ್ಷೆ ಮಾಡಿಸಬೇಕು. ಇಲ್ಲವೇ ರಕ್ತದಲ್ಲಿನ ಪ್ರೊಲ್ಯಾಕ್ಸಿನ್ ಹಾರ್ಮೋನ್ ಪತ್ತೆ ಮಾಡಬೇಕು. ಅದನ್ನು ಹೈದರಾಬಾದ್‌ನಲ್ಲಿ ಮಾತ್ರ ಮಾಡುತ್ತಾರೆ. ಆದರೆ ಹಾಗೆ ಮಾಡಿಸದೇ ಇಲ್ಲಿಯೇ ಸ್ಥಳೀಯ ಲ್ಯಾಬ್‌ನಲ್ಲಿ ಶಾಸ್ತ್ರಕ್ಕೆಂಬಂತೆ ಪರೀಕ್ಷೆ ಮಾಡಿಸಲಾಗಿದೆ. ಗರ್ಭಿಣಿ ಆನೆಗೆ ಎಷ್ಟು ತಿಂಗಳು ತುಂಬಿದೆ ಎಂಬುದನ್ನು ನಿಖರವಾಗಿ ತಿಳಿಯಲು ಅಲ್ಟ್ರಾ ಸೋನೊಗ್ರಫಿ ಸ್ಕ್ಯಾನಿಂಗ್ ಮಾಡಿಸಬೇಕು ಅದ್ಯಾವುದೂ ಆಗಿಲ್ಲ ಎಂದು ಅರಣ್ಯ ಇಲಾಖೆಯ ವನ್ಯಜೀವಿ ತಜ್ಞರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.
ಆನೆಗಳಿಗೆ ಅಂಬಾರಿ ಹೊರುವುದೇ ಒತ್ತಡದ ಸಂಗತಿ. ಗರ್ಭ ಧರಿಸಿದ್ದಾಗ ಮಾಡಿದರೆ ಎಷ್ಟು ಒತ್ತಡ ಆಗಿರಬಹುದು. ಇನ್ನೊಂದು ವಾರ ಬಿಟ್ಟು ಮರಿ ಹಾಕುವುದು ಈಗಲೇ ಹಾಕಿರಬಹುದು ಎಂದು ಅವರು ಹೇಳುತ್ತಾರೆ.
ಆನೆಯ ವರ್ತನೆ ಗಮನಿಸಿಲ್ಲ..
ಆನೆ ಗರ್ಭ ಧರಿಸಿದ್ದರೆ ಅದರ ವರ್ತನೆಯಲ್ಲೇ ಅದು ಗೊತ್ತಾಗುತ್ತದೆ. ಆನೆಯ ಕೆಚ್ಚಲು ದಪ್ಪ ಆಗಿರುವುದಲ್ಲದೇ ಹಾಲಿನ ಗ್ರಂಥಿ ಉಬ್ಬಿರುತ್ತದೆ. ಅದು ಕಾಲು ಸೊಟ್ಟ ಮಾಡಿಕೊಂಡು ನಿಲ್ಲುತ್ತದೆ. ಬಹಳ ಹೊತ್ತು ನಿಲ್ಲದೆ ಆಗಾಗ ಕೂರುತ್ತದೆ. ಅದರ ಹಿಂಬದಿ ಅಗಲವಾಗಿರುತ್ತದೆ. ಹಿಂದಕ್ಕೆ ಜಾಸ್ತಿ ಹೋಗುತ್ತಿರುತ್ತದೆ. ಆಗಾಗ ಕಾಲು ಅಗಲಿಸಿಕೊಂಡು ಮರಿ ಹಾಕುವಂತೆ ಪ್ರಯತ್ನಿಸುತ್ತದೆ. ಇದನ್ನೆಲ್ಲ ಅದರ ಮಾವುತ ಹಾಗೂ ವೈದ್ಯರು ಗಮನಿಸಬೇಕಿತ್ತು. ಇಬ್ಬರ ನಡುವೆ ಸಮನ್ವಯದ ಕೊರತೆ ಇಲ್ಲಿ ಎದ್ದು ಕಾಣುತ್ತದೆ ಎಂದು ಹೇಳಿರುವ ಅವರು ಆನೆ ಬಿಡಾರ ಸೇರಿದಂತೆ ಅರಣ್ಯ ಇಲಾಖೆಯಲ್ಲಿ ಸಿವಿಲ್ ಕೆಲಸಕ್ಕೆ ಪ್ರಾಮುಖ್ಯತೆ ಕೊಟ್ಟಷ್ಟು ಪ್ರಾಣಿಗಳ ಸುರಕ್ಷತೆಗೆ ಗಮನ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ’ಪ್ರಜಾವಾಣಿ‘ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ ಅವರಿಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.
ಶಿವಮೊಗ್ಗದಲ್ಲಿ ಸೋಮವಾರ ತಡರಾತ್ರಿ ನೇತ್ರಾವತಿ ಆನೆ ಮರಿ ಹಾಕಿದ್ದು ಪುಟ್ಟ ಆನೆ ಮರಿಯ ನೋಟ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.