ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುದಾರ ಸ್ನೇಹಿ ಯೋಜನೆಗೆ ಒತ್ತು

ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಎಚ್.ಎಸ್. ಹೇಳಿಕೆ
Last Updated 7 ಆಗಸ್ಟ್ 2022, 7:08 IST
ಅಕ್ಷರ ಗಾತ್ರ

ಸಾಗರ: ಷೇರುದಾರ ಸ್ನೇಹಿ ಯೋಜನೆಗಳ ಜಾರಿಗೆ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ (ಮ್ಯಾಮ್ಕೋಸ್) ಒತ್ತು ನೀಡುತ್ತಾ ಬಂದಿದೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಎಚ್.ಎಸ್. ಹೇಳಿದರು.

ಇಲ್ಲಿನ ರಾಘವೇಶ್ವರ ಸಭಾಭವನದಲ್ಲಿ ಶನಿವಾರ ನಡೆದ ಮ್ಯಾಮ್ಕೋಸ್ ಷೇರುದಾರರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯು₹ 3.91 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷಕ್ಕಿಂತ
₹ 59.08 ಲಕ್ಷ ಹೆಚ್ಚಿನ ಲಾಭ ಗಳಿಸಿರುವ ಹೆಗ್ಗಳಿಕೆ ಸಂಸ್ಥೆಯದ್ದು.ಪ್ರಸ್ತುತ 28,733 ಸದಸ್ಯರನ್ನು ಸಂಸ್ಥೆ ಹೊಂದಿದೆ. ಸಂಸ್ಥೆಯ ಆರ್ಥಿಕ ಸ್ಥಿತಿ ಸದೃಢವಾಗಿದ್ದು ಲಾಭಾಂಶವನ್ನು ಷೇರುದಾರರಿಗೆ ವ್ಯವಸ್ಥಿತವಾಗಿ ವಿತರಣೆ ಮಾಡಲಾಗುತ್ತಿದೆ. ಸಂಸ್ಥೆ ನಿಂತ ನೀರಾಗಿರದೆ ಪ್ರತಿವರ್ಷ ಹೊಸ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಅಡಿಕೆ ಬೆಳೆ ಸಂರಕ್ಷಣೆ ಕುರಿತು ಹಾಗೂ ಸಂಸ್ಕರಣಾ ಯಂತ್ರಗಳ ಅನ್ವೇಷಣೆ ಮತ್ತು ಅಭಿವೃದ್ಧಿಗೆ ಮುಂದಾಗುವವರಿಗೆ ನೆರವು ನೀಡುವ ದೃಷ್ಟಿಯಿಂದ ಅಡಿಕೆ ಸಂಶೋಧನಾ ನಿಧಿಯನ್ನು ಸ್ಥಾಪಿಸಲಾಗಿದೆ. ಬೆಳಗಾರರಿಗೆ ತಾಂತ್ರಿಕವಾಗಿ ಸಲಹೆ, ನೆರವು ನೀಡುವವರಿಗೂ ಸಂಸ್ಥೆ ಪ್ರೋತ್ಸಾಹಿಸಲಿದೆ ಎಂದು ಹೇಳಿದರು.

ವಿದೇಶದಿಂದ ಭಾರತಕ್ಕೆ ಮತ್ತೊಮ್ಮೆ ಅಡಿಕೆ ಆಮದು ಆಗುವ ಸಾಧ್ಯತೆ ಇದೆ ಎಂಬ ಸುದ್ದಿಗಳಿವೆ. ಇದು ನಿಜವಾದರೆ ಅಡಿಕೆ ಧಾರಣೆ ಕುಸಿಯುತ್ತದೆ. ಹೀಗಾಗದಂತೆ ತಡೆಯಲು ಈ ಭಾಗದ ಸಹಕಾರಿ ಪ್ರಮುಖರ, ಜನಪ್ರತಿನಿಧಿಗಳ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಲಿದೆ ಎಂದುಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.

ಅಡಿಕೆ ಬೆಳೆಗಾರರಿಗೆ ಮಂಗನ ಕಾಟ ಶಾಪವಾಗಿ ಪರಿಣಮಿಸಿದೆ. ಈ ಹಿಂದೆ ಸರ್ಕಾರ ಮಂಕಿ ಪಾರ್ಕ್ ನಿರ್ಮಿಸಲು ಮುಂದಾಗಿದ್ದರೂ ಮಲೆನಾಡು ಭಾಗದ ಸ್ಥಳೀಯರ ವಿರೋಧದ ಕಾರಣಕ್ಕೆ ಅದು ನನೆಗುದಿಗೆ ಬಿದ್ದಿದೆ. ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಬಳಿ ಇರುವ ಸಿಂಹಧಾಮದ ಪಕ್ಕದಲ್ಲಿ ಮಂಕಿ ಪಾರ್ಕ್ ನಿರ್ಮಿಸುವ ಪ್ರಸ್ತಾಪವಿದ್ದು, ಅದಕ್ಕೆ ಚಾಲನೆ ದೊರಕಬೇಕಿದೆ ಎಂದು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ಮಹೇಶ್ ಎಚ್.ಎಸ್., ಶಾಸಕ ಎಚ್.ಹಾಲಪ್ಪ ಹರತಾಳು, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸಹಕಾರಿ ಎಚ್.ಎಸ್. ಮಂಜಪ್ಪ, ದೇವಾನಂದ ಆರ್. ಅವರನ್ನು ಸನ್ಮಾನಿಸಲಾಯಿತು.

ಮ್ಯಾಮ್ಕೋಸ್ ಸಿಇಒ ಆರ್. ರಾಘವೇಂದ್ರ, ನಿರ್ದೇಶಕರಾದ ಕೀರ್ತಿರಾಜ್ ಕಾನಳ್ಳಿ, ದಿನೇಶ್ ಬರದವಳ್ಳಿ, ಕೆ.ವಿ.ಕೃಷ್ಣಮೂರ್ತಿ, ಸುಬ್ರಮಣ್ಯ, ಭೀಮಣ್ಣ, ವಿರೂಪಾಕ್ಷಪ್ಪ, ರತ್ನಾಕರ್, ವಿಜಯಲಕ್ಷ್ಮಿ ರಾಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT