ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧದೊಂದಿಗೆ ವ್ಯಾಪಾರ ವಹಿವಾಟಿಗೆ ಅನುಮತಿ

ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳಿಗೆ ಪ್ರತ್ಯೇಕವಾಗಿ ಲಾಕ್‍ಡೌನ್ ಮಾರ್ಗಸೂಚಿ
Last Updated 21 ಜೂನ್ 2021, 3:18 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ಕಾರಣ ಜಿಲ್ಲೆಯಲ್ಲಿ ನಿರ್ಬಂಧಗೊಳಪಟ್ಟು ವ್ಯಾಪಾರ ವಹಿವಾಟು ಮಾಡಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಲಾಕ್‌ಡೌನ್‌ ಸಡಿಲಿಕೆ ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಶಿವಮೊಗ್ಗ ನಗರ ಹಾಗೂ ಭದ್ರಾವತಿ ನಗರಗಳಿಗೆ ಪ್ರತ್ಯೇಕವಾಗಿ ಲಾಕ್‍ಡೌನ್ ಮಾರ್ಗಸೂಚಿ ಹೊರಡಿಸಲಾಗಿದ್ದು, ಇನ್ನುಳಿದ ತಾಲ್ಲೂಕುಗಳಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಿದರು.

‘ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಕೊರೊನಾ ಪ್ರಮಾಣ ಶೇ 5ಕ್ಕಿಂತಲೂ ಕಡಿಮೆ ಇದ್ದರೂ, ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಈ ಕಾರಣ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಿ ವ್ಯಾಪಾರ ವಹಿವಾಟುಗಳಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದರು.

ಸಗಟು ತರಕಾರಿ ಮತ್ತು ದಿನಸಿ ವ್ಯಾಪಾರ, ಗಾಂಧಿಬಜಾರ್ ಸಗಟು ವ್ಯಾಪಾರಿಗಳಿಗೆ ಮಧ್ಯಾಹ್ನ 12ರವರೆಗೆ, ಸಿಮೆಂಟ್, ಸ್ಟೀಲ್, ಹಾರ್ಡ್‍ವೇರ್, ಫೋಟೊ ಸ್ಟುಡಿಯೊ, ಚಿನ್ನ ಗಿರವಿ ಅಂಗಡಿ, ಟೈಲರ್‌ಗಳಿಗೆ, ಬಂಗಾರ ಕೆಲಸ ಮಾಡುವವರು ಇತರೆ ಕ್ಷೇತ್ರದವರಿಗೆ ಮಧ್ಯಾಹ್ನ 2ರವರೆಗೆ ಅವಕಾಶ ನೀಡಲಾಗಿದೆ. ಬಟ್ಟೆ ವ್ಯಾಪಾರ ಮತ್ತು ಚಿನ್ನದ ವ್ಯಾಪಾರಕ್ಕೆ ಅವಕಾಶವಿಲ್ಲ. ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿದೆ. ಆದರೆ, ಬೀದಿ ಬದಿ ಆಹಾರ ಉತ್ಪನ್ನ ಮಾರಾಟಕ್ಕೆ ಅನುಮತಿ ಇಲ್ಲ. ವಾಕಿಂಗ್, ಯೋಗ ಇತ್ಯಾದಿ ವ್ಯಾಯಾಮ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಗುಂಪು ಸೇರಿದರೆ ಮಾಲೀಕರ ವಿರುದ್ಧ ಕ್ರಮ: ‘ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದ್ದರೂ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಅಂಗಡಿಗಳ ಮುಂದೆ ಅಂತರವನ್ನು ಜನರು ಪಾಲಿಸದಿದ್ದರೆ ಆ ಅಂಗಡಿ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅಂಗಡಿಗಳ ಮುಂದೆ ಜನಜಂಗುಳಿ ಸೇರಿದ್ದರೆ ಅಂತಹ ಅಂಗಡಿಗಳನ್ನು ಮುಚ್ಚಿಸಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.

ಲಸಿಕಾ ಅಭಿಯಾನ: ಜಿಲ್ಲೆಯಾದ್ಯಂತ ಸೋಮವಾರದಿಂದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಅಭಿಯಾನ ಆಯೋಜಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಮಾತ್ರವಲ್ಲದೆ, 18ರಿಂದ 44ವರ್ಷದ ಒಳಗಿನವರಿಗೂ ಲಸಿಕೆ ನೀಡಲು ಸಿದ್ಧತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಇದ್ದರು.

ಯಾವುದಕ್ಕೆ ಅವಕಾಶ, ಯಾವುದಕ್ಕೆ ನಿರ್ಬಂಧ

ದಿನಸಿ ಅಂಗಡಿಗಳು: ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ

ಛಾಯಾಗ್ರಾಹಕರ ವೃತ್ತಿ ಅಥವಾ ಸ್ಟುಡಿಯೊ: 10ರಿಂದ 2ಗಂಟೆವರೆಗೆ

ಸಿಮೆಂಟ್ ಹಾಗೂ ಸ್ಟೀಲ್: 10ರಿಂದ 2

ಗಾಂಧಿಬಜಾರ್ ವ್ಯಾಪಾರ ವಹಿವಾಟು: 6ರಿಂದ 12

ಫುಟ್‌ಪಾತ್ ವ್ಯಾಪಾರಿಗಳಿಗೆ ತಿಂಡಿ ಹೊರತುಪಡಿಸಿ ಉಳಿದ ವ್ಯಾಪಾರಕ್ಕೆ ಅವಕಾಶ

ಟೈಲರಿಂಗ್: ಬಟ್ಟೆ ಹೊಲಿಯುವುದಕ್ಕೆ ಮಾತ್ರ ಅವಕಾಶ

ಗಿರವಿ ವರ್ತಕರಿಗೆ ಅವಕಾಶ: ಮಾರಾಟ ಮಾಡುವ ಹಾಗಿಲ್ಲ (6ರಿಂದ 12)

ಹಾರ್ಡ್‌ವೇರ್ ಅಂಗಡಿಗಳಿಗೆ ಮಧ್ಯಾಹ್ನ 2ರವರೆಗೆ ಅವಕಾಶ

ಕಲ್ಯಾಣ ಮಂದಿರ ಹಾಗೂ ಸಮುದಾಯ ಭವನಗಳಿಗೆ ಅವಕಾಶವಿಲ್ಲ

ಬಟ್ಟೆ ವ್ಯಾಪಾರ ಮತ್ತು ಚಿನ್ನದ ವ್ಯಾಪಾರಕ್ಕೆ ಅವಕಾಶವಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT