ಭಾನುವಾರ, ಆಗಸ್ಟ್ 1, 2021
21 °C
ಆಹಾರ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ

ಬಡವರಿಗೆ ನವೆಂಬರ್‌ವರೆಗೂ ಸರ್ಕಾರದ ನೆರವು: ಸಚಿವ ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಈ ವರ್ಷದ ನವೆಂಬರ್‌ವರೆಗೆ ಉಚಿತ ಪಡಿತರ ಸೇರಿದಂತೆ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರ ಪಾಲಿಕೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿವಮೊಗ್ಗ ನಗರ ಪಾಲಿಕೆ ₹ 2.10 ಕೋಟಿ ವೆಚ್ಚದಲ್ಲಿ 46,460 ಆಹಾರ ಕಿಟ್ ವಿತರಿಸುವ ಕಾರ್ಯ ಕೈಗೊಂಡಿದೆ. ಪ್ರತಿ ವಾರ್ಡ್‌ನಲ್ಲೂ ಒಂದು ಸಾವಿರಕ್ಕೂ ಅಧಿಕ ಕಿಟ್ ವಿತರಿಸಲಾಗುತ್ತಿದೆ. ಪ್ರತಿಯೊಬ್ಬ ಅರ್ಹ ವ್ಯಕ್ತಿಯ ಮನೆ ಬಾಗಿಲಿಗೂ ತಲುಪಿಸಲಾಗುತ್ತದೆ. ನಗರ ಪಾಲಿಕೆ ಕೈಗೊಂಡಿರುವ ಈ ಕಾರ್ಯ ಇತರ ಸ್ಥಳೀಯ ಸಂಸ್ಥೆಗಳಿಗೂ ಮಾದರಿ ಎಂದರು.

ಈಗಾಗಲೇ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ಪ್ರಜೆಗೂ ಉಚಿತ ಲಸಿಕೆ ನೀಡುತ್ತಿದೆ. ರಾಜ್ಯದಲ್ಲಿ ಒಂದೇ ದಿನ ಲಕ್ಷಾಂತರ ಜನರಿಗೆ ಲಸಿಕೆ ಹಾಕಲಾಗಿದೆ. ಇದೇ ರೀತಿ ನವೆಂಬರ್‌ವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಉಚಿತ ಪಡಿತರ ಪೂರೈಕೆ ಮಾಡುತ್ತಿದೆ. ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ಸದಸ್ಯರಿಗೆ ₹ 1 ಲಕ್ಷ ಪರಿಹಾರ ನೀಡುತ್ತಿರುವುದು ದೇಶದಲ್ಲೇ ಪ್ರಥಮ ಎಂದು ಬಣ್ಣಿಸಿದರು.

ಕೋವಿಡ್ ಎರಡನೇ ಅಲೆ ಎದುರಿಸಲು ಸರ್ಕಾರದ ಜತೆ ಹಲವು ಸಂಘ ಸಂಸ್ಥೆಗಳು, ಮಠಗಳು ಮುಂದೆ ಬಂದಿವೆ. ಸಂಕಷ್ಟದಲ್ಲಿರುವ ಜನರಿಗೆ ನೆರವಿನ ಹಸ್ತ ಚಾಚಿವೆ. ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಮೂರನೇ ಅಲೆ ಎದುರಿಸಲು ಎಲ್ಲಾ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್‌ಗೆ ಯಾರೂ ಹೆದರುವ ಅಗತ್ಯವಿಲ್ಲ. ಮಾಸ್ಕ್ ಧರಿಸುವುದು, ಪ್ರತಿಯೊಬ್ಬರೂ ಅಂತರ ಕಾಯ್ದುಕೊಂಡು ನಿಯಮಗಳನ್ನು ಪಾಲಿಸಿದರೆ ಸೋಂಕು ಹರಡುವುದನ್ನು ತಡೆಯಬಹುದು ಎಂದು ಸಲಹೆ ನೀಡಿದರು.

ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆರ್.ಪ್ರಸನ್ನ ಕುಮಾರ್, ಎಸ್‌.ರುದ್ರೇಗೌಡ, ಮೇಯರ್ ಸುನಿತಾ ಅಣ್ಣಪ್ಪ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು