ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಜಿಲ್ಲೆಗಳ ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆ

ಶಿವಮೊಗ್ಗದಲ್ಲಿ 100 ಹಾಸಿಗಳ ಸೌಲಭ್ಯ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ
Last Updated 23 ಏಪ್ರಿಲ್ 2021, 13:51 IST
ಅಕ್ಷರ ಗಾತ್ರ

ಶಿವಮೊಗ್ಗ: ಇಎಸ್‌ಐ ಆಸ್ಪತ್ರೆ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಕೇಂದ್ರ ಸರ್ಕಾರ ರಾಜ್ಯದ ಕಾರ್ಮಿಕರಿಗೆ ನೀಡಿದೆ. ಶಿವಮೊಗ್ಗದಲ್ಲಿ ನಿರ್ಮಾಣವಾಗುವ ಆಸ್ಪತ್ರೆಯ ಸೌಲಭ್ಯ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ ಕಾರ್ಮಿಕರಿಗೂ ದೊರಕಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರ ಪಾಲಿಕೆ ವ್ಯಾಪ್ತಿಯ ರಾಗಿಗುಡ್ಡದಲ್ಲಿ ಶುಕ್ರವಾರ 100 ಹಾಸಿಗೆ ಸಾಮರ್ಥ್ಯದ ಇಎಸ್‌ಐ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾರ್ಮಿಕರಿಗೆ ಕೊಟ್ಟ ಮಾತಿನಂತೆ ಇಎಸ್‌ಐ ಕಟ್ಟಡ ನಿರ್ಮಾಣ ಆರಂಭವಾಗುತ್ತಿದೆ. ಬಹುದಿನಗಳಿಂದ ಸ್ಥಗಿತವಾಗಿದ್ದ ಯೋಜನೆ ಫಲಪ್ರದವಾಗುತ್ತಿದೆ. ಕಾರ್ಮಿಕು ಹಾಗೂ ಅವರ ಅವಲಂಬಿತ ಕುಟುಂಬಗಳ ಸದಸ್ಯರ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ, ಕೊರೊನಾ ಸಂಕಷ್ಟ ಸೇರಿದಂತೆ ಹಲವು ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಕಟ್ಟಡ ನಿರ್ಮಾಣ ಕಾಮಗಾರಿಗೆ ಕೊನೆಗೂ ಚಾಲನೆ ಸಿಕ್ಕಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ನಗರ ವ್ಯಾಪ್ತಿಯ ವಿಶಾಲ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿರುವುದು ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದರು.

ಜಿಲ್ಲೆಯ ಕೈಗಾರಿಕೋದ್ಯಮಿಗಳು, ಉದ್ಯೋಗದಾತರು, ಕಾರ್ಮಿಕರು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಈ ಸೌಲಭ್ಯದ ಲಾಭ ಪಡೆದುಕೊಳ್ಳಬಹುದು. ಜಿಲ್ಲೆಯಲ್ಲಿ ಶೀಘ್ರ ಬೃಹತ್ ಪ್ರಮಾಣದ ಐದು ಕಾರ್ಖಾನೆಗಳು ಆರಂಭಗೊಳ್ಳುವ ನಿರೀಕ್ಷೆ ಇದೆ. ಈಗಾಗಲೆ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳಿಗೆ ಪುನಃಶ್ಚೇತನ ನೀಡಲು ಕ್ರಮ ವಹಿಸಲಾಗಿದೆ ಎಂದು ವಿವರ ನೀಡಿದರು.

ಜಿಲ್ಲೆಯ ಸರ್ವಾಂಗೀಣ ವಿಕಾಸದ ದೃಷ್ಟಿಯಿಂದ ಇನ್ನಷ್ಟು ಮಹತ್ವದ ಯೋಜನೆಗಳಿಗೆ ಮಂಜೂರಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗಾಗಲೇ ಮಂಜೂರಾದ, ಪ್ರಗತಿ ಹಂತದಲ್ಲಿರುವ ಸಿಗಂದೂರು ಸೇತುವೆ, ಶಿವಮೊಗ್ಗ-ತುಮಕೂರು ಚತುಷ್ಟಥ ರಸ್ತೆ, ಸೇತುವೆ ಕಾಮಗಾರಿಗಳು ಶಿವಮೊಗ್ಗದ ಇತಿಹಾಸದಲ್ಲಿ ಮೈಲುಗಲ್ಲಾಗಿ ಉಳಿಯಲಿವೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್‌.ರುದ್ರೇಗೌಡ್ರು, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕನಾಯ್ಕ್, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಸ್‌.ಜ್ಯೋತಿಪ್ರಕಾಶ್, ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್‌.ದತ್ತಾತ್ರಿ, ಮುಖಂಡರಾದ ಮನೋಜ್‌ಶೇಟ್, ಬಿ.ಆರ್.ವಾಸುದೇವ್, ಎಂಜಿನಿಯರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT