ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ ನೇಮಕಾತಿ; ನಕಲಿ ಜಾಹೀರಾತು

ಸಾರ್ವಜನಿಕರು ಎಚ್ಚರ ವಹಿಸುವಂತೆ ಜಿಲ್ಲಾಡಳಿತದ ಸೂಚನೆ
Last Updated 3 ಫೆಬ್ರುವರಿ 2023, 6:21 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಸೋಗಾನೆಯ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗುತ್ತಿದ್ದಂತೆಯೇ ಅಲ್ಲಿ ವಿವಿಧ ಉದ್ಯೋಗಗಳಿಗೆ ನೇಮಕಾತಿಗೆ ಸಂಬಂಧಿಸಿದ ನಕಲಿ ಜಾಹೀರಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜಾಹೀರಾತು ನಂಬಿ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ನೂರಾರು ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ.

‘ಸ್ನೇಹಿತರ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಈ ಜಾಹೀರಾತು ಬಂದಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿರುವ ಮಗ ಅದರಲ್ಲಿರುವ ಇ–ಮೇಲ್ ಐಡಿಗೆ ಅರ್ಜಿ ಕಳುಹಿಸಿದ್ದಾನೆ. ಅವನ ಸ್ನೇಹಿತರೂ ಅರ್ಜಿ ಹಾಕಿದ್ದಾರೆ. ನಮ್ಮ
ಬಡಾವಣೆಯ ಹತ್ತಾರು ಯುವಜನರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಏನಾದರೂ ಸತ್ಯಾಸತ್ಯತೆ ಇದೆಯೇ’ ಎಂದು ಪ್ರಶ್ನಿಸಿದ ಶಿವಮೊಗ್ಗದ ಜೆ.ಎಚ್.ಪಟೇಲ್ ಬಡಾವಣೆ ನಿವಾಸಿ, ನಿವೃತ್ತ ಉಪ ತಹಶೀಲ್ದಾರ್ ಶಿವರುದ್ರಪ್ಪ, ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದ್ದ ಜಾಹೀರಾತು ಪ್ರತಿಯನ್ನು ‘ಪ್ರಜಾವಾಣಿ’ಗೆ ಕಳುಹಿಸಿಕೊಟ್ಟರು.

‘ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲಿ ಕೆಲಸ ಮಾಡಲು ಏರ್ ಹೋಸ್ಟೆಸ್, ಬಿಸಿನೆಸ್ ಡೆವಲೆಪ್‌ಮೆಂಟ್ ಮ್ಯಾನೆಜರ್, ಏರ್‌ಲೈನ್ ಎಕ್ಸಿಕ್ಯುಟಿವ್, ಸೆಕ್ಯೂರಿಟಿ ಗಾರ್ಡ್, ಹೆಲ್ಪರ್ಸ್‌, ಕ್ಲೀನರ್ಸ್, ಟೀಂ ಮೆಂಬರ್ಸ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಡಿಪ್ಲೊಮಾ ಓದಿದ 40 ವರ್ಷ ಒಳಗಿನ ಯುವಕ– ಯುವತಿಯರು ಬೇಕಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. shimogaairporthiring@gmail.com ಎಂಬ ಐಡಿ ನೀಡಿ ಅದಕ್ಕೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

ನಕಲಿ ಪ್ರಕಟಣೆ: ‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ನಕಲಿ ಜಾಹೀರಾತು. ಅದು ಅಧಿಕೃತ ಅಲ್ಲ. ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಪ್ರಕಟಣೆ ಇನ್ನೂ ಹೊರಡಿಸಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಪತ್ರಿಕೆಗೆ ಪ್ರತಿಕ್ರಿಯಿಸಿದರು.

***

‘ಅದೊಂದು ಮೋಸದ ಜಾಹೀರಾತು’

‘ವಿಮಾನ ನಿಲ್ದಾಣಕ್ಕೆ ಯಾವುದೇ ನೇಮಕಾತಿ ನಡೆಯುತ್ತಿಲ್ಲ. ಅದು ಸಂಪೂರ್ಣ ನಕಲಿ. ಮೋಸದ ಜಾಹೀರಾತು. ಜನರಿಗೆ ಮೋಸ ಆಗಬಾರದು’ ಎಂದು ವಿಮಾನ ನಿಲ್ದಾಣದ ತಾಂತ್ರಿಕ ಸಲಹೆಗಾರ ಬ್ರಿಗೇಡಿಯರ್ ಡಿ.ಎಂ.ಪೂರ್ವೀಮಠ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲು ವಿಮಾನ ನಿಲ್ದಾಣದ ಉದ್ಘಾಟನೆ, ನಂತರ ಲೈಸೆನ್ಸಿಂಗ್ ಆಗದೇ ಯಾವುದೇ ನೇಮಕಾತಿ ನಡೆಯುವುದಿಲ್ಲ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದವರು (ಎಎಐ) ತಾಂತ್ರಿಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲಿದ್ದಾರೆ. ವಿಮಾನಗಳ ಹಾರಾಟ ಆರಂಭವಾದ ನಂತರ ಏರ್‌ಲೈನ್‌ ಆಪರೇಟರ್ಸ್ ಸ್ಥಳೀಯವಾಗಿ ನೇಮಕಾತಿ ಮಾಡಿಕೊಳ್ಳಲಿದ್ದಾರೆ ಎಂದರು.

***

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉದ್ಯೋಗಿಗಳು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಕಲಿ ಜಾಹೀರಾತು ಹರಿದಾಡುತ್ತಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕು.

- ಜಿ.ಕೆ.ಮಿಥುನ್‌ಕುಮಾರ್, ಶಿವಮೊಗ್ಗ ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT