ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪ್ಪನ್‌ಪೇಟೆ: ಕೃಷಿಕ ವಿಜೇಂದ್ರಭಟ್‌ ಅವರೊಳಗೊಬ್ಬ ಕಲಾವಿದ

ಕಾಳು ಮೆಣಸು, ಹಿಪ್ಪನೇರಳೆ, ವಿವಿಧ ಬಗೆಯ ಆದಾಯ ತರುವ ಬೆಳೆ
Last Updated 6 ಏಪ್ರಿಲ್ 2022, 5:31 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಇವರು ಮೂಲತಃ ಕೃಷಿಕರಾದರೂ ಉತ್ತಮ ಕಲಾವಿದ. ಚಿಕ್ಕಜೇನಿಯ ವಿಜೇಂದ್ರ ಭಟ್‌ ಅವರು ಶೂನ್ಯ ಬಂಡವಾಳದ ಕೃಷಿ ಪದ್ಧತಿ ಮೂಲಕ ಮಾದರಿ ಜೀವನ ಸಾಗಿಸುತ್ತಿದ್ದಾರೆ.

ತರಹೇವಾರಿ ಆಲಂಕಾರಿಕ ಹೂವಿನ ಗಿಡಗಳು, ವಿವಿಧ ಜಾತಿಯ ಮಾವು, ಹಲಸು, ಆಡಿಕೆ, ಕಿತ್ತಲೆ, ಲಿಂಬೆ, ಮೂಸಂಬಿ ತಳಿಗಳ ಕಸಿಕಟ್ಟಿ ಮಾರಾಟ ಮಾಡುತ್ತಿದ್ದಾರೆ ವಿಜೇಂದ್ರ ಭಟ್‌.

ರಿಪ್ಪನ್‌ಪೇಟೆ – ಹೊಸನಗರ ಮಾರ್ಗದ ಮಧ್ಯೆ ಸಿಗುವ ಚಿಕ್ಕಜೇನಿಯ ಮುಖ್ಯ ರಸ್ತೆಯಿಂದ 1 ಕಿ.ಮಿ. ದೂರದಲ್ಲಿ ಇರುವ ಕಾಳಿಗುಂಡಿ ಗ್ರಾಮದಲ್ಲಿ ಇವರ ವಾಸ. ಎರಡು ದಶಕಗಳಿಂದ ಇವರ ತೋಟದಲ್ಲಿ ನೆಲದಲ್ಲಿ ಬೆಳೆಯುವ ಬುಷ್ ಪೇಪ್ಪರ್ (ಕಾಳುಮೆಣಸು), ಅರೇಬಿಕ್, ರೊಟ್ಲಾಸ್, ಕಾವೇರಿ ಕಾಫಿ, ನಂದಿ ಮರಕ್ಕೆ ಹಬ್ಬಿಸಿದ ಕಾಳು ಮೆಣಸು, ಹಿಪ್ಪನೇರಳೆ, ಬಾಳೆ, ವೆನಿಲ್ಲಾ, ಏಲಕ್ಕಿ ಸೇರಿ ವರ್ಷಾವಧಿ ಆದಾಯ ತರುವ ಬೆಳೆಗಳನ್ನು ಕಾಣಬಹುದು.

ವಿಜೇಂದ್ರ ಅವರೇ ನಿರ್ಮಿಸಿದ ನರ್ಸರಿಯಲ್ಲಿ ಉಪ್ಪಿನಕಾಯಿಗೆ ಬಳಸುವ 30ಕ್ಕೂ ಅಧಿಕ ಜಾತಿಯ ಅಪ್ಪೆ, ಜೀರಿಗೆ ಮಾವಿನ ಮಿಡಿಯ ತಳಿಗಳು, ಅಂತೋರಿಯಂ ವಿವಿಧ ಕಸಿ ಗಿಡಗಳು ವರ್ಷವಿಡಿ ಮಾರಾಟಕ್ಕೆ ಸಿದ್ಧವಾಗಿವೆ. ಬಹು ಬೇಡಿಕೆಯ ಮಾಡಹಾಗಲ ಕಾಯಿ ಚಪ್ಪರ ಹಾಕಿದ್ದಾರೆ. ಇದರಲ್ಲಿ ಕಾಯಿ ಬಿಡಲು ಪ್ರಾರಂಭವಾಗಿದೆ. ಒಂದು ಕೆ.ಜಿ ₹140ರಂತೆ ಮಾರಾಟವಾಗುತ್ತಿದೆ.

‘ರೈತ ಬೆಳೆದ ಯಾವುದೇ ಬೆಳೆಗೆ ದಿಢೀರ್‌ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಸೌಲಭ್ಯವಿಲ್ಲ. ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ದಲ್ಲಾಳಿ ಶುಲ್ಕರಹಿತ ಉತ್ತಮ ಧಾರಣೆ ರೈತರಿಗೆ ಸಿಗಬೇಕು. ರೈತರ ಉತ್ಪನ್ನಗಳನ್ನು ಕೊಳ್ಳುವ ಮತ್ತು ನೇರ ಹಣ ಸಂದಾಯ ಮಾಡುವ ಕೃಷಿ ಉತ್ಪನ್ನ ಮಾರುಕಟ್ಟೆ ಇಂದಿನ ಅಗತ್ಯ ಎನ್ನುತ್ತಾರೆ’ ವಿಜೇಂದ್ರ ಭಟ್.

‘ಪತ್ನಿ, ಮಗಳು ಇರುವ ಚಿಕ್ಕ ಕುಟುಂಬ ನಮ್ಮದು. ನೈಸರ್ಗಿಕ ಕೃಷಿಯಿಂದ ಬರುವ ಆದಾಯವೇ ಜೀವನಕ್ಕೆ ಸಾಕು’ ಎನ್ನುತ್ತಾರೆ. ವಿಜೇಂದ್ರ ಭಟ್ ಅವರ ಸಂಪರ್ಕಕ್ಕೆ 80882 47204.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT