ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೂರು ಕೆರೆ ಒತ್ತುವರಿ ತೆರವಿಗೆ ರೈತರ ಆಗ್ರಹ

Last Updated 28 ಜುಲೈ 2022, 4:36 IST
ಅಕ್ಷರ ಗಾತ್ರ

ಆನಂದಪುರ: ಹಲವು ರೈತರಿಗೆ ಅನುಕೂಲವಾಗಿರುವ ಕಣ್ಣೂರು ಗ್ರಾಮದಲ್ಲಿರುವ ಹುರಳಿ ಕೆರೆ ಒತ್ತುವರಿಯಾಗಿದ್ದು, ತೆರವಿಗೆ ಕ್ರಮ ಕೈಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕೆರೆ 7.31 ಎಕರೆ ವಿಸ್ತೀರ್ಣ ಹೊಂದಿದ್ದು, 6.7 ಎಕರೆ ಒತ್ತುವರಿಯಾಗಿದೆ. ಒತ್ತುವರಿ ಮಾಡಿಕೊಂಡಿರುವವರ ಬಳಿ ಜಮೀನು ಇದ್ದರೂ ಕೆರೆ ಒತ್ತುವರಿ ಬಿಡಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಕೆಲ ಜನಪ್ರತಿನಿಧಿಗಳ ಬೆಂಬಲ ಇದೆ ಎಂದು ರೈತರು ಆರೋಪಿಸಿದರು.

ಕೆರೆಯ ಕೆಳಭಾಗದಲ್ಲಿ ನೂರಾರು ರೈತರ ಸಾವಿರಾರು ಎಕರೆ ಕೃಷಿ ಭೂಮಿ ಇದೆ. ಮಳೆ ಉತ್ತಮವಾಗದೆ ಇರುವ ಸಂದರ್ಭದಲ್ಲಿ ಕೃಷಿ ಮಾಡಲು, ಹಸುಗಳಿಗೆ ನೀರು ಕುಡಿಯಲು ಕೆರೆ ನೀರಿನ ಅಗತ್ಯವಿದೆ. ಒತ್ತುವರಿ ಮಾಡಿರುವ ರೈತರು ಹಲವಾರು ವರ್ಷಗಳಿಂದ ಗಲಾಟೆ ಮಾಡುತ್ತಲೇ ಕೃಷಿ ಮಾಡುತ್ತಾ ಬಂದಿದ್ದಾರೆ ಎಂದು ರೈತರಾದ ಸತ್ಯನಾರಾಯಣ ಆರೋಪಿಸಿದರು.

‘ತೆರವು ಮಾಡಲು ಗ್ರಾಮ ಪಂಚಾಯಿತಿ, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ 40 ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಊರಿಗೆ ಇರುವುದು ಒಂದೇ ಕೆರೆ. ಕೂಡಲೇ ಒತ್ತುವರಿ ತೆರವುಗೊಳಿಸಿ ಕೃಷಿಗೆ ಹಾಗೂ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ಬೆಳೆ ತೆಗೆಯಲು ಅವಕಾಶ ನೀಡಿ: ‘ಕೆರೆಯ ವಿಸ್ತೀರ್ಣದ ಕುರಿತು ಸರಿಯಾಗಿ ಸರ್ವೆ ಕಾರ್ಯ ನಡೆದಿಲ್ಲ. 70 ವರ್ಷಗಳಿಂದ ನಾವು ಕೃಷಿ ಮಾಡುತ್ತಾ ಬಂದಿದ್ದೇವೆ. ಈ ಭೂಮಿಯಿಂದ ನಮ್ಮ ಜೀವನ ನಡೆಯುತ್ತಿದೆ. ಈ ಬಾರಿ ಈಗಾಗಲೇ ನಾಟಿ ಮಾಡಲಾಗಿದೆ. ಬೆಳೆ ತೆಗೆಯಲು ಅವಕಾಶ ನೀಡಿ. ನಂತರ ಒತ್ತುವರಿ ತೆರವಿಗೆ ನಮ್ಮ ಅಭ್ಯಂತರವಿಲ್ಲ’ ಎಂದು ರೈತರಾದ ಯೋಗೇಂದ್ರಪ್ಪ ಹೇಳಿದರು.

ಕಂದಾಯ ನಿರೀಕ್ಷಕ ಕವಿರಾಜ್, ಗ್ರಾಮ ಲೆಕ್ಕಿಗ ಹುಸೇನ್ ಹಾಗೂ ರೈತರು ಇದ್ದರು.

ಸರ್ಕಾರದ ಆದೇಶದಂತೆ ತೆರವು

‘ಸರ್ಕಾರ, ತಹಶೀಲ್ದಾರ್ ಆದೇಶದಂತೆ ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗಿನ ಕೆರೆ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ. ಈಗಾಗಲೇ ನರಸೀಪುರ, ಬೈರಾಪುರ, ಹಿರೆಹಾರಕ ಹಾಗೂ ತಳಗೇರಿ ಗ್ರಾಮಗಳಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಲಾಗಿದೆ. ಕಣ್ಣೂರಿನ ಹುರಳಿ ಕೆರೆಯ 6.7 ಎಕರೆ ಒತ್ತುವರಿಯಾಗಿದೆ. ಒತ್ತುವರಿ ಮಾಡಿಕೊಂಡ ರೈತರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಈ ಬಾರಿ ಬೆಳೆ ತೆಗೆದ ನಂತರ ಒತ್ತುವರಿ ತೆರವು ಮಾಡಲಾಗುವುದು. ಇದಕ್ಕೆ ರೈತರು ಒಪ್ಪಿಕೊಂಡಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ದಾಸನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT