ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಕೃಷಿ ಕಾಯ್ದೆ, ಟಿಕಾಯತ್ ಪ್ರಕರಣದ ವಿರುದ್ಧ ರೈತರ ಆಕ್ರೋಶ

ವಿವಾದಿತ ಕಾಯ್ದೆಯ ಪ್ರತಿಗಳಿಗೆ ಬೆಂಕಿ, ರಸ್ತೆಯಲ್ಲೇ ರೈತರ ಪ್ರತಿಭಟನಾ ಸಭೆ
Last Updated 26 ಮಾರ್ಚ್ 2021, 14:46 IST
ಅಕ್ಷರ ಗಾತ್ರ

ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಟಿಕಾಯತ್ ವಿರುದ್ಧ ದಾಖಲಿಸಿರುವ ಪ್ರಕರಣ ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ, ಐಕ್ಯ ಹೋರಾಟ ಸಮಿತಿ, ರೈತ ಸಂಘ, ಹಸಿರು ಸೇನೆ, ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದ ರಸ್ತೆಯಲ್ಲೇ ಪ್ರತಿಭಟನಾ ಸಭೆ ನಡೆಸಿದರು. ರೈತ ವಿರೋಧಿ ಕೃಷಿ ಕಾಯ್ದೆ ಪ್ರತಿಗಳನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಎಚ್.ಆರ್.ಬಸವರಾಜಪ್ಪ, ದಕ್ಷಿಣ ಭಾರತದಲ್ಲಿ ರೈತ ಚಳವಳಿ ಬಲಗೊಳುತ್ತಿದೆ. ಸರ್ಕಾರ ಪ್ರತಿಭಟನಾನಿರತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕಾಯ್ದೆ ವಾಪಸ್ ತೆಗೆದುಕೊಳ್ಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಮಾರ್ಚ್‌ 20ರಂದು ಶಿವಮೊಗ್ಗದಲ್ಲಿ ನಡೆದ ರೈತರ ಮಹಾ ಪಂಚಾಯತ್‌ನಲ್ಲಿ ಭಾಗವಹಿಸಿದ್ದ ರಾಕೇಶ್ ಟಿಕಾಯತ್ ವಿರುದ್ದ ಪೊಲಿಸರೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರು ಕೊಲೆ ಮಾಡಿ, ಕೈಕಾಲು ಕಡಿಯಿರಿ, ಬೆಂಕಿ ಹಚ್ಚಿ ಎಂದಿಲ್ಲ. ಯಾವ ಉದ್ರೇಕಕಾರಿ ಭಾಷಣವನ್ನೂ ಮಾಡಿಲ್ಲ. ಪೊಲೀಸರು ಬಿಜೆಪಿ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲ ಕೆ.ಪಿ.ಶ್ರೀಪಾಲ್‌, ಮಾತನಾಡಿದ ಎಲ್ಲರ ಮೇಲೂ ಪ್ರಕರಣ ದಾಖಲಿಸಿದ್ದರೆ ಇಂದು ಜೈಲಿನಲ್ಲಿ ಇರಬೇಕಿತ್ತು. ಕೈ ಕಾಲು ಕಡಿಯಿರಿ ಎಂದ ರಾಜಕಾರಣಿಗಳನ್ನು ಬಿಟ್ಟಿದ್ದಾರೆ. ಪ್ರತಾಪಸಿಂಹ, ಈಶ್ವರಪ್ಪ, ಅನಂತ್ ಕುಮಾರ್ ಹೆಗಡೆ ಪ್ರಚೋದನಕಾರಿ ಹೇಳಿಕೆ ನೀಡಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದ್ದಾರೆ. ಅವರೆಲ್ಲರನ್ನು ಬಿಟ್ಟು ರೈತರ ಸಮಸ್ಯೆಗಳನ್ನು ಹೇಳಲು ಬಂದವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ನಾಚಿಗೇಡಿನ ವಿಷಯ ಎಂದರು.

ನೆಹರೂ ಕ್ರೀಡಾಂಗಣದಲ್ಲಿ ರೈತ ಮಹಾ ಪಂಚಾಯತ್ ನಡೆಸಲು ಅನುಮತಿ ಕೇಳಿದ್ದೆವು. ಆದರೆ, ಇಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಬಿಟ್ಟು ಬೇರೆ ಯಾವುದಕ್ಕೂ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದರು. ನಾಳೆ ನಡೆಯುವ ಚಕ್ರವರ್ತಿ ಸೂಲಿಬೆಲೆಯ ಉಪನ್ಯಾಸಕ್ಕೆ ಹೇಗೆ ಅನುಮತಿ ಕೊಟ್ಟರು? ಅಲ್ಲಿ ಕಾರ್ಯಕ್ರಮವಾಗಬಾರದು ಎಂದು ತಾಕೀತು ಮಾಡಿದರು.

ಕೆ.ಎಲ್.ಅಶೋಕ್, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಬಿಜೆಪಿ ಸರ್ಕಾರ ಟಿಕಾಯತ್‌ ಮೇಲಿನ ಪ್ರಕರಣ ವಾಪಸ್‌ ಪಡೆಯಬೇಕು. ಬೆದರಿಸುವ ಮೂಲಕ ಹೋರಾಟ ಬಗ್ಗು ಬಡಿಯುತ್ತೇವೆ ಎಂಬ ಭ್ರಮೆ ಸಲ್ಲದು. ರಾಕೇಶ್ ಟಿಕಾಯತ್ ಇಡೀ ಭಾರತದ ರೈತರ ಕಣ್ಮಣಿ. ಅವರ ಕಣ್ಣಿನಿಂದ ಒಂದು ತೊಟ್ಟು ಹನಿ ಹೊರ ಬಂದರೂ ಭಾರತದ ರೈತರು ಸಹಿಸುವುದಿಲ್ಲ. ಕಾಡ್ಗಿಚ್ಚಿನಂತೆ ಹೋರಾಟ ಹಬ್ಬುತ್ತದೆ ಎಂದು ಎಚ್ಚರಿಸಿದರು.

ಪ್ರಕರಣ ವಾಪಸ್‌ ಪಡೆಯದಿದ್ದರೆ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತೇವೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಇದು ರಾಜಕೀಯವಾಗಿ ಅಗ್ನಿ ಪರೀಕ್ಷೆ ಎಂದರು.

ಮುಖಂಡರಾದ ಎಂ.ಶ್ರೀಕಾಂತ್, ಎನ್.ರಮೇಶ್, ಜಿ.ಪಲ್ಲವಿ, ಎಚ್.ಸಿ.ಯೋಗೀಶ್, ಆರ್.ಎಂ.ಮಂಜುನಾಥ ಗೌಡ, ಬಿ.ಎ.ರಮೇಶ್ ಹೆಗ್ಡೆ, ನಾಗರಾಜ್ ಕಂಕಾರಿ, ಎಚ್.ಟಿ.ಹಾಲೇಶಪ್ಪ, ಪಂಡಿತ್‌ ವಿ ವಿಶ್ವನಾಥ್ (ಕಾಶಿ), ಜಾರ್ಜ್, ವಸಂತ್‌ಕುಮಾರ್, ಎಚ್‌.ಫಾಲಾಕ್ಷಿ, ಮಂಜುನಾಥ್, ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT