ಮಂಗಳವಾರ, ಜೂನ್ 28, 2022
23 °C
ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಆಕ್ರೋಶ

ಅಧಿಕಾರಿಗಳ ವಿಳಂಬ ನೀತಿ ಖಂಡಿಸಿ ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳೆಹೊನ್ನೂರು: ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಜನರ ಕೆಲಸ ಮಾಡಿಕೊಡಲು ವಿನಾ ಕಾರಣ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಡಣಾಯಕಪುರ ಗ್ರಾಮಸ್ಥರು ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಿದ ನಂತರ ಪಂಚಾಯಿತಿ ವ್ಯಾಪ್ತಿಗೆ ಡಣಾಯಕಪುರ, ಎಮ್ಮೆಹಟ್ಟಿ, ಹೊಳೆಭೈರನಹಳ್ಳಿ, ಜಂಬರಘಟ್ಟ, ಕೆರೆಬೀರನಹಳ್ಳಿ ಹಾಗೂ ಮೂಡಲವಿಠಲಾಪುರ ಗ್ರಾಮಗಳು ಸೇರಿವೆ. ಗ್ರಾಮಗಳ ಜನರು ಇ-ಸ್ವತ್ತು, ಎನ್‍ಒಸಿ, ಖಾತೆ ಬದಲಾವಣೆ, ಲೈಸೆನ್ಸ್ ಸೇರಿ ಅನೇಕ ಸೇವೆಗಳಿಗಾಗಿ ಕಚೇರಿಗೆ ಸಲ್ಲಿಸಿದ ಅರ್ಜಿಗಳನ್ನು ಶೀಘ್ರ ಕೈಗೆತ್ತಿಕೊಂಡು ವಿಲೇವಾರಿ ಮಾಡುತ್ತಿಲ್ಲ. ಮುಖ್ಯಾಧಿಕಾರಿ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಉಡಾಫೆಯಾಗಿ ಮಾತನಾಡುತ್ತಿದ್ದಾರೆ ಎಂದು ದೂರಿದರು.

ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಮನೆ ಕಟ್ಟಲು ಸಕಾಲದಲ್ಲಿ ಸರಳ ದಾಖಲೆಯೊಂದಿಗೆ ಪರವಾನಗಿ ನೀಡಬೇಕು. ವಿದ್ಯುತ್ ಸೌಲಭ್ಯ ಪಡೆಯಲು ಕನಿಷ್ಠ ಶುಲ್ಕ ಪಡೆದು ಎನ್.ಒ.ಸಿ. ನೀಡಬೇಕು. ಅಗತ್ಯ ಸರಳ ದಾಖಲೆಗಳನ್ನು ಪಡೆದು ಇ-ಆಸ್ತಿ ನೀಡಬೇಕು. ಕಾಲ ಮಿತಿಯೊಳಗೆ ಖಾತೆ ಬದಲಾವಣೆ ಮಾಡಬೇಕು. ಗ್ರಾಮಗಳಲ್ಲಿ ಕಾಲಕಾಲಕ್ಕೆ ಚರಂಡಿ ಸ್ವಚ್ಛಗೊಳಿಸಬೇಕು. ಬೀದಿ ದೀಪ ನಿರ್ವಹಣೆ ಮಾಡಬೇಕು. 94 ಸಿ ಹಕ್ಕುಪತ್ರಗಳ ಆಧಾರದ ಮೇಲೆ ತಕ್ಷಣ ಖಾತೆ ಮಾಡಿಕೊಡಬೇಕು. ಪಟ್ಟಣ ಪಂಚಾಯಿತಿಗೆ ಅನುದಾನದ ಕೊರತೆ ಇದ್ದು, ಶೀಘ್ರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಅಕಾಲಿಕ ಮಳೆಗೆ ಹಾನಿಗೀಡಾಗಿರುವ ಮನೆಗಳಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಸಾರ್ವಜನಿಕ ಸೇವೆಗಳನ್ನು ಸಮರ್ಪಕವಾಗಿ ನಿರ್ವಹಸಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಾಧಿಕಾರಿ ಮುಖಾಂತರ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದರು.

ರೈತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ. ವೀರೇಶ್, ತಾಲೂಕು ಅಧ್ಯಕ್ಷ ಹಿರಣ್ಣಯ್ಯ, ಗ್ರಾಮ ಘಟಕದ ಅಧ್ಯಕ್ಷ ಎಸ್. ಕುಮಾರ್, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಉಮೇಶ್, ಎಚ್.ಕೆ. ಶ್ರೀನಿವಾಸ್, ಮುಖಂಡರಾದ ದಾನೇಶ್, ರಮೇಶ, ಬಸವರಾಜಪ್ಪ, ಎಚ್.ಜಿ. ವೆಂಕಟೇಶ್, ನಾಗಪ್ಪ, ಧರ್ಮೋಜಿರಾವ್, ಚಂದ್ರಶೇಖರ, ವಿಶ್ವನಾಥ, ಎಂ. ಹರೀಶ್ ಕುಮಾರ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು