ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಹೊರೆ; ರಸಗೊಬ್ಬರ ಬೆಲೆ

ಮುಂಗಾರು ಹಂಗಾಮು: ಬಿತ್ತನೆಗೆ ರೈತರ ಚಾಲನೆ
Last Updated 6 ಜೂನ್ 2022, 2:53 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ನವೆಂಬರ್ ಆರಂಭದಲ್ಲಷ್ಟೇ ಏರಿಕೆಯಾಗಿದ್ದ ರಸಗೊಬ್ಬರ ಬೆಲೆ ಮತ್ತೆ ಭಾರೀ ಏರಿಕೆ ಕಂಡಿದೆ. ಏಪ್ರಿಲ್ 24ರಿಂದ ಒಂದು ಚೀಲ ರಸಗೊಬ್ಬರಕ್ಕೆ ₹150ರಿಂದ ₹400ರವರೆಗೆ ಬೆಲೆ ಹೆಚ್ಚಾಗಿದೆ. ಈ ಬೆಲೆ ಏರಿಕೆ ಕಂಡು ರೈತರು ಮಾತ್ರವಲ್ಲದೆ ವ್ಯಾಪಾರಸ್ಥರೂ ತಬ್ಬಿಬ್ಬಾಗಿದ್ದಾರೆ.

ರಸಗೊಬ್ಬರ ಕಂಪನಿಗಳು ಏ.24ರಿಂದಲೇ ದರ ಹೆಚ್ಚಿಸಿವೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಇನ್ನಷ್ಟೇ ಆಗಬೇಕಾಗಿದೆ. ಕೃಷಿ ಸಮುದಾಯದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

ರೈತರಿಗೆ ದೊಡ್ಡ ಶಾಕ್: ರಸಗೊಬ್ಬರ ದರ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವ ಉದಾಹರಣೆ ಇದುವರೆಗೂ ಇಲ್ಲವೇ ಇಲ್ಲ. ಅಬ್ಬಬ್ಬಾ ಎಂದರೆ ಚೀಲಕ್ಕೆ ₹ 50ರಿಂದ ₹100 ಹೆಚ್ಚಳ ಮಾಡುತ್ತಿದ್ದರು. ಇದೇ ಮೊದಲ ಬಾರಿ ಶೇ 25ಕ್ಕೂ ಅಧಿಕ ಹೆಚ್ಚಳ ಮಾಡಲಾಗಿದೆ.

ಇನ್ನೂ ಹೆಚ್ಚಳವಾಗಲಿದೆ: ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾಗುವ ವೇಳೆ ಅಂದರೆ ಜೂನ್‌ ತಿಂಗಳಲ್ಲಿ ರಸಗೊಬ್ಬರ ಬೆಲೆ ಏರಿಕೆಯಾಗುತ್ತಿತ್ತು. ಆದರೆ, ಇಷ್ಟುದೊಡ್ಡ ಮೊತ್ತ ಏಕಾಏಕಿ ಏರಿಕೆ ಮಾಡಿದರೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಏಪ್ರಿಲ್‍ನಲ್ಲಿ ಏರಿಸಲಾಗಿದೆ. ಈಗ ರೈತರು ಗೊಬ್ಬರ ಖರೀದಿ ಮಾಡುವ ಸಮಯವಲ್ಲವಾದ್ದರಿಂದ ಅವರಿಗೆ ನೇರವಾಗಿ ಬಿಸಿ ತಟ್ಟಿರಲಿಲ್ಲ.

‘ಆ ಸಮಯದಲ್ಲಿ ಬೆಲೆ ಹೆಚ್ಚಿದರೆ ರೈತರು ಅಷ್ಟಾಗಿ ಆಕ್ರೊಶಗೊಳ್ಳುವುದಿಲ್ಲ ಎಂದೇ ದರ ಹೆಚ್ಚಳ ಮಾಡಲಾಗಿತ್ತು. ಅಲ್ಲದೇ ಜೂನ್ ಅಂತ್ಯದ ವೇಳೆಗೆ ಇನ್ನಷ್ಟು ಏರಿಕೆಯಾಗಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಕೃತಕ ಅಭಾವ ಸೃಷ್ಟಿ ಸಾಧ್ಯತೆ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿಗೆ 1.5 ಲಕ್ಷ ಟನ್ ರಸಗೊಬ್ಬರದ ಬೇಡಿಕೆ ಇದೆ. ಈಗಾಗಲೇ 14,807 ಮೆಟ್ರಿಕ್ ಟನ್‍ನಷ್ಟು ಗೊಬ್ಬರ ವಿತರಣೆಯಾಗಿದೆ. 28,919 ಮೆಟ್ರಿಕ್ ಟನ್ ದಾಸ್ತಾನು ಇದೆ. ಅಧಿಕಾರಿಗಳು ಸದ್ಯ ಯಾವುದೇ ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ. ಹಾಗೊಂದು ವೇಳೆ ದಾಸ್ತಾನು ಪ್ರಮಾಣ ಕಡಿಮೆಯಾಗಿ ಬೇಡಿಕೆ ಪ್ರಮಾಣ ಹೆಚ್ಚಾದರೆ ಆಗ ಕೃತಕ ಅಭಾವ ಸೃಷ್ಟಿಯಾಗಿ ಪ್ರಸಕ್ತ ಮುಂಗಾರಿಗೆ ರಸಗೊಬ್ಬರ ಅಭಾವ ಸೃಷ್ಟಿಯಾಗಬಹುದು. ಆದ್ದರಿಂದ ಸರ್ಕಾರ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂಬುದು ರೈತ ಸಂಘದ ಮುಖಂಡ ಎಚ್.ಆರ್.ಬಸವರಾಜಪ್ಪ ಅವರ ಒತ್ತಾಯ.

***

ಕ್ವಿಂಟಲ್ ಗೊಬ್ಬರಕ್ಕೆ ಒಂದೂವರೆ ಕ್ವಿಂಟಲ್ ಭತ್ತ!

ಹೊಳೆಹೊನ್ನೂರು: ರಾಸಾಯನಿಕ ಗೊಬ್ಬರಗಳು ಕೈಗೆಟುಕದೇ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಭತ್ತ ಕ್ವಿಂಟಲ್‌ಗೆ ₹ 1500ರಿಂದ ₹ 2000ರವರೆಗೆ ಇದೆ. ಡಿಎಪಿ ಗೊಬ್ಬರ ಕ್ವಿಂಟಲ್‌ಗೆ ₹ 2800 ಇದ್ದು, ಹೀಗಾದರೆ ರೈತ ತನ್ನ ಒಂದು ಕ್ವಿಂಟಲ್ ಗೊಬ್ಬರ ತೆಗೆದುಕೊಳ್ಳುವುದಕ್ಕೆ ಒಂದೂವರೆ ಕ್ವಿಂಟಲ್ ಭತ್ತ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಸರ್ಕಾರ ರಸಗೊಬ್ಬರಕ್ಕೆ ಸಬ್ಸಿಡಿ ನೀಡುತ್ತಿರುವುದು ಸರಿಯಷ್ಟೆ. ಆದರೆ, ಈ ಸಬ್ಸಿಡಿ ಕೇವಲ ವ್ಯಾಪಾರದಾರರ ಜೇಬು ತುಂಬುತ್ತಿದ್ದು, ರೈತರಿಗೆ ನಯಾಪೈಸೆಯೂ ಸಿಗುತ್ತಿಲ್ಲ. ರಸಗೊಬ್ಬರವನ್ನು ರೈತರು ಬೆಳೆಯಿಂದ ಬೆಳೆವರೆಗೆ ವ್ಯಾಪಾರಿ ಬಳಿ ಸಾಲ ರೂಪದಲ್ಲಿ ಗೊಬ್ಬರವನ್ನು ತೆಗೆದುಕೊಂಡು ಹೋಗುವುದರಿಂದ ರಸಗೊಬ್ಬರ ಸಬ್ಸಿಡಿ ರೈತರಿಗೆ ಸಿಗುವುದಿಲ್ಲ. ವ್ಯಾಪಾರಸ್ಥರು ಬೋಗಸ್ ಹೆಸರಿನಲ್ಲಿ ಬಿಲ್ ನೀಡಿ ಸಬ್ಸಿಡಿ ಹಣ ಪಡೆಯುತ್ತಿದ್ದಾರೆ. ಅದರ ಲಾಭ ಫಲಾನುಭವಿಗಳಿಗೆ ಮುಟ್ಟಿಲ್ಲ ಎಂಬುದು ರೈತರ ವಾದ.

ಒಂದೆಡೆ ಗೊಬ್ಬರ ಬೆಲೆ ಹೆಚ್ಚು; ಇನ್ನೊಂದೆಡೆ ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಇಲ್ಲ. ಮತ್ತೊಂದೆಡೆ ಕೂಲಿ ಕಾರ್ಮಿಕರು ಹಾಗೂ ಯಂತ್ರೋಪಕರಣಗಳ ಬೆಲೆ ಕೂಡ ಹೆಚ್ಚಾಗಿದ್ದು, ಬಡತನ ರೇಖೆ ದಾಟುವುದು ಹೇಗೆ ಎಂದು ದಾರಿಕಾಣದೇ ನಿಂತಲ್ಲೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ರೈತರ ಬಗ್ಗೆ ಕಾಳಜಿ ವಹಿಸಿ ಹೆಚ್ಚಿನ ಅನುದಾನ ಹಾಗೂ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಎಂಬುದು ರೈತರ ಆಗ್ರಹ.

***

ಸಣ್ಣ, ಅತಿಸಣ್ಣ ರೈತರಿಗೆ ಆರ್ಥಿಕ ಹೊರೆ

ತೀರ್ಥಹಳ್ಳಿ: ಸಣ್ಣ, ಅತಿ ಸಣ್ಣ ರೈತರು ರಸಗೊಬ್ಬರ ಬೆಲೆ ಏರಿಕೆಯಿಂದಾಗಿ ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ಉದ್ಭವಿಸಿದೆ. ಪೊಟ್ಯಾಷ್‌ ಸೇರಿ ವಿವಿಧ ಮಾದರಿಯ ಗೊಬ್ಬರ ದಾಸ್ತಾನು ಪ್ರಮಾಣದಲ್ಲೂ ಕೊರತೆ ಉಂಟಾಗಿದೆ. ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡುವ ಆತಂಕ ರೈತರಲ್ಲಿ ಮನೆ ಮಾಡಿದೆ.

ಒಂದು ಎಕರೆ ತೋಟದ ಬೇಸಾಯಕ್ಕೆ ಕಳೆದ ವರ್ಷ ₹ 50 ಸಾವಿರ ವೆಚ್ಚವಾಗುತ್ತಿತ್ತು. ಆದರೆ, ಈ ವರ್ಷ ಒಂದು ಲಕ್ಷಕ್ಕೂ ಹೆಚ್ಚಿಗೆ ಖರ್ಚು ಮಾಡಬೇಕಿದೆ. ಅಡಿಕೆ ಧಾರಣೆ ಸ್ಥಿರತೆ ಹೊಂದಿದ್ದರೂ ಬೇಸಾಯಕ್ಕೆ ವಿಪರೀತ ವೆಚ್ಚ ತಗಲುವಂತೆ ಮಾಡಿದೆ. ಮಣ್ಣು, ಗೊಬ್ಬರ, ರಾಸಾಯನಿಕ ಮಿಶ್ರಣ, ಕೂಲಿ ಸೇರಿ ಬೇಸಾಯಕ್ಕೆ ಹೆಚ್ಚಿನ ಹಣ ಮೀಸಲಿಡುವಂತೆ ಮಾಡಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿ ಪರವಾನಿಗೆ ಪಡೆದ ಅಂಗಡಿಗಳಲ್ಲಿ ರಸಗೊಬ್ಬರ ಮಾರಾಟಕ್ಕೆ ಅವಕಾಶ ಇದೆ. ಕಳೆದ ವರ್ಷ ಏಪ್ರಿಲ್‌, ಮೇ ತಿಂಗಳಿನಲ್ಲಿ 980 ಮೆಟ್ರಿಕ್‌ ಟನ್‌ ಪೊಟ್ಯಾಷ್‌ ಗೊಬ್ಬರ ದಾಸ್ತಾನಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಕೇವಲ 300 ಮೆಟ್ರಿಕ್‌ ಟನ್‌ ಮಾತ್ರ ದಾಸ್ತಾನಿದೆ. ಕಳೆದ ವರ್ಷ ಪೌಷ್ಟಿಕಾಂಶಯುಕ್ತ ವಿವಿಧ ಮಾದರಿಯ ಗೊಬ್ಬರ 4700 ಮೆಟ್ರಿಕ್‌ ಟನ್‌ ಇತ್ತು. ಈ ವರ್ಷ 600 ಮೆಟ್ರಿಕ್‌ ಟನ್‌ ಮಾತ್ರ ಲಭ್ಯವಿದೆ.

2021ರಲ್ಲಿ 50 ಕೆ.ಜಿ ಪೊಟ್ಯಾಷ್‌ ಗೊಬ್ಬರಕ್ಕೆ ₹ 800 ದರ ಇತ್ತು. ಈ ವರ್ಷ ₹ 1750ಕ್ಕೆ ಏರಿಕೆಯಾಗಿದೆ. ಜೊತೆಗೆ ಕಡ್ಡಾಯವಾಗಿ ₹ 250 ಮೌಲ್ಯದ ಲಿಕ್ವಿಡ್‌ ಖರೀದಿ ಮಾಡಬೇಕು. 2021ರಲ್ಲಿ ಸುಫಲ ಗೊಬ್ಬರಕ್ಕೆ ₹1050 ಇದ್ದು, ಈ ವರ್ಷ ₹1550ಕ್ಕೆ ಏರಿಕೆಯಾಗಿದೆ. ಯೂರಿಯಾ ಸೇರಿ ವಿವಿಧ ಮಾದರಿಯ ಗೊಬ್ಬರ ಮಿಶ್ರಣಕ್ಕೆ ಮಿತಿ ಮೀರಿ ದರ ಏರಿಕೆ ಮಾಡಲಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನ ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಲ್ಲಿ ಯೂರಿಯಾ 146 ಮೆಟ್ರಿಕ್‌ ಟನ್, ಡಿಎಪಿ 102 ಮೆಟ್ರಿಕ್‌ ಟನ್‌, ಎಂಒಪಿ 223 ಮೆಟ್ರಕ್‌ ಟನ್‌, ಎನ್‌ಪಿಕೆ 292 ಮೆಟ್ರಕ್‌ ಟನ್‌, ಎಸ್‌ಎಸ್‌ಪಿ 109 ಮೆಟ್ರಕ್‌ ಟನ್‌ ರಾಸಾಯನಿಕ ಗೊಬ್ಬರ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT