ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಹೋರಾಟ ಮಾಡಿ, ಯಾರ ಗುಲಾಮರೂ ಆಗಬೇಡಿ

ಈಡಿಗ ಸಮಾಜದ ಯುವಕರಿಗೆ ವಿಖ್ಯಾತಾನಂದ ಸ್ವಾಮೀಜಿ ಕಿವಿಮಾತು
Last Updated 26 ಜೂನ್ 2022, 5:49 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸಾಮಾಜಿಕ, ರಾಜಕೀಯ ಹೋರಾಟಗಳಲ್ಲಿ ಪಾಲ್ಗೊಳ್ಳಿ. ಆದರೆ ಯಾರ ಗುಲಾಮರಾಗಬೇಡಿ, ವಿದ್ಯಾವಂತರಾಗಿ, ಉದ್ಯೋಗಸ್ಥರಾಗಿ ನಿಮ್ಮ ನೆಲೆಯಲ್ಲಿ ಸಮಾಜದ ನೊಂದವರಿಗೆ ನೆರವಾಗಿ’ ಎಂದು ಸೋಲೂರು ಆರ್ಯಈಡಿಗ ಮಹಾಸಂಸ್ಥಾನದ ರೇಣುಕಾ ಪೀಠದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಸಮುದಾಯದವರಿಗೆ ಸಲಹೆ ನೀಡಿದರು.

ಬೆಂಗಳೂರಿನ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನವು ಜಿಲ್ಲಾ ಆರ್ಯ ಈಡಿಗ ಸಂಘದ ಸಹಯೋಗದಲ್ಲಿ ಶನಿವಾರ ಈಡಿಗ ಭವನದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿವೇತನ ವಿತರಣೆ, ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ವಿದ್ಯೆಯಿಂದ ಮಾತ್ರ ಶೋಷಿತ ಸಮುದಾಯಗಳು ಮುಂದೆ ಬರಲು ಸಾಧ್ಯ. ಕುಲಗುರು ನಾರಾಯಣಗುರುಗಳು ಪ್ರತಿ ದೇವಾಲಯದ ಪ್ರಾಂಗಣ ಸರಸ್ವತಿ ಮಂದಿರವಾಗಬೇಕೆಂಬ ಪರಿಕಲ್ಪನೆ ಹೊಂದಿದ್ದರು. ಅಂದು ಅವರು ಸಮಾಜಕ್ಕೆ ಜ್ಞಾನದ ಬೆಳಕು ನೀಡಿದ್ದರು. ಅವರ ತತ್ವ ಸಿದ್ಧಾಂತಗಳಲ್ಲಿ ಈಡಿಗ ಸಮಾಜ ಸಾಗಿದರೆ ಉನ್ನತಿ ಸಾಧ್ಯವಿದೆ. ಕೇರಳದಲ್ಲಿ ಗುರುಗಳು ಹಚ್ಚಿದ ವಿದ್ಯಾಜ್ಯೋತಿಯಿಂದ ಆ ರಾಜ್ಯ ಇಂದು ಮಾದರಿ ರಾಜ್ಯವಾಗಿದೆ ಎಂದರು.

‘ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ಮಂಗಳೂರಿನಲ್ಲಿ ಈಡಿಗ ಸಮಾಜ ಬಹುಸಂಖ್ಯಾತರಾಗಿದ್ದಾರೆ. ಹಿಂದೆ ರಾಜಕೀಯವಾಗಿಯೂ ಪ್ರಬಲವಾಗಿದ್ದರು. ಆದರೆ ಇಂದು ಸಂಘಟನೆಯ ಕೊರತೆಯಿಂದ ಸಮಾಜಕ್ಕೆ ರಾಜಕೀಯವಾಗಿ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ. ಈಡಿಗರಿಗೆ ರಾಜಕೀಯ ಕ್ಷೇತ್ರವೊಂದೇ ಪರ‍್ಯಾಯವಲ್ಲ. ನೀವು ಮಾಡುವ ಯಾವುದೇ ಉದ್ಯೋಗದಲ್ಲಿ ಶ್ರದ್ಧೆ ಮತ್ತು ನಾರಾಯಣಗುರುಗಳ ತತ್ವ ಇದ್ದರೆ ಸಾಫಲ್ಯ ಕಾಣುತ್ತೀರಿ’ ಎಂದು ಸಲಹೆ ನೀಡಿದರು.

ಜೆ.ಪಿ.ನಾರಾಯಣ ಸ್ವಾಮಿ ಕುಟುಂಬದವರು ಇಂದು ಪ್ರತಿ ವರ್ಷ ಸಮಾಜದ ಮಕ್ಕಳಿಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದ್ದಾರೆ. ಅವರು ನೀಡಿದ ನೆರವನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

‘ಜೆ.ಪಿ. ನಾರಾಯಣ ಸ್ವಾಮಿ ಕುಟುಂಬ 2018ರಲ್ಲಿ ಆರಂಭಿಸಿದ್ದ ಜೆಪಿ ಪ್ರತಿಷ್ಠಾನ ಪ್ರತಿ ವರ್ಷ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಿದೆ. ಇದೊಂದು ಸ್ವಯಂಸೇವಾ ಮತ್ತು ರಾಜಕೀಯೇತರ ಸಂಸ್ಥೆಯಾಗಿದೆ. ಗ್ರಾಮೀಣ ಭಾಗದ ಈಡಿಗ ಸಮಾಜದ ಮಕ್ಕಳು ಶಿಕ್ಷಣ ಸೌಲಭ್ಯದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಜನಮುಖಿ ಕಾರ್ಯಕ್ರಮ ಮಾಡುತ್ತಿದೆ. ಪ್ರತಿಷ್ಠಾನವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ’ ಎಂದು ವಿದ್ಯಾರ್ಥಿವೇತನ ವಿತರಿಸಿದ ಕೆಪಿಎಸ್‌ಸಿ ಮಾಜಿ ಸದಸ್ಯ ಪ್ರೊ.ಲಕ್ಷ್ಮೀನರಸಿಂಹಯ್ಯ ಹೇಳಿದರು.

ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಇರುವ ಅವಕಾಶಗಳು, ಮತ್ತು ಉದ್ಯೋಗ ಅವಕಾಶಗಳು, ಕೋರ್ಸ್‌ಗಳ ಆಯ್ಕೆ ಇತ್ಯಾದಿಗಳ ಬಗ್ಗೆ ಪ್ರತಿಷ್ಠಾನದ ಎಚ್.ಎಲ್. ಶಿವಾನಂದ ಮಾರ್ಗದರ್ಶನ ನೀಡಿದರು.

ಪ್ರತಿಷ್ಠಾನದ ಖಜಾಂಚಿ ಪೂರ್ಣೇಶ್ ಎಂ.ಆರ್., ಕುಸುಮಾ ಅಜಯ್, ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಉದ್ಯಮಿ ಸುರೇಶ್ ಕೆ.ಬಾಳೇಗುಂಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಪ್ರಮುಖರಾದ ಬಂಡಿ ರಾಮಚಂದ್ರ, ಕಾಸರಗುಪ್ಪೆ ಅಜ್ಜಪ್ಪ, ಮಹಿಳಾ ಸಂಘದ ಗೀತಾಂಜಲಿ ದತ್ತಾತ್ರೇಯ, ಬಿಲ್ಲವ ಸಂಘದ ಅಧ್ಯಕ್ಷ ಭುಜಂಗಯ್ಯ ಇದ್ದರು.

ಈಡಿಗ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಸಿ. ರಾಮಚಂದ್ರ ಸ್ವಾಗತಿಸಿದರು. ಬಿ.ಡಿ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಜಿಲ್ಲಾ ಸಂಚಾಲಕ ತೇಕಲೆ ರಾಜಪ್ಪ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ 380 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಹಿಳ್ಳೋಡಿ ಕೃಷ್ಣಮೂರ್ತಿ ವಂದಿಸಿದರು.

ಈಡಿಗ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರಸ್ತಾಪ
ಜೆ.ಪಿ. ಸುಧಾಕರ್ ಅವರ ಈ ಕೆಲಸದಿಂದ ಸಮಾಜದ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ ಸಮಾಜದ ಮಕ್ಕಳಿಗೆ ಹಾಸ್ಟೆಲ್ ಅಗತ್ಯವಿದ್ದು, ಈ ನೆಲೆಯಲ್ಲಿ ಚಿಂತನೆ ಮಾಡಬೇಕಿದೆ ಎಂದು ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಮನವಿ ಮಾಡಿದರು.

*

ನಾರಾಯಣಗುರುಗಳು ಮಧ್ಯಾಹ್ನದ ಬಿಸಿಯೂಟದ ಪರಿಕಲ್ಪನೆ ನೀಡಿದವರು. ಕೇರಳದಲ್ಲಿ ತಮಗೆ ಭಕ್ತರು ನೀಡಿದ್ದ ತೆಂಗಿನ ತೋಟದ ಆದಾಯದಿಂದ ಆ ಕಾಲದಲ್ಲಿಯೇ ಬಡ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟ ಆರಂಭಿಸಿದ್ದರು.
–ವಿಖ್ಯಾತಾನಂದ ಸ್ವಾಮೀಜಿ, ಸೋಲೂರು ಆರ್ಯಈಡಿಗ ಮಹಾಸಂಸ್ಥಾನದ ರೇಣುಕಾ ಪೀಠದ ಪೀಠಾಧಿಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT