ಶನಿವಾರ, ಏಪ್ರಿಲ್ 1, 2023
29 °C

ನಮ್ಮತನ ಉಳಿಸಿಕೊಳ್ಳುವ ಮಾರ್ಗ ಹುಡುಕಿ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ‘ಬದಲಾದ ಪರಿಸ್ಥಿತಿಯಲ್ಲಿ ಕರಕುಶಲ ನಮ್ಮ ಮೂಲ ಕಸುಬುಗಳನ್ನು ಮರೆತಿರುವುದು ಅತ್ಯಂತ ನೋವಿನ ಸಂಗತಿ. ಬದಲಾವಣೆಗೆ ತಕ್ಕಂತೆ ನಮ್ಮತನವನ್ನು ಉಳಿಸಿಕೊಳ್ಳುವ ಮಾರ್ಗಗಳನ್ನು ನಾವು ಹುಡುಕಿಕೊಳ್ಳಬೇಕು’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಸಮೀಪದ ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಚರಕ ಸಂಸ್ಥೆಯ ವಿನ್ಯಾಸ ಕೇಂದ್ರ ಮಂಗಳವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ನೆಲಮೂಲದ ಕಲೆ, ಸಂಸ್ಕೃತಿಗಳಿಂದ ನಾವು ದೂರವಾಗುತ್ತಿರುವ ಬಗ್ಗೆ ಆತ್ಮಾವಲೋಕನ ನಡೆಸಬೇಕಿದೆ. ಮೂಲ ಕಸುಬುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚರಕ ಸಂಸ್ಥೆ ಮಾಡುತ್ತಿರುವ ಕೆಲಸ ಗಮನಾರ್ಹ. ಈ ನಿಟ್ಟಿನಲ್ಲಿ ಸಮಾಜ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಸಮಾಜಕ್ಕೆ ಹೊಸ ದಾರಿ ತೋರುವ ಕಾಯಕವನ್ನು ಚರಕ ಮಾಡುತ್ತಿದೆ’ ಎಂದು ಹೇಳಿದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಟೈಟಾನ್ ಸಂಸ್ಥೆಯ ಅಧಿಕಾರಿ ಶ್ರೀಧರ್ ಎನ್.ಎ., ‘ಸುಸ್ಥಿರ, ಪರಿಸ್ನೇಹಿ ಉತ್ಪನ್ನಗಳಿಗೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಒಂದು ಉತ್ಪನ್ನ ಎಲ್ಲಿಂದ ಬಂದಿದೆ, ಯಾರು ತಯಾರಿಸಿದ್ದಾರೆ, ಯಾವ ವಿಧಾನದಲ್ಲಿ ತಯಾರಿಸಲಾಗಿದೆ ಎಂಬುದನ್ನು ವಿಚಾರಿಸಿ ನಂತರ ಅದನ್ನು ಖರೀದಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆರೋಗ್ಯಕರ ಬೆಳವಣಿಗೆ’ ಎಂದರು.

ಚರಕ ಸಂಸ್ಥೆಯ ಪ್ರಸನ್ನ, ‘ಕೈಮಗ್ಗ ಹಾಗೂ ಇತರ ಕರಕುಶಲ ಕಲೆಗಳ ಸುಸ್ಥಿರ ಪ್ರಕೃತಿಗೆ ಹತ್ತಿರವಾದ ಪ್ರಕ್ರಿಯೆಗಳನ್ನು ಪುನರುಜ್ಜೀವನಗೊಳಿಸುವುದು ವಿನ್ಯಾಸ ಕೇಂದ್ರದ ಉದ್ದೇಶವಾಗಿದೆ. ಆಧುನಿಕ ತಂತ್ರಜ್ಞಾನವನ್ನು ಸಂಪೂರ್ಣವಾಗಿ ತಿರಸ್ಕರಿಸದೆ ಪಾರಂಪರಿಕ ತಂತ್ರಜ್ಞಾನಕ್ಕೆ ಆದ್ಯತೆ ನೀಡುತ್ತಾ ಕೆಲಸ ಮಾಡುವ ಉದ್ದೇಶವನ್ನು ಈ ಕೇಂದ್ರ ಹೊಂದಿದೆ’ ಎಂದು ವಿವರಿಸಿದರು.

ಮಗ್ಗ, ಬಣ್ಣಗಾರಿಕೆ, ಮುದ್ರಣ, ಬುಟ್ಟಿ, ಚಾಪೆ ಹೆಣೆಯುವುದು ಮೊದಲಾದ ಕೆಲಸಗಳ ಪ್ರಕ್ರಿಯೆಗಳನ್ನು ದಾಖಲಿಸಲಾಗುವುದು. ಈ ಮೂಲಕ ಒಂದು ಸಮುದಾಯಕ್ಕೆ ಸೀಮಿತವಾಗಿರುವ ಈ ಕೆಲಸಗಳನ್ನು ಇತರ ಸಮುದಾಯಗಳಿಗೂ ವಿಸ್ತರಿಸಿ, ಜಾತಿ ವ್ಯವಸ್ಥೆಯಿಂದ ಅವುಗಳನ್ನು ಹೊರತಂದು ಸಮಾಜವನ್ನು ಚಲನಶೀಲಗೊಳಿಸಲಾಗುವುದು ಎಂದು ಹೇಳಿದರು.

ಹಳ್ಳಿಯ ಕುಶಲಕರ್ಮಿಗಳಿಗೂ, ನಗರದಲ್ಲಿರುವ ವಿನ್ಯಾಸಕಾರರಿಗೂ ನಡುವೆ ಸೇತುವೆಯಾಗಿ ವಿನ್ಯಾಸ ಕೇಂದ್ರ ಕೆಲಸ ಮಾಡಲಿದೆ. ಬಣ್ಣಗಾರಿಕೆ, ಕಸೂತಿ, ನೇಯ್ಗೆ ಮೊದಲಾದ ಕೆಲಸಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಇದಕ್ಕೆ ಪೂರಕವಾದ ಗ್ರಂಥಾಲಯ, ಕಂಪ್ಯೂಟರ್ ಕೇಂದ್ರ, ಪ್ರಯೋಗಾಲಯ, ಅತಿಥಿ ಗೃಹ ಮೊದಲಾದ ಸೌಲಭ್ಯಗಳನ್ನು ಚರಕ ಒಳಗೊಂಡಿದೆ ಎಂದು ತಿಳಿಸಿದರು.

ರಂಗಕರ್ಮಿ ಕೆ.ವಿ. ಅಕ್ಷರ, ವಿನ್ಯಾಸ ಕೇಂದ್ರದ ಮೂಲಕ ಅಂತರ್ ಶಿಸ್ತೀಯ ಅಧ್ಯಯನ ಸಾಧ್ಯವಾಗಬೇಕಿದೆ. ಹಾಗಾದಲ್ಲಿ ವಿನ್ಯಾಸ ಕೇಂದ್ರಕ್ಕೆ ವಿಶಾಲವಾದ ಕಲಾತ್ಮಕ, ಸಾಂಸ್ಕೃತಿಕ ಆಯಾಮ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು.

ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಸಚ್ಚಿದಾನಂದ ಇದ್ದರು. ಪದ್ಮಶ್ರೀ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು