ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೀನುಗಳನ್ನು ತಿನ್ನುತ್ತವೆ ಎಂದು ವಿಷ ತಿನ್ನಿಸಿ ಪಕ್ಷಿಗಳ ಹತ್ಯೆ!

ವಿರುಪಿನಕೊಪ್ಪ ಬಳಿಯ ಕೆರೆಯ ದಂಡೆ: ಪೊಲೀಸರ ಕಾವಲು
Last Updated 4 ಜನವರಿ 2023, 4:33 IST
ಅಕ್ಷರ ಗಾತ್ರ

ಶಿವಮೊಗ್ಗ: ಸಮೀಪದ ವಿರುಪಿನಕೊಪ್ಪ ಶಕ್ತಿಧಾಮ ಲೇಔಟ್ ಬಳಿಯ ಕೆರೆಯ ದಂಡೆಯ ಮೇಲೆ ಇಟ್ಟ ಮೀನುಗಳನ್ನು ತಿಂದು ಹದ್ದು, ರಿವರ್ಟನ್‌ ಹಕ್ಕಿ ಸೇರಿ ಬೇರೆ ಬೇರೆ ಪಕ್ಷಿಗಳು ಅನುಮಾನಾಸ್ಪದವಾಗಿ ಸಾವಿಗೀಡಾಗಿವೆ.

ತ್ಯಾವರೆಕೊಪ್ಪ ಹುಲಿ–ಸಿಂಹಧಾಮ ಸಮೀಪದ ವಿರುಪಿನಕೊಪ್ಪ ಬಳಿಯ ಕೆರೆಯ ದಂಡೆಯ ಮೇಲೆ ಇಟ್ಟ ಮೀನುಗಳನ್ನು ಈ ಪಕ್ಷಿಗಳು ತಿಂದಿವೆ.

ಪಕ್ಷಿಗಳು ಕೆರೆಯಲ್ಲಿನ ಮೀನು ಮರಿಗಳನ್ನು ಹಿಡಿದು ತಿನ್ನುವುದರಿಂದ ಮೀನು ಹಿಡಿಯುವವರಿಗೆ ನಷ್ಟ ಆಗಲಿದೆ. ಕೆಲವರು ಆಹಾರಕ್ಕಾಗಿ ಪಕ್ಷಿಗಳ ಬೇಟೆಯಾಡುತ್ತಾರೆ. ಇವರು ವಿಷ ಬೆರೆತ ಮೀನುಗಳನ್ನು ಕೆರೆಯ ದಂಡೆಯ ಮೇಲೆ ಇಡುತ್ತಿದ್ದಾರೆ. ಆಹಾರ ಅರಸಿ ಕೆರೆಯತ್ತ ಬರುವ ಪಕ್ಷಿಗಳು ಸುಲಭವಾಗಿ ಸಿಗುವ ಮೀನು ತಿಂದು ಸಾವಿಗೀಡಾಗುತ್ತಿವೆ. ಇದು ಜಿಲ್ಲೆಯ ಪಕ್ಷಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.

ಬಯಲಾಗಿದ್ದು ಹೀಗೆ

ತ್ಯಾವರೆಕೊಪ್ಪ ಹುಲಿ–ಸಿಂಹ ಧಾಮದ ವೈದ್ಯ ಡಾ.ಮುರಳಿ ಮನೋಹರ್ ಎರಡು ದಿನಗಳ ಹಿಂದೆ ವಿರುಪಿನಕೊಪ್ಪ ಕೆರೆಯ ಬಳಿಗೆ ಪಕ್ಷಿಗಳ ವೀಕ್ಷಣೆಗೆ ತೆರಳಿದ್ದಾರೆ. ಈ ವೇಳೆ ಕೆಲವರು ಪಕ್ಷಿಗಳಿಗೆ ವಿಷ ಪ್ರಾಶನ ಮಾಡಿ ಕೊಲ್ಲುತ್ತಿರುವುದು ಅವರ ಗಮನಕ್ಕೆ ಬಂದಿದೆ. ಆ ಬಗ್ಗೆ ಪ್ರಶ್ನಿಸುತ್ತಿದ್ದಂತೆಯೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸಾವಿಗೀಡಾದ ಪಕ್ಷಿಗಳ ತಂದು ಅವರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಮಾಹಿತಿ ನೀಡಿಕೆ

ಪಕ್ಷಿಗಳಿಗೆ ವಿಷವಿಕ್ಕಿ ಕೊಲ್ಲುತ್ತಿರುವ ಬಗ್ಗೆ ಸಾಗರದಲ್ಲಿರುವ ಪೊಲೀಸ್‌ ಅರಣ್ಯ ಸಂಚಾರಿ ದಳಕ್ಕೂ ಡಾ.ಮುರಳಿ ಮಾಹಿತಿ ನೀಡಿದ್ದಾರೆ.

.............

ಕೆರೆಯ ಕಾವಲಿಗೆ ಪೊಲೀಸ್‌ ಸಿಬ್ಬಂದಿ ನಿಯೋಜನೆ

‘ಕೆರೆಯ ಬಳಿ ದುಷ್ಕರ್ಮಿಗಳು ಪಕ್ಷಿಗಳನ್ನು ಕೊಲ್ಲುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಈಗ ಅಲ್ಲಿ ಬೆಳಿಗ್ಗೆ ಹಾಗೂ ಸಂಜೆ ನಮ್ಮ (ಪೊಲೀಸ್‌) ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಿದ್ದೇವೆ’ ಎಂದು ಪೊಲೀಸ್‌ ಅರಣ್ಯ ಸಂಚಾರಿ ದಳದ ಪಿಎಸ್‌ಐ ಕೆ. ವಿನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆಯ ಆಸುಪಾಸಿನ ನಿವಾಸಿಗಳನ್ನು ವಿಚಾರಿಸಿದ್ದೇವೆ. ಕೆರೆಯಲ್ಲಿನ ಮೀನಿನ ರಕ್ಷಣೆಗೆ ಹಾಗೂ ಬೇಟೆಗಾಗಿ ಪಕ್ಷಿಗಳನ್ನು ಈ ರೀತಿ ಕೊಲ್ಲುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ದುಷ್ಕರ್ಮಿಗಳನ್ನು ಹಿಡಿದು ವಿಚಾರಣೆ ನಡೆಸಿದರೆ ನೈಜ ಸಂಗತಿ ಗೊತ್ತಾಗಲಿದೆ. ಅವರ ಪತ್ತೆಗೆ ಬಲೆ ಬೀಸಿದ್ದೇವೆ. ಈ ಬಗ್ಗೆ ಶಿವಮೊಗ್ಗದ ಅರಣ್ಯ ಇಲಾಖೆಯವರಿಗೂ ಮಾಹಿತಿ ನೀಡಿದ್ದೇವೆ’ ಎಂದು ವಿನಾಯಕ್ ತಿಳಿಸಿದರು.

............

ಅಳಿವಿನಂಚಿನಲ್ಲಿರುವ ಪಕ್ಷಿ

ಹದ್ದುಗಳು (Tawny Eagle) ದೇಶದಲ್ಲಿ ಷಡ್ಯೂಲ್‌ 1ರಲ್ಲಿ ಇರುವ ಪಕ್ಷಿಗಳು, ಅಳಿವಿನಂಚಿನಲ್ಲಿವೆ. ರಿವರ್‌ಟನ್ ಕೂಡ ಮನುಷ್ಯಸ್ನೇಹಿ ಹಕ್ಕಿ ಇದು ಷಡ್ಯೂಲ್‌ 4ರಲ್ಲಿ ಇದೆ. ಆಂತರಿಕವಾಗಿ ಆದ ರಕ್ತಸ್ರಾವದಿಂದ ಆ ಪಕ್ಷಿಗಳು ಸಾವಿಗೀಡಾಗಿವೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿದೆ. ಹೆಚ್ಚಿನ ಪರೀಕ್ಷೆಗಾಗಿ ಪಕ್ಷಿಗಳ ದೇಹದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ಡಾ.ಮುರಳಿ ಮನೋಹರ ‘ಪ್ರಜಾವಾಣಿ’ಗೆ ತಿಳಿಸಿದರು.

ಹದ್ದುಗಳು ಗೂಡು ಕಟ್ಟಲು ದೊಡ್ಡಗಾತ್ರದ ಮರಗಳು ಬೇಕು. ಅರಣ್ಯ ನಾಶದಿಂದ ನೆಲೆ ಕಳೆದುಕೊಂಡ ಈ ಪಕ್ಷಿಗಳು ನಾಶದತ್ತ ಸಾಗಿವೆ. 2018ರಲ್ಲಿ ಹದ್ದುಗಳನ್ನು ಅಳಿವಿನಂಚಿನಲ್ಲಿರುವ ಪಕ್ಷಿಗಳ ಪಟ್ಟಿಗೆ ಸೇರಿಸಲಾಗಿದೆ. ಜಾಗತಿಕವಾಗಿ 4 ಲಕ್ಷದಷ್ಟು ಹದ್ದುಗಳು ಮಾತ್ರ ಕಾಣಸಿಗುತ್ತಿವೆ ಎಂದು ಡಾ.ಮುರಳಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT