ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿಗಿಲ್ಲ ಕಡಿವಾಣ

ನಗರದ ಸೌಂದರ್ಯಕ್ಕೆ ಧಕ್ಕೆ, ನಗರ ಪಾಲಿಕೆಯ ಆದಾಯವೂ ಖೋತಾ
Last Updated 19 ಏಪ್ರಿಲ್ 2021, 4:52 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜಕೀಯ ಸಮಾವೇಶ, ರಾಜಕಾರಣಿಗಳ ಜನ್ಮದಿನ, ಸಮಾರಂಭ, ಜಯಂತಿ, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಸ್ಟಿಕ್ಕರ್‌, ಭಿತ್ತಿಪತ್ರ, ಸ್ವಾಗತ ಕಮಾನುಗಳು ನಗರದ ಎಲ್ಲೆಡೆ ರಾರಾಜಿಸುತ್ತವೆ. ನಗರದ ಸೌಂದರ್ಯಕ್ಕೆ ಧಕ್ಕೆ ತರುವ, ಅನುಮತಿ ಪಡೆಯದ ಇಂತಹ ಅನಧಿಕೃತ ಪ್ರಚಾರದ ವಿರುದ್ಧ ನಗರ ಪಾಲಿಕೆ ಕ್ರಮ ಕೈಗೊಳ್ಳದೇ ಪಕ್ಷಪಾತ ಮಾಡುತ್ತದೆ ಎನ್ನುವ ಆರೋಪವಿದೆ.

ನಗರದಲ್ಲಿ ಹಬ್ಬ, ಉತ್ಸವ, ಜಾತ್ರೆ ಸಮಯದಲ್ಲೂ ಪೋಸ್ಟರ್‌, ಕಟೌಟ್, ಬ್ಯಾನರ್, ಫ್ಲೆಕ್ಸ್‌ಗಳನ್ನು ಹಾಕಿ ‘ಶುಭಾಶಯ’ ಕೋರುವ ಕಾರ್ಯ ಜೋರಾಗಿ ಇರುತ್ತದೆ. ಕೊರೊನಾ ಮೊದಲ ಅಲೆ ನಂತರ ಸಿನಿಮಾಗಳ ಪ್ರದರ್ಶನಗಳು ಪುನರಾರಂಭವಾಗಿದ್ದು, ಪ್ರಮುಖ ನಟರು ನಟಿಸಿದ ಚಿತ್ರಗಳ ಪೋಸ್ಟರ್‌ಗಳು ಅಲ್ಲಲ್ಲಿ ಕಾಣಿಸುತ್ತಿವೆ. ಚಿತ್ರಗಳ ಬಿಡುಗಡೆ ಪೋಸ್ಟರ್‌ಗಳೂ ಸೇರಿ ಅಕ್ರಮ ಕಟೌಟ್‌ಗಳು, ಫ್ಲೆಕ್ಸ್‌ಗಳ ಹಾವಳಿ ಮುಂದುವರಿದಿದೆ.

ಹೆಚ್ಚು ಜನಸಂದಣಿ ಇರುವ ಬಿ.ಎಚ್.ರಸ್ತೆ, ನೆಹರೂ ರಸ್ತೆ, ಗೋಪಿ ವೃತ್ತ, ಮಹಾವೀರ ವೃತ್ತ, ಬಾಲರಾಜ್ ಅರಸು ರಸ್ತೆ, ಶಿವಪ್ಪ ನಾಯಕ ವೃತ್ತ, ಹೊಳೆ ಬಸ್ ನಿಲ್ದಾಣ ಪ್ರಮುಖ ವೃತ್ತಗಳು ಸೇರಿ ಪಾದಚಾರಿ ಮಾರ್ಗಗಳಲ್ಲಿ, ವಿಭಜಕಗಳಲ್ಲಿರುವ ಬೀದಿ ದೀಪದ ಕಂಬಗಳು, ರಸ್ತೆ ಬದಿಯಲ್ಲಿರುವ ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರ ಸಂಚಾರಕ್ಕೂ ಅಡಚಣೆಯಾಗುತ್ತಿದೆ.

ಪೋಸ್ಟರ್‌ಗಳನ್ನು ಎಲ್ಲೆಂದರಲ್ಲಿ ಅಂಟಿಸದಂತೆ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ಅಲ್ಲಲ್ಲಿ ಜಿಲ್ಲಾಡಳಿತ ನಾಡಿನ ಸಮೃದ್ಧಿ ಬಿಂಬಿಸುವ ಚಿತ್ರಗಳನ್ನು ಬರೆಸಿದೆ. ಅದರ ಮೇಲೂ ಪೋಸ್ಟರ್‌ ಅಂಟಿಸಿ ಅಥವಾ ಅವು ಮರೆಯಾಗುವಂತೆ ಕಟೌಟ್ ಹಾಕುವುದು ನಿಂತಿಲ್ಲ. ತೆರವುಗೊಳಿಸುವ ಕಾರ್ಯವನ್ನೂ ಪಾಲಿಕೆ ಮಾಡುತ್ತಿಲ್ಲ.

ನಿಯಮವಿದೆ, ಪಾಲನೆ ಇಲ್ಲ!: ನಗರದಲ್ಲಿ ಸಂಘ–ಸಂಸ್ಥೆಗಳು, ಕಾರ್ಯಕ್ರಮ ಆಯೋಜಕರು ತಮಗೆ ತೋಚಿದೆಡೆ ಬ್ಯಾನರ್‌ಗಳು, ಫ್ಲೆಕ್ಸ್‌ಗಳನ್ನು ಹಾಕುತ್ತಾರೆ. ಪಾಲಿಕೆ ಅನುಮತಿ ಪಡೆಯಬೇಕೆಂಬ ನಿಯಮವಿದ್ದರೂ ಪಾಲಿಸುತ್ತಿಲ್ಲ. ಕಾರ್ಯಕ್ರಮ ಮುಗಿದರೂ ಅವುಗಳನ್ನು ತೆರವು ಮಾಡುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಯಾರ ಮೇಲೂ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಅನಧಿಕೃತ ಫ್ಲೆಕ್ಸ್‌ಗಳೇ ಹೆಚ್ಚು: ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ 99 ಕಡೆ ಫ್ಲೆಕ್ಸ್ ಅವಳವಡಿಕೆಗೆ ಅವಕಾಶ ನೀಡಲಾಗಿದೆ. ಆದರೆ, ನಗರದಲ್ಲಿ ಪ್ರತಿದಿನ ಕಾಣಸಿಗುವ ಫ್ಲೆಕ್ಸ್‌ಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಫ್ಲೆಕ್ಸ್‌ಗಳ ಹಾವಳಿ ಕಡಿಮೆಯಾಗಿತ್ತು. ಕೊರೊನಾ ಕಾರಣ ಚಿತ್ರಮಂದಿರಗಳ ಬಾಗಿಲು ಹಾಕಿದ ಪರಿಣಾಮ ಸಿನಿಮಾ ಫೋಸ್ಟರ್‌ಗಳಿಗೂ ಸ್ವಲ್ಪ ವಿರಾಮ ಬಿದ್ದಿತ್ತು. ಈಗ ಮತ್ತೆ ಪೋಸ್ಟರ್‌ಗಳ ಹಾವಳಿ ಮಿತಿಮೀರಿದೆ.

ನೀತಿಸಂಹಿತೆ ಇದ್ದಾಗ ಕಡಿವಾಣ!: ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಪ್ರಚಾರಕ್ಕೆ ಕಟ್ಟುವ ಬ್ಯಾನರ್‌, ಬಂಟಿಂಗ್ಸ್‌ ಮತ್ತು ಮುಖ್ಯರಸ್ತೆಯ ವಿಭಜಕದ ಗ್ರಿಲ್‌, ವಿದ್ಯುತ್‌ ಕಂಬಗಳಿಗೆ ಅಳವಡಿಸುವ ಪೋಸ್ಟರ್‌ಗಳ ತೆರವು ಕಾರ್ಯದಲ್ಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ.ಚುನಾವಣೆಗಳ ನೀತಿಸಂಹಿತೆ ಜಾರಿಯಾದ ಸಮಯದಲ್ಲಿ ಕಡ್ಡಾಯವಾಗಿ ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತದೆ. ನಂತರ ಅತ್ತ ತಲೆ ಹಾಕುವುದಿಲ್ಲ.

ರಾಜಕೀಯ ಮುಖಂಡರೇ ಮುಂದು: ಸ್ಥಳೀಯ ಆಡಳಿತದ ಅನುಮತಿ ಪಡೆಯದೇ ಫ್ಲೆಕ್ಸ್‌, ಬ್ಯಾನರ್‌ ಹಾಕುವುದರಲ್ಲಿ ರಾಜಕೀಯ ಪಕ್ಷಗಳ ಮುಖಂಡರೇ ಮುಂದೆ ಇದ್ದಾರೆ. ಇದರಲ್ಲಿ ಪಕ್ಷ ಭೇದವಿಲ್ಲ. ಸ್ಥಳೀಯ ನಾಯಕರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಇತರ ಗಣ್ಯರನ್ನು ಸ್ವಾಗತಿಸುವ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳು ನಗರದಾದ್ಯಂತ ರಾರಾಜಿಸುತ್ತವೆ. ಮುಖ್ಯಮಂತ್ರಿ, ಸಚಿವರು, ಪಕ್ಷದ ವರಿಷ್ಠರು ಜಿಲ್ಲೆಗೆ ಬರುವ ದಿನಗಳಲ್ಲಿ ವಾರದ ಮುನ್ನವೇ ಅವರನ್ನು ಸ್ವಾಗತಿಸುವ ತರಹೇವಾರಿ ಫ್ಲೆಕ್ಸ್, ಬ್ಯಾನರ್‌ಗಳು ಎಲ್ಲಡೆ ಕಾಣಸಿಗುತ್ತವೆ.

ಆದಾಯ ಮರೆತ ಪಾಲಿಕೆ: ‘ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ನಗರ ಪಾಲಿಕೆ ಅಧಿಕಾರಿಗಳು ಜಾಗ ಗುರುತು ಮಾಡಿದ್ದಾರೆ. ಪಾಲಿಕೆ ಗುರುತು ಮಾಡಿರುವ ಜಾಗದಲ್ಲಿ ಬಿಟ್ಟು ಬೇರೆಲ್ಲ ಜಾಗಗಳಲ್ಲೂ ಬ್ಯಾನರ್, ಫ್ಲೆಕ್ಸ್‌ಗಳ ಹಾವಳಿ ಇದೆ. ದೊಡ್ಡ ಬ್ಯಾನರ್‌ಗೆ ಸಾವಿರಾರು ರೂಪಾಯಿ ಖರ್ಚು ಮಾಡುವವರು ಅದನ್ನು ಹಾಕಲು ಅಷ್ಟೇ ಹಣ ಖರ್ಚು ಮಾಡುತ್ತಿದ್ದಾರೆ. ಫ್ಲೆಕ್ಸ್‌ ಅಳವಡಿಕೆಗೆ ಅಡಿಕೆ ಮರ ಒಳಗೊಂಡಂತೆ ಇತರೆ ಮರಗಳನ್ನು ಬಳಕೆ ಮಾಡುವ ಕಾರಣ ಪರಿಸರ ನಾಶವೂ ಆಗುತ್ತಿದೆ. ಹಾಗಾಗಿ, ಪಾಲಿಕೆಯಿಂದ ಗುರುತಿಸಿದ ಜಾಗದಲ್ಲಿ ಫ್ಲೆಕ್ಸ್ ಕಟ್ಟಲು ಸೂಕ್ತ ವ್ಯವಸ್ಥೆ ಮಾಡಿದರೆ, ಆದಾಯವೂ ಸಿಗುತ್ತದೆ. ಕಾರ್ಯಕ್ರಮ ಮುಗಿದ ಕೂಡಲೇ ತೆರವು ಮಾಡಲು ಅನುಕೂಲವಾಗುತ್ತದೆ. ನಗರದ ಸುಂದರವಾಗಿಯೂ ಇರುತ್ತದೆ’ ಎನ್ನುತ್ತಾರೆ ಪಾಲಿಕೆ ಸದಸ್ಯ ಎಚ್.ಸಿ.ಯೋಗೀಶ್.

***ರಾಜಕಾರಣಿಗಳಿಗೆ ಅನ್ವಯವಾಗದ ನಿಯಮಗಳು!
ಸಾಗರ:
ತಾಲ್ಲೂಕಿನಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸಬಾರದು ಎಂಬ ನಿಯಮವಿದ್ದರೂ ಅದು ರಾಜಕೀಯ ಪಕ್ಷಗಳಿಗೆ ಅನ್ವಯವಾಗುತ್ತಿಲ್ಲ. ಸಂಘ–ಸಂಸ್ಥೆಗಳ ಪ್ರಮುಖರು ತಮ್ಮ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಫ್ಲೆಕ್ಸ್ ಅಳವಡಿಸಿದರೆ ತಕ್ಷಣ ಕ್ರಮ ಕೈಗೊಳ್ಳುವ ಅಧಿಕಾರಿಗಳು ರಾಜಕಾರಣಿಗಳ ವಿಷಯದಲ್ಲಿ ಜಾಣ ಮೌನ ವಹಿಸುತ್ತಿದ್ದಾರೆ.

ಮಾರಿಕಾಂಬ ಜಾತ್ರೆ ವೇಳೆ ಫ್ಲೆಕ್ಸ್ ಅಳವಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ಇದರ ಪರಿಣಾಮ ಫ್ಲೆಕ್ಸ್ ಹಾವಳಿ ಇಲ್ಲದೆ ಜಾತ್ರೆ ಸುಗಮವಾಗಿ ನಡೆದಿತ್ತು. ನಂತರದ ದಿನಗಳಲ್ಲಿ ಪ್ರಮುಖ ರಾಜಕೀಯ ಪಕ್ಷವಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಮುಖಂಡರು ಈ ನಿಯಮವನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಿದ್ದಾರೆ. ರಾಜಕೀಯ ನಾಯಕರು ಭಾಗವಹಿಸುವ ಸಭೆ ಸಮಾರಂಭಗಳ ಫ್ಲೆಕ್ಸ್ ಅಳವಡಿಕೆ ಕಾರ್ಯ ನಿಂತಿಲ್ಲ.

ರಾಷ್ಟ್ರ ಹಾಗೂ ರಾಜ್ಯಮಟ್ಟದ ನಾಯಕರು ಬರುವ ಸಮಯದಲ್ಲಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗುತ್ತಿದೆ. ಫ್ಲೆಕ್ಸ್ ಅಳವಡಿಕೆ ವಿಷಯದಲ್ಲಿ ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಇನ್ನೊಂದು ಎನ್ನುವ ರೀತಿಯಲ್ಲಿ ಕಾನೂನಿನ ಪಾಲನೆಯಾಗುತ್ತಿದೆ.

***
ತನ್ನದೇ ನಿಷೇಧ ನಿರ್ಧಾರಕ್ಕೆ ಬದ್ಧವಾಗದ ನಗರಸಭೆ
ಭದ್ರಾವತಿ:
ಅಡ್ಡಾದಿಡ್ಡಿ ಕಟ್ಟುವ, ಪಾದಚಾರಿಗಳ ಮೇಲೆ ಬೀಳುತ್ತದೋ ಎನ್ನುವ ಸ್ಥಿತಿಯಲ್ಲಿರುವ, ಪ್ರಮುಖ ವೃತ್ತದ ನಾಮಫಲಕ ಕಾಣದಂತೆ ಅಳವಡಿಸಿದ ಫಲಕಗಳ ಅಬ್ಬರ, ಫಲಕಕ್ಕೆ ಬಾಯಿ ಹಾಕಿ ನಿಲ್ಲುವ ಕತ್ತೆಗಳು, ಹಸು, ದನಗಳ ಚಿತ್ರಣಗಳು ಭದ್ರಾವತಿಯ ಪ್ರಮುಖ ವೃತ್ತಗಳಲ್ಲಿನ ಫ್ಲೆಕ್ಸ್ ಹಾವಳಿಗೆ ಹಿಡಿದ ಕೈಗನ್ನಡಿ.

ಫ್ಲೆಕ್ಸ್ ವಿಚಾರದಲ್ಲಿ 2010–11ನೇ ಸಾಲಿನಿಂದ ಗಲಾಟೆ ನಡೆದು ಪ್ರಕರಣಗಳು ದಾಖಲಾದ ನಂತರ ಅನಧಿಕೃತ ಫಲಕಗಳು ಬೇಡ ಎಂದು ನಿರ್ಧರಿಸಿದ ನಗರಸಭಾ ಸದಸ್ಯರೇ ಈಗ ಫ್ಲೆಕ್ಸ್ ಹಾಕಲು ತಾ ಮುಂದು, ನಾ ಮುಂದು ಎಂದು ಮುಂದಡಿ ಇಡುತ್ತಿರುವ ಪರಿಸ್ಥಿತಿ ಮತ್ತೆ ಸೃಷ್ಟಿಯಾಗಿದೆ.

2013–14ನೇ ಸಾಲಿನಲ್ಲಿ ಅಂದಿನ ನಗರಸಭೆಯು ಪ್ರಮುಖ ವೃತ್ತಗಳಲ್ಲಿ ಹಾಕುವ ಫ್ಲೆಕ್ಸ್, ಇನ್ನಿತರೆ ಫಲಕಗಳ ನಿಷೇಧಕ್ಕೆ ನಿರ್ಧಾರ ತೆಗೆದುಕೊಂಡಿತ್ತು. ಇದರಿಂದ ಜಿಲ್ಲಾ ಮಟ್ಟದಲ್ಲಿ ಫ್ಲೆಕ್ಸ್ ನಿಷೇಧ ಹೇರಿದ ಮೊದಲ ನಗರಸಭೆ ಎಂಬ ಹೆಗ್ಗಳಿಕೆ ಸಹ ಸಿಕ್ಕಿತ್ತು. ಆದರೆ, ಈ ನಿರ್ಧಾರ ತೆಗೆದುಕೊಂಡ ಕೆಲವೇ ದಿನದಲ್ಲಿ ಇದೇ ಸದಸ್ಯರು ದೇವಾಲಯ ಉದ್ಘಾಟನೆ, ಜಾತ್ರಾ ಮಹೋತ್ಸವಕ್ಕೆ ಅವಕಾಶ ಕೊಡಿ. ರಾಜಕಾರಣಿಗಳ ಪೋಸ್ಟರ್‌ಗಳಿಗೆ ಅವಕಾಶ ಬೇಡ ಎಂದು ನಿರ್ಧರಿಸಿದ್ದರು. ಕಾಲಾನಂತರ ಮಾಮೂಲಿನಂತೆ ಫ್ಲೆಕ್ಸ್ ಅವಾಂತರ ನಗರದಲ್ಲಿ ಮುಂದುವರಿದಿದೆ.

ಶುಲ್ಕ ಏರಿಕೆ, ಬಟ್ಟೆ ಫ್ಲೆಕ್ಸ್‌ಗಳಿಗೆ ಅವಕಾಶ: ನಿಷೇಧ ನಿರ್ಧಾರ ನಂತರ ಬದಲಾವಣೆಯಾದ ನಗರಸಭಾ ಸದಸ್ಯರು ತಮ್ಮ ನಗರಸಭೆಗೆ ಆರ್ಥಿಕ ಮೂಲ ಸಿಗಲಿದೆ ಎಂಬ ಕುಂಟುನೆಪ ಹೇಳಿ ಫ್ಲೆಕ್ಸ್ ಹಾಕುವವರು ಶುಲ್ಕ ಕಟ್ಟಬೇಕು ಎಂಬ ನಿರ್ಣಯ ಮಾಡಿದ್ದಾರೆ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋದ ಅಧಿಕಾರಿಗಳು ಪ್ಲಾಸ್ಟಿಕ್ ನಿಷೇಧದ ನಂತರ ಫ್ಲೆಕ್ಸ್ ಹಾಕುವುದಾದರೆ ಬಟ್ಟೆ ಫ್ಲೆಕ್ಸ್ ಹಾಕಿ, ಶುಲ್ಕ ಕಟ್ಟಿ ಎಂದು ಠರಾವು ಹೊರಡಿಸಿದ್ದಾರೆ.

ಮಾಧವಾಚಾರ್ ವೃತ್ತ, ರಂಗಪ್ಪವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ ಹೀಗೆ ಹತ್ತು ಹಲವು ವೃತ್ತಗಳಲ್ಲಿ ಪ್ರತಿದಿನ ಒಂದಿಲ್ಲೊಂದು ಫ್ಲೆಕ್ಸ್ ಪ್ರದರ್ಶನ ನಡೆಯುವುದು ಸಾಮಾನ್ಯವಾಗಿದೆ. ಶುಲ್ಕ ಕಟ್ಟಿ ಪರವಾನಗಿ ಪಡೆಯದ ಫಲಕಗಳನ್ನು ತೆಗೆಸುವ ನಗರಸಭೆ ಅಧಿಕಾರಿಗಳು, ಅದನ್ನು ತೆಗೆದ ಎರಡು ಗಂಟೆ ಒಳಗೆ ಪುನಃ ಅದನ್ನು ಕಟ್ಟಿಸುವ ಪರಿಸ್ಥಿತಿ ನಗರದಲ್ಲಿದೆ.

‘ಬಟ್ಟೆ ಫ್ಲೆಕ್ಸ್ ದುಬಾರಿ, ಪ್ಲಾಸ್ಟಿಕ್ ಕಡಿಮೆ ಹಾಗಾಗಿ ನಾವು ಪ್ಲಾಸ್ಟಿಕ್ ಫ್ಲೆಕ್ಸ್ ಎರಡು ದಿನದೊಳಗೆ ತೆಗೆಯುತ್ತಿದ್ದೇವೆ’ ಎನ್ನುವ ಇಲ್ಲಿನ ಜನರಿಗೆ ನಿಷೇಧದ ಪ್ರಸ್ತಾವ ಗೊತ್ತೇ ಇಲ್ಲ. ಇದಕ್ಕೆ ಮಾಜಿ ನಗರಸಭಾ ಸದಸ್ಯರು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರೂ ಹೊರತಲ್ಲ ಎಂಬುದು ಸಾಬೀತಾಗಿದೆ. ನಗರಸಭಾ ಸದಸ್ಯರು ಹಿಂದೆ ತೆಗೆದುಕೊಂಡ ನಿರ್ಧಾರ ಅವರ ಅನುಕೂಲಕ್ಕೆ ತಕ್ಕಂತೆ ಬದಲಾಯಿತು. ಆದರೆ, ಫ್ಲೆಕ್ಸ್ ಅವಾಂತರ ನಿಂತಿಲ್ಲ’ ಎನ್ನುತ್ತಾರೆ ವ್ಯಾಪಾರಿ ಗಣೇಶಪ್ಪ.

ಯಾರದೋ ಹೆದರಿಕೆಗೆ ನಿಷೇಧ ನಾಟಕವಾಡಿದ ಅಂದಿನ ನಗರಸಭೆಯ ಚುನಾಯಿತರು ಅವರನ್ನು ಹತ್ತಿಕ್ಕಿದ ಭರದಲ್ಲಿ ತಮ್ಮ ಆದೇಶವನ್ನೇ ಗಾಳಿಗೆ ತೂರಿದ್ದು ಮಾತ್ರ ವಿಪರ್ಯಾಸದ ಸಂಗತಿ.

ಬ್ಲೇಡ್ ಸಂಸ್ಕೃತಿ ವಿರುದ್ಧ ಪ್ರಕಕರಣ: ಫ್ಲೆಕ್ಸ್ ನಿಷೇಧಕ್ಕೆ ನಗರಸಭಾ ಸದಸ್ಯರು ತೀರ್ಮಾನ ತೆಗೆದುಕೊಳ್ಳುವ ಮುನ್ನ ಅಪ್ಪಾಜಿ, ಬಿ.ಕೆ.ಸಂಗಮೇಶ್ವರ ಹಾಗೂ ಯಡಿಯೂರಪ್ಪ ಅವರ ಫ್ಲೆಕ್ಸ್‌ಗಳಿಗೆ ಬ್ಲೇಡ್ ಹಾಕಿ
ಹರಿದ ಘಟನೆ ಸಂಬಂಧ ಹಳೇನಗರ ಠಾಣೆ, ಹೊಸಮನೆ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು.

ಇದಲ್ಲದೆ ಫ್ಲೆಕ್ಸ್ ಮೂಲಕವೇ ರಾಜಕಾರಣ ಮಾಡುತ್ತಿದ್ದ ಕೆಲವು ಪ್ರಮುಖರ ಆರ್ಭಟ ಹತ್ತಿಕ್ಕುವ ಯತ್ನದ ಭಾಗವಾಗಿ 2013–14ರಲ್ಲಿನ ನಗರಸಭೆ ನಿಷೇಧದ ತೀರ್ಮಾನ ಕೈಗೊಂಡಿತ್ತು. ಕೆಲವೇ ತಿಂಗಳಲ್ಲಿ ನಿಷೇಧ ತೆರವುಗೊಳಿಸಿ, ಪಟ್ಟಭದ್ರರ ಹಿತಾಸಕ್ತಿಗೆ ತಲೆಬಾಗಿತ್ತು.

***
ತೀರ್ಥಹಳ್ಳಿ ಪಟ್ಟಣದ ಅಂದಗೆಡಿಸುವ ಫ್ಲೆಕ್ಸ್‌ಗಳು
ತೀರ್ಥಹಳ್ಳಿ:
ಮಲೆನಾಡಿನ ತವರು ತೀರ್ಥಹಳ್ಳಿಗೆ ತನ್ನದೇ ಆದ ವಿಶೇಷಗಳಿವೆ. ತಾಲ್ಲೂಕಿನ ಇಬ್ಬರು ಸಾಹಿತ್ಯ ದಿಗ್ಗಜರು ಜ್ಞಾನಪೀಠ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿ, ಚಳವಳಿಗೆ ಇಲ್ಲಿನ ನೆಲ ಮಹನೀಯರನ್ನು ನೀಡಿದೆ.

ಮಂಗಳೂರು ಹೆಂಚಿನ ಕೂಡು ಮಾಡುಗಳಿಂದ ಕೂಡಿದ್ದ ತೀರ್ಥಹಳ್ಳಿ ಪಟ್ಟಣದ ಆಜಾದ್ ಮುಖ್ಯರಸ್ತೆಯನ್ನು ಈಗ ವಿಸ್ತರಿಸಲಾಗಿದೆ. ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುಸಜ್ಜಿತವಾದ ಕಾಂಕ್ರೀಟ್ ರಸ್ತೆ ಮಧ್ಯದಲ್ಲಿ ರಸ್ತೆ ವಿಭಜಕದ ನಡುವೆ ಸಸ್ಯಗಳನ್ನು ಬೆಳೆಸಲಾಗಿದೆ. ನಗರಗಳಲ್ಲಿನ ರಸ್ತೆಯ ಮೆರುಗನ್ನು ಪಟ್ಟಣದ ರಸ್ತೆಗೆ ನೀಡಲಾಗಿದೆ.

ಕಿಷ್ಕಿಂಧೆಯಂತಿದ್ದ ರಸ್ತೆ ವಿಸ್ತರಣೆಯಿಂದ ಪಟ್ಟಣದ ಸೌಂದರ್ಯ ಹೆಚ್ಚಿದೆ. ಸಾರ್ವಜನಿಕರ ಓಡಾಟಕ್ಕೆ ಫುಟ್‌ಪಾತ್, ಅಲ್ಲಲ್ಲಿ ರಸ್ತೆ ದಾಟಲು ಅವಕಾಶ ಕಲ್ಪಿಸಲಾಗಿದೆ. ಅಚ್ಚುಕಟ್ಟಾದ ಕಾಮಗಾರಿಗಳಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಆದರೆ, ಪಟ್ಟಣ ಪಂಚಾಯಿತಿಯ ಬೇಜವಾಬ್ದಾರಿಯಿಂದಾಗಿ ಎಲ್ಲೆಡೆ ಫ್ಲೆಕ್ಸ್‌ಗಳ ಅಳವಡಿಕೆಗೆ ಅವಕಾಶ ನೀಡಿರುವುದರಿಂದ ಪಟ್ಟಣದ ಅಂದ ಕಳೆಗುಂದಿದೆ.

ಪಟ್ಟಣದ ಆಗುಂಬೆ ವೃತ್ತ, ಗಾಂಧಿ ಚೌಕ, ಕೊಪ್ಪ ಸರ್ಕಲ್, ಕುಶಾವತಿ ಬಳಿ ಜಾಹೀರಾತು, ಚುನಾವಣಾ ಪ್ರಚಾರದ ಫ್ಲೆಕ್ಸ್‌ಗಳನ್ನು ಅಡ್ಡಾದಿಡ್ಡಿಯಾಗಿ ಅಳವಡಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ, ರಸ್ತೆ ವಿಭಜಕಗಳ ನಡುವೆ, ಹೈಮಾಸ್ಟ್‌ ವಿದ್ಯುತ್ ಕಂಬಗಳನ್ನೂ ಬಿಡದೆ ಫ್ಲೆಕ್ಸ್ ಕಟ್ಟಲಾಗಿದೆ. ಪ್ಲಾಸ್ಟಿಕ್ ನಿಷೇಧದ ನಿಯಮ ಪಾಲನೆಯಾಗುತ್ತಿಲ್ಲ. ಮಿತಿ ಮೀರಿದ ಫ್ಲೆಕ್ಸ್ ಅಳವಡಿಕೆಯಿಂದಾಗಿ ರಸ್ತೆ ಮಾರ್ಗ ಸೂಚಿಸುವ ಫಲಕಗಳು ಕಾಣದಂತಾಗಿವೆ.

‘ಸಂಚಾರಕ್ಕೂ ಅಡಚಣೆಯಾಗಿದೆ. ತಿರುವಿನಲ್ಲಿ ಬೃಹತ್ ಗಾತ್ರದ ಫ್ಲೆಕ್ಸ್ ಅಳವಡಿಸಿದ್ದರಿಂದ ವಾಹನ ಚಾಲಕರ ಗಮನ ಅತ್ತ ಕಡೆ ಹೊರಳುತ್ತದೆ. ಅಪಾಯಕ್ಕೂ ದಾರಿ ಮಾಡಿಕೊಟ್ಟಿದೆ’ ಎನ್ನುತ್ತಾರೆ ನಾಗರಿಕ ಅಭಿಷೇಕ್.

ಪಟ್ಟಣ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಪಟ್ಟಣ ಪಂಚಾಯಿತಿ ಅನುಮತಿ ಪಡೆಯದೆ ಫ್ಲೆಕ್ಸ್ ಅಳವಡಿಕೆಗೆ ಅವಕಾಶವಿಲ್ಲ. ಅನುಮತಿ ಪಡೆದ ಜಾಹೀರಾತು ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಲಾಗಿದೆ. ಆದಾಯ ಗಳಿಕೆ ಕಾರಣ ನಿಯಮದ ಅಡಿಯಲ್ಲಿ ಅವಕಾಶ ನೀಡಲಾಗಿದೆ’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಕೋಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT