ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಅಡಿಕೆಯಿಂದ ಆಹಾರ ಬೆಳೆ ಕುಂಠಿತ: ಸಿ.ವಾಸುದೇವ ಕಳವಳ

ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಡಾ. ಸಿ.ವಾಸುದೇವ ಕಳವಳ
Last Updated 18 ಮಾರ್ಚ್ 2023, 5:34 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಲಾಭ ಪಡೆಯಲು ರೈತರು ಅಡಿಕೆ ಬೆಳೆಯ ಕಡೆ ವಾಲುತ್ತಿದ್ದಾರೆ. ಆಹಾರ ಧಾನ್ಯಗಳ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಭತ್ತದ ಬೆಳೆಗೆ ಹೊಡೆತ ಬೀಳುವ ಸಾಧ್ಯತೆ ಇದೆ’ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಸಿ.ವಾಸುದೇವ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ನವುಲೆ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಆರಂಭಗೊಂಡ ನಾಲ್ಕು ದಿನಗಳ ‘ಕೃಷಿ ಮತ್ತು ತೋಟಗಾರಿಕಾ ಮೇಳ’ದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರದ ಐಕ್ಯತೆ ಕಾಪಾಡಲು ಆಹಾರ ಭದ್ರತೆ ಮುಖ್ಯ. ರೈತರು ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದರು.

‘ಕೃಷಿ ಮತ್ತು ತೋಟಗಾರಿಕಾ ಮೇಳ’ವನ್ನು ಶುಕ್ರವಾರ ಉದ್ಘಾಟಿಸಿದ ಪ್ರಗತಿಪರ ರೈತ ಪ್ರಕಾಶ್ ಮಂಚಾಲೆ, ‘ಮಣ್ಣಿನ ಗುಣಧರ್ಮದ ಮೇಲೆ ನಮ್ಮ ಕೃಷಿ ನಿಂತಿದೆ. ಸಾವಯವ ಕೃಷಿಯಿಂದ ಮಣ್ಣಿನಲ್ಲಿ ಸೂಕ್ಷ್ಮಜೀವಿ ಜಗತ್ತು ಸೃಷ್ಟಿಯಾಗುತ್ತದೆ. ಹೀಗಾಗಿ ಸೂಕ್ಷ್ಮಜೀವಿಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ವಿಶ್ವವಿದ್ಯಾಲಯದ ಲ್ಯಾಬ್‌, ವಿದ್ಯಾರ್ಥಿಗಳು, ಪ್ರಾಧ್ಯಾಪಕರಿಗೆ ಮಾತ್ರ ಸೀಮಿತವಾಗಬಾರದು. ಅವುಗಳ ಕುರಿತ ಮಾಹಿತಿಯನ್ನು ವಿಶ್ವವಿದ್ಯಾಲಯಗಳು ರೈತರಿಗೂ ಹಂಚಬೇಕು. ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಕೆಗೂ ಮಾರ್ಗದರ್ಶನ ನೀಡಬೇಕು’ ಎಂದರು.

‘ರೈತರು ಕೃಷಿಯಲ್ಲಿ ವ್ಯವಹಾರ ಜ್ಞಾನ ಇಟ್ಟುಕೊಂಡು ಬೆಳೆ ಬೆಳೆಯಬೇಕು‌. ಕುರಿ, ಕೋಳಿ, ಮೀನು ಸಾಕಾಣಿಕೆ, ರೇಷ್ಮೆ ಬೆಳೆಯಂತಹ ಉಪಕಸುಬನ್ನು ಮಾಡಬೇಕು’ ಎಂದು ಸೊರಬದ ಪ್ರಗತಿಪರ ರೈತ ದೊಡ್ಡಗೌಡ ಸಿ. ಪಾಟೀಲ್ ಸಲಹೆ ನೀಡಿದರು.

‘ಮೇಳದಲ್ಲಿ ರೈತರಿಗೆ ಕೃಷಿ ಬಗ್ಗೆ ತಜ್ಞರಿಂದ ಸಲಹೆ ನೀಡಲಾಗುವುದು. ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟನಾಶಕವನ್ನು ರೈತರಿಗೆ ಹಂಚಲಾಗುವುದು. ಈ ವರ್ಷ ಸಿರಿಧಾನ್ಯಗಳಿಗೆ ಹಚ್ಚಿನ ಒತ್ತು ನೀಡಲಾಗಿದೆ. ಹಲಸಿನ ಸಸ್ಯ, ಗೋಡಂಬಿ ಸಸ್ಯ, ತೆಂಗು, ಅಡಿಕೆ, ಸೇರಿದಂತೆ 1.5 ಲಕ್ಷ ಸಸಿಗಳು ಮೇಳದಲ್ಲಿ ಮಾರಾಟಕ್ಕೆ ಇಡಲಾಗಿದೆ’ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಆರ್.ಸಿ. ಜಗದೀಶ್ ಹೇಳಿದರು.

ವಿಶ್ವವಿದ್ಯಾಲಯದ ಮಾಹಿತಿಯನ್ನು ರೈತರಿಗೆ ತಲುಪಿಸಲು ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಲಾಯಿತು. ಮೊದಲ ದಿನ ನೂರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸೇರಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.

ನೂರಕ್ಕೂ ಹೆಚ್ಚು ಬಗೆಯ ಭತ್ತದ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜೈವಿಕ ಗೊಬ್ಬರ, ಜೈವಿಕ ನಿಯಂತ್ರಕ, ಜೇನು ಹಾಗೂ ಹಲವು ಬಗೆಯ ಧಾನ್ಯಗಳನ್ನು ಕಾಣಬಹುದಾಗಿದೆ. ರೈತರು ಯಂತ್ರೋಪಕರಣಗಳ ಕುರಿತು ಮಾಹಿತಿ ಪಡೆದರು.

ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಮೃತ್ಯುಂಜಯ ವಾಲಿ, ಕೃಷಿ ಮತ್ತು ತೋಟಗಾರಿಕೆ ಮೇಳದ ವಿಸ್ತರಣಾ ನಿರ್ದೇಶಕ ಡಾ. ಬಿ. ಹೇಮ್ಲಾ ನಾಯಕ್, ಕೃಷಿ ಉದ್ದಿಮೆದಾರ ಬಿ. ಶಿವರಾಮ್, ಚನ್ನಗಿರಿ ಪ್ರಗತಿಪರ ರೈತ ಕೆ.ನಾಗರಾಜ್, ಡಾ. ಎಚ್.ಎನ್. ಹರೀಶ್, ಡಾ.ಲೋಕೇಶ್ ಆರ್., ತಿಪ್ಪೇಶ್ ಅವರೂ ಈ ಸಂದರ್ಭದಲ್ಲಿ ಇದ್ದರು.

ಗಮನಸೆಳೆದ ಕೀಟ ಪ್ರಪಂಚ

ಮೂಡಿಗೆರೆಯ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿರುವ ‘ಕೀಟ ಪ್ರಪಂಚ’ ಜನರ ಗಮನ ಸೆಳೆಯುತ್ತಿದೆ.

‘ಪ್ರಪಂಚದಲ್ಲಿ 10.5 ಲಕ್ಷ ಕೀಟಗಳನ್ನು ಗುರುತಿಸಲು ಸಂಶೋಧನೆ ನಡೆಯುತ್ತಿದೆ. ನಮ್ಮ ಸಂಶೋಧನಾ ಕೇಂದ್ರದಲ್ಲಿ ಸುಮಾರು 1.5 ಲಕ್ಷ ಕೀಟದ ಅವಶೇಷವನ್ನು ಶೇಖರಿಸಿ ಇಡಲಾಗಿದೆ. ಶಿವಮೊಗ್ಗ ಸಂಶೋಧನಾ ಕೇಂದ್ರದಿಂದ ‘ಸ್ಪೋಡೋಪ್ಟೆರಾ ಫ್ರುಗಿಪೆಡ್ರಾ’ ಎಂಬ ಒಂದು ಕೀಟವನ್ನು ಗುರತಿಸಲಾಗಿದೆ. ಈ ಕೀಟ 2018ರಿಂದ ಮೆಕ್ಕೆಜೋಳಕ್ಕೆ ಅತಿ ಹೆಚ್ಚಾಗಿ ಕಾಡುತ್ತಿದೆ. ಪ್ರತಿ ತಿಂಗಳಿಗೆ 1,500 ಸಾವಿರ ಮೊಟ್ಟೆಯನ್ನು ಇಡುತ್ತದೆ. ಕೀಟನಾಶಕ ಸಿಂಪಡಿಸುವ ಮೂಲಕ ಹತೋಟಿಗೆ ತರಬಹುದು’ ಎಂದು ಮೂಡಿಗೆರೆಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಪ್ರಾಧ್ಯಾಪಕ ಡಾ. ಹನುಮಂತರಾಯ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT