ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: 18, 19ರಂದು ಮುಪ್ಪಾನೆಯಲ್ಲಿ ಕಪ್ಪೆ ಹಬ್ಬ

Last Updated 16 ಡಿಸೆಂಬರ್ 2021, 5:10 IST
ಅಕ್ಷರ ಗಾತ್ರ

ಶಿವಮೊಗ್ಗ: ಇದೇ ಮೊದಲ ಬಾರಿಗೆ ಶಿವಮೊಗ್ಗ ವನ್ಯಜೀವಿ ವಿಭಾಗದಿಂದ ಸಾಗರ ತಾಲ್ಲೂಕಿನ ಕಾರ್ಗಲ್‌ನ ಮುಪ್ಪಾನೆ ಪ್ರಕೃತಿ ಶಿಬಿರದಲ್ಲಿ ಡಿ. 18 ಮತ್ತು 19ರಂದು ಕಪ್ಪೆ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಶಿವಮೊಗ್ಗ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ. ನಾಗರಾಜ್ ತಿಳಿಸಿದರು.

ಪಶ್ಚಿಮಘಟ್ಟದ ವಿಶಿಷ್ಟ ಜೀವಪ್ರಭೇದವಾದ ಕಪ್ಪೆಗಳ ಕುರಿತು ಹೊಸ ತಲೆಮಾರಿನಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ನಡೆಯುವ ಕಪ್ಪೆ ಹಬ್ಬದಲ್ಲಿ ಉಭಯವಾಸಿಗಳ ಕುರಿತು ಪರಿಣತರ ವಿಚಾರ ಮಂಡನೆ, ಸಂವಾದ, ಸಾಕ್ಷ್ಯಚಿತ್ರ ಮತ್ತು ಛಾಯಾಚಿತ್ರ ಪ್ರದರ್ಶನ, ಫ್ರಾಗ್ ವಾಕ್ ಮುಂತಾದ ಚಟುವಟಿಕೆಗಳು ನಡೆಯಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಪರೂಪದ ಕಪ್ಪೆ ಪ್ರಭೇದಗಳ ನೆಲೆವೀಡು ಶರಾವತಿ ಕಣಿವೆಯಲ್ಲಿಯೇ ಈ ಹಬ್ಬವನ್ನು ನಡೆಸುತ್ತಿರುವ ಮುಖ್ಯ ಉದ್ದೇಶ ಸ್ಥಳೀಯ ಜನರಿಗೆ ಕಪ್ಪೆಗಳ ಸಂತತಿಯ ವೈವಿಧ್ಯ, ಒಟ್ಟಾರೆ ಜೀವ ವೈವಿಧ್ಯ ಸರಪಳಿಯಲ್ಲಿ ಅವುಗಳ ಮಹತ್ವ, ಜೀವ ವೈವಿಧ್ಯ ಸಮತೋಲನ ಕಾಪಾಡುವಲ್ಲಿ ಅವುಗಳ ಪಾತ್ರ ಮತ್ತು ಪರಿಸರಕ್ಕೆ ಅವುಗಳ ಕೊಡುಗೆಯನ್ನು ತಿಳಿಸಿಕೊಡುವ ಮೂಲಕ ಕಪ್ಪೆಗಳ ಸಂತತಿ ಸಂರಕ್ಷಣೆಯ ನಿಟ್ಟಿನಲ್ಲಿ ಸ್ಥಳೀಯರನ್ನೂ ಒಳಗೊಳ್ಳುವುದಾಗಿದೆ’ ಎಂದು ಮಾಹಿತಿ
ನೀಡಿದರು.

‘ಕೃಷಿಯಲ್ಲಿ ರಾಸಾಯನಿಕ ಬಳಕೆ, ಕಾಡು ನಾಶ, ಕಾಡಿನೊಳಗೆ ಮಾನವ ಹಸ್ತಕ್ಷೇಪ, ಹವಾಮಾನ ವೈಪರೀತ್ಯದಂತಹ ಕಾರಣಗಳಿಂದಾಗಿ ಪಶ್ಚಿಮಘಟ್ಟದ ಎಲ್ಲೆಡೆಯಂತೆ ಶರಾವತಿ ಕಣಿವೆಯಲ್ಲಿ ಕೂಡ ಉಭಯವಾಸಿಗಳ ಅಪರೂಪದ ಪ್ರಭೇದಗಳು ಅಳಿವಿನಂಚಿನಲ್ಲಿವೆ. ಪರಿಸರದ ಆರೋಗ್ಯ ಸೂಚಕ ಜೀವಿಗಳು ಎಂದು ಗುರುತಿಸಲಾಗುವ ಕಪ್ಪೆಗಳ ಅವಸಾನ ನಿಜಕ್ಕೂ ಆತಂಕದ ಬೆಳವಣಿಗೆ. ಹೀಗಾಗಿ ಆ ವಿಶಿಷ್ಟ ಜೀವಿಯ ಸಂರಕ್ಷಣೆ ಮತ್ತು ಅದರ ಜೀವ ವೈವಿಧ್ಯದ ಮಹತ್ವದ ಕುರಿತು ಜನಜಾಗೃತಿಯ ಪ್ರಯತ್ನವಾಗಿ ಕಪ್ಪೆ ಹಬ್ಬ ಆಯೋಜಿಸಲಾಗಿದೆ’ ಎಂದು ವಿವರಿಸಿದರು.

‘ಈ ಹಬ್ಬದಲ್ಲಿ ಅಂತರರಾಷ್ಟ್ರೀಯ ಮಟ್ಟದ ಉಭಯವಾಸಿ ಸಂಶೋಧಕ ವಿಜ್ಞಾನಿ ಡಾ ಕೆ.ವಿ.ಗುರುರಾಜ್, ಉಭಯವಾಸಿ ಸಂರಕ್ಷಣಾ ತಜ್ಞ ಓಂಕಾರ್ ಪೈ, ಡಾ.ಪ್ರೀತಿ ಹೆಬ್ಬಾರ್, ಡಾ. ಶೇಷಾದ್ರಿ ಕೆ.ಎಸ್, ಡಿಸಿಎಫ್ ಬಿ.ಎಂ. ರವೀಂದ್ರ ಕುಮಾರ್, ಡಾ.ವಿನೀತ್ ಕುಮಾರ್ ಮತ್ತಿತರ ತಜ್ಞರು ಉಭಯವಾಸಿಗಳ ಕುರಿತ ವಿವಿಧ ಅಧ್ಯಯನಗಳ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೇ, ಅರಣ್ಯ ಇಲಾಖೆ ಮತ್ತು ಸಾರ್ವಜನಿಕರ ನಡುವಿನ ವಿವಿಧ ಸಂಶೋಧಕರು ಕೂಡ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ’ ಎಂದರು.

ಡಿ. 18ರಂದು ಬೆಳಿಗ್ಗೆ 11ಕ್ಕೆ ಕಪ್ಪೆ ಹಬ್ಬವನ್ನು ರಾಜ್ಯ ಅರಣ್ಯ ಪಡೆಯ ಮುಖ್ಯಸ್ಥರಾದ ಪಿಸಿಸಿಎಫ್ ಸಂಜಯ್ ಮೋಹನ್ ಉದ್ಘಾಟಿಸುವರು. ಪಿಸಿಸಿಎಫ್ (ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ) ರೀತು ಕಕ್ಕರ್ ಭಾಗವಹಿಸುವರು. ಡಿ. 19ರಂದು ಮಧ್ಯಾಹ್ನ 12ಕ್ಕೆ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಗಲ್‌ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್, ಶಶಿ ಸಂಪಳ್ಳಿ, ಕಾರ್ತಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT