ಶಿವಮೊಗ್ಗ: ಇಲ್ಲಿನ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಸಂಘಟನೆಗಳ ಮಹಾಮಂಡಳ 80ನೇ ವರ್ಷ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾಪೂರ್ವ ರಾಜಬೀದಿ ಉತ್ಸವ ಮಂಗಳವಾರ ವೈಭವದಿಂದ ನೆರವೇರಿತು.
ಹೊತ್ತು ಏರುವ ಮುನ್ನ ಆರಂಭವಾಗಿ ತಡರಾತ್ರಿವರೆಗೂ ಮುಂದುವರೆದ ಗಣಪನ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡು ಅಗ್ರಪೂಜಿತನಿಗೆ ಭಕ್ತಿ ಸಮರ್ಪಿಸಿದರು. ಇಡೀ ನಗರ ಕೇಸರಿಮಯವಾಗಿ ಮಾರ್ಪಟ್ಟಿತ್ತು.
ಭೀಮೇಶ್ವರ ಗುಡಿಯ ಆವರಣದಲ್ಲಿ ಬೆಳಿಗ್ಗೆ 11.11ಕ್ಕೆ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು. ಶಾಸಕ ಎಸ್.ಎನ್. ಚನ್ನಬಸಪ್ಪ, ತಹಶೀಲ್ದಾರ್ ಗಿರೀಶ್, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಸಹಕಾರ್ಯವಾಹ ಎಸ್. ಪಟ್ಟಾಭಿರಾಮ್, ಹಿಂದೂ ಮಹಾಸಭಾ ಸಂಘಟನೆಯ ಪ್ರಮುಖ ಆರ್.ಸುರೇಶ್‌ಕುಮಾರ್, ಕೋಟೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಹರೀಶ್ ಕೆ.ಪಟೇಲ್ ಈ ವೇಳೆ ಹಾಜರಿದ್ದರು.ಅರ್ಚಕರಾದ ನಾಗಭೂಷಣ ಹಾಗೂ ರಾಮಚರಣ ತಂಡದವರು ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪೊಲೀಸರ ಬಿಗಿ ಬಂದೋಬಸ್ತ್, ಯುವಜನರ ಕಲರವ, ಮಹಿಳೆಯರು, ಮಕ್ಕಳು, ಹಿರಿಯರು ಎನ್ನದೇ ಭಕ್ತ ಸಮೂಹ ಮೆರವಣಿಗೆಯಲ್ಲಿ ಸಾಗಿಬಂದಿತು. ಮೆರವಣಿಗೆಯಲ್ಲಿ ಕಲಾತಂಡಗಳು, ಮಂಗಳ ವಾದ್ಯ, ಚಂಡೆಮೇಳ, ಡೊಳ್ಳು ಕುಣಿತ, ಹುಲಿ ಕುಣಿತ, ಕಹಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ರಂಗು ತಂದವು. ರಾಜಬೀದಿ ಉತ್ಸವ ಸಾಗಿಬಂದ ಎಸ್‌ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ಮನೆ ಮುಂದೆ ರಂಗೋಲಿ ಹಾಕಿ ಚಿತ್ತಾಕರ್ಷಕ ಬಣ್ಣ ಹಾಕಿ ಸ್ಥಳೀಯರು ಸ್ವಾಗತಿಸಿದರು. ಮಾರ್ಗದುದ್ದಕ್ಕೂ ಅಪಾರ ಸಂಖ್ಯೆಯ ಜನ ವೀಕ್ಷಿಸಲು ಕಾದು ನಿಂತಿದ್ದರು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಭಗವಾಧ್ವಜ ಹಿಡಿದು ಯುವಕರು ಜೈ ಶ್ರೀರಾಮ್ ಘೋಷಣೆ ಕೂಗಿದರು.
ಗಣೇಶನ ರಾಜಬೀದಿ ಉತ್ಸವದ ಹಿನ್ನೆಲೆಯಲ್ಲಿ ಎಸ್‌ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್ ಮುಖ್ಯ ರಸ್ತೆ, ಶಿವಪ್ಪನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಬಿ.ಎಚ್.ರಸ್ತೆ, ಅಶೋಕವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ದುರ್ಗಿಗುಡಿ, ಮಹಾವೀರ ವೃತ್ತ, ಬಾಲರಾಜ್ ಅರಸು ರಸ್ತೆ, ಎಂಆರ್‌ಎಸ್ ವೃತ್ತಗಳಲ್ಲಿ ಕೇಸರಿ ಬಾವುಟ, ಬ್ಯಾನರ್, ಬಂಟಿಂಗ್ಸ್ ರಾರಾಜಿಸಿದವು.
ಗಾಂಧಿಬಜಾರ್‌ನ ಪ್ರವೇಶ ಸ್ಥಳದಲ್ಲಿ ಕಾಶಿವಿಶ್ವನಾಥ ಮಂದಿರದ ಮಹಾದ್ವಾರ, ಎ.ಎ.ವೃತ್ತದಲ್ಲಿ ಹಿನ್ನೆಲೆಯಲ್ಲಿ ಅಯೋಧ್ಯೆಯ ಶ್ರೀರಾಮಮಂದಿರ ಒಳಗೊಂಡ ರಾಮಾಂಜನೇಯರ ಪ್ರತಿಕೃತಿ, ಶಿವಪ್ಪನಾಯಕ ವೃತ್ತದಲ್ಲಿ ವಿ.ಡಿ.ಸಾವರ್ಕರ್ ಪ್ರತಿಕೃತಿ, ಮಹಾವಿಷ್ಣುವಿನ ವರಾಹರೂಪ, ಎಂಆರ್‌ಎಸ್ ವೃತ್ತದಲ್ಲಿ ಶ್ರೀರಾಮನ ಮೂರ್ತಿ, ಶಿವಾಜಿ ಮಹಾರಾಜರ ಪ್ರತಿಕೃತಿ ಎಲ್ಲರ ಗಮನ ಸೆಳೆದವು. ಯುವಕ, ಯುವತಿಯರು ಫೋಟೋ, ಸೆೆಲ್ಪಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು.
ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಎಲ್ಲ ಹಂತದ 4 ಸಾವಿರ ಪೊಲೀಸರು ಮೆರವಣಿಗೆಯ ಬಂದೋಬಸ್ತ್ ಹೊಣೆ ಹೊತ್ತಿದ್ದರು. ಸಿಸಿ ಟಿವಿ ಕ್ಯಾಮೆರಾ ಹಾಗೂ ಐದು ಡ್ರೋಣ್ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಲಾಗಿತ್ತು. ಇಡಿ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ಇದ್ದು, ಮೆರವಣಿಗೆ ಸಾಗಿದ ಹಾದಿಯಲ್ಲಿ ಮಾತ್ರ ಜನದಟ್ಟಣೆ ಕಂಡುಬಂದಿತು.
ಕುಡಿಯುವ ನೀರು ಮಜ್ಜಿಗೆ ಪಾನಕ ವಿತರಣೆ: ರಾಜಬೀದಿ ಉತ್ಸವದಲ್ಲಿ ಪಾಲ್ಗೊಂಡವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಅನ್ನಸಂತರ್ಪಣೆ ಕುಡಿಯುವ ನೀರು ಮಜ್ಜಿಗೆ ಪಾನಕ ವಿತರಿಸಲಾಯಿತು. ಆದಿನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.ಬಿಸಿಲ ಝಳದ ನಡುವೆಯೂ ಸಾವಿರಾರು ಮಂದಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಯುವತಿಯರ ವೀರಗಾಸೆ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಭಾರತ ಮಾತಾಕೀ ಜೈ ಜೈ-ಜೈ ಶಿವಾಜಿ ಅಂಬಾ ಭವಾನಿ ಗಣಪತಿ ಕುರಿತ ಘೋಷಣೆಗಳು ಮುಗಿಲು ಮುಟ್ಟಿದ್ದವು. ₹ 80000ದ ಹಾರ ಸಮರ್ಪಣೆ: ಹಿಂದೂ ಮಹಾಸಭಾ ಗಣಪತಿಯ 80ನೇ ವಾರ್ಷಿಕೋತ್ಸವದ ನೆನಪಿಗೆ ಕಾಂಗ್ರೆಸ್ ಮುಖಂಡ ₹ 80000 ಮೊತ್ತದ ₹ 10 ಹಾಗೂ ₹ 20ರ ನೋಟಿನ ಹಾರ ಅರ್ಪಿಸಿದರು. ಪಾಲ್ಗೊಂಡ ಗಣ್ಯರು: ಸಂಸದ ಬಿ.ವೈ.ರಾಘವೇಂದ್ರ ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಡಾ. ಧನಂಜಯ ಸರ್ಜಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್ ಆರ್. ಪ್ರಸನ್ನಕುಮಾರ್ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಎಸ್.ಪಿ. ಮಿಥುನ್ ಕುಮಾರ್ ಹೆಚ್ಚುವರಿ ಎಸ್‌ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮೆರವಣಿಗೆಯ ಹಾದಿಯಲ್ಲಿ ಕಾಣಸಿಕ್ಕರು. ಮಹಾದ್ವಾರ ಕುಸಿತ: ನಗರದ ಸರ್ಕಿಟ್ ಹೌಸ್ ವೃತ್ತದ ಬಳಿ ಬಿ.ಎಚ್.ರಸ್ತೆಗೆ ಅಡ್ಡಲಾಗಿ ಹಾಕಿದ್ದ ರಾಣಿ ಅಹಲ್ಯಾಬಾಯಿ ಹೋಳ್ಕರ್ ಹೆಸರಿನ ಮಹಾದ್ವಾರ ಗಾಳಿಗೆ ಕುಸಿದು ಬಿದ್ದಿತು. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಬಿದ್ದ ಮಹಾದ್ವಾರದ ಕಮಾನುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಬೆಳಕಿನ ಸೊಬಗು: ಮೆರವಣಿಗೆ ಗಾಂಧಿ ಬಜಾರ್‌ನಿಂದ ಶಿವಪ್ಪ ನಾಯಕ ವೃತ್ತದ ಮೂಲಕ ಅಮೀರ್ ಅಹಮದ್ ವೃತ್ತ ತಲುಪುವ ವೇಳೆಗೆ ಸಂಜೆಗತ್ತಲು ಆವರಿಸತೊಡಗಿತ್ತು. ಈ ವೇಳೆ ಒಡಮೂಡಿದ ವಿದ್ಯುತ್ ದೀಪಗಳ ಬೆಳಕಿನ ಸೊಬಗಿನಿಂದ ಮೆರವಣಿಗೆ ಕಂಗೊಳಿಸಿತು. ಶಿವಪ್ಪ ನಾಯಕ ವೃತ್ತದ ಬಳಿ ಆಕಾಶದಲ್ಲಿ ಪಟಾಕಿಯ ಬೆಳಕು ಒಳಮೂಡಿದ್ದು ಕಂಡುಬಂದಿತು. ಗಾಂಧಿ ಬಜಾರ್‌ನಲ್ಲಿ ಭಕ್ತರು ಕರ್ಪೂರದ ಸೇವೆ ಗಣಪನಿಗೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.