ಗುರುವಾರ , ಸೆಪ್ಟೆಂಬರ್ 29, 2022
26 °C
ವಿವಿಧ ಬಗೆಯ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಎಲ್ಲೆಡೆ ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಕೆ

ಶಿವಮೊಗ್ಗ ಜಿಲ್ಲೆಯಲ್ಲಿ ಸಂಭ್ರಮದ ಗಣೇಶೋತ್ಸವ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮನೆ, ದೇಗುಲ, ಮಂಟಪಗಳಲ್ಲಿ ಬುಧವಾರ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಶ್ರದ್ಧಾ, ಭಕ್ತಿಯಿಂದ ಹಬ್ಬ ಆಚರಿಸಿದರು.

ನಗರದ ವಿವಿಧೆಡೆ ವಿವಿಧ ಬಗೆಯ ಭಂಗಿಯಲ್ಲಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. 

ಬಜರಂಗದಳ, ಕೋಟೆ ರಸ್ತೆ, ಅಶೋಕ ರಸ್ತೆ, ಗಾಂಧಿ ಬಜಾರ್‌, ಎಸ್‌ಪಿಎಂ ರಸ್ತೆ, ಶರಾವತಿ ನಗರ, ಎಪಿಎಂಸಿ ಮಾರುಕಟ್ಟೆ, ಸೇರಿ ವಿವಿಧ ಸಂಘಟನೆಗಳು, ಶಾಲಾ ಕಾಲೇಜುಗಳಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೆಲವು ಕಡೆಗಳಲ್ಲಿ ಗಣಪತಿಯೊಂದಿಗೆ ವೀರ ಸಾರ್ವಕರ್‌, ಪುನೀತ್‌ ರಾಜ್‌ಕುಮಾರ್ ಭಾವಚಿತ್ರ ಇಡಲಾಗಿತ್ತು.

ನೂರಾರು ಜನ ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಗೆ ಎಡೆ ಇಟ್ಟು, ಕುಟುಂಬ ಸಮೇತ ಪೂಜೆ ನೆರವೇರಿಸಿದರು. ಇನ್ನೂ ಕೆಲವರು ಮನೆಗಳಲ್ಲೇ ಇದ್ದ ಬೆಳ್ಳಿ, ಮರ, ಪಂಚಲೋಹದ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದರು. ರಾತ್ರಿಯಾಗುತ್ತಿದ್ದಂತೆ ಬಹುತೇಕರು ನಗರಸಭೆಯಿಂದ ನಿರ್ಮಿಸಿದ್ದ ಚಿಕ್ಕ ತೊಟ್ಟಿಗಳಲ್ಲಿ ಮೂರ್ತಿಗಳನ್ನು ವಿರ್ಜಿಸಿದರೆ, ಇನ್ನೂ ಕೆಲವರು ತುಂಗಾ ಚಾನಲ್‌ಗಳಲ್ಲಿ ವಿಸರ್ಜನೆ ಮಾಡಿದರು.

ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ: ಗಣೇಶ ಹಬ್ಬದ ಪ್ರಯುಕ್ತ ನಗರದ ರವೀಂದ್ರನಗರ ಗಣೇಶ ದೇವಾಲಯ, ರಾಮಣ್ಣ ಶ್ರೇಷ್ಠಿ ಪಾರ್ಕ್‌ ದೇವಾಲಯ, ವಿನೋಬನಗರದ ಶಿವಾಲಯ ದೇವಾಲಯ, ಕೋಟೆ ಸೀತಾರಾಮಾಂಜನೇಯ ದೇವಾಲಯ ಹಾಗೂ ಗಾಂಧಿ ಬಜಾರ್‌ ಬಸವೇಶ್ವರ ದೇವಾಲಯಗಳಲ್ಲಿ ಮುಂಜಾನೆಯಿಂದಲ್ಲೇ  ವಿಶೇಷ ಪೂಜೆ, ಅಲಂಕಾರ ನೆರವೇರಿದವು. ನೂರಾರು ಭಕ್ತರು ದರ್ಶನ ಪಡೆದು ಭಕ್ತಿ ಸಲ್ಲಿಸಿದರು.

ಗಣೇಶ ಮೂರ್ತಿಗಳ ದರ್ಶನ ಪಡೆಯಲು ಬಂದ ಸಾರ್ವಜನಿಕರಿಗೆ ಮಂಗಳಾರಾತಿ, ಪ್ರಸಾದ ವಿನಿಯೋಗ ನಡೆಯಿತು. ಕೆಲವೆಡೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಧ್ವನಿವರ್ಧಕಗಳಿಗೆ ಕಡಿವಾಣ: ಗಣಪತಿ ಮೂರ್ತಿಗಳು ಪ್ರತಿಷ್ಠಾಪನೆ ಮಾಡಿರುವ ಕಡೆಗಳಲ್ಲಿ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳನ್ನು ನಿಲ್ಲಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು