ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಗಣೇಶನಿಗಿಲ್ಲ ಬೇಡಿಕೆ: ಅತಂತ್ರ ಸ್ಥಿತಿಯಲ್ಲಿ ಮೂರ್ತಿ ತಯಾರಕರು

ಸಂಭ್ರಮ ಕಸಿದ ಕೊರೊನಾ l ಅತಂತ್ರ ಸ್ಥಿತಿಯಲ್ಲಿ ಮೂರ್ತಿ ತಯಾರಕರು
Last Updated 21 ಆಗಸ್ಟ್ 2021, 2:27 IST
ಅಕ್ಷರ ಗಾತ್ರ

ಶಿವಮೊಗ್ಗ: ಗೌರಿ–ಗಣೇಶ ಹಬ್ಬಕ್ಕೆ ಈ ಬಾರಿಯೂ ಕೊರೊನಾ ಕಂಟಕ ಎದುರಾಗಿದ್ದು, ಸಾರ್ವಜನಿಕವಾಗಿ ಆಚರಣೆಗೆ ಸರ್ಕಾರ ಹಲವು ನಿರ್ಬಂಧ ಹೇರಿದೆ. ಹೀಗಾಗಿ, ಅತಂತ್ರ ಸ್ಥಿತಿಯಲ್ಲಿರುವ ಮೂರ್ತಿ ತಯಾರಕರು ದೊಡ್ಡ ಗಾತ್ರದ ಮೂರ್ತಿ ತಯಾರಿಗೆ ಮುಂದಾಗಿಲ್ಲ.

ಕೋವಿಡ್ ಕಾರಣದಿಂದ ಕಳೆದ ವರ್ಷವೂ ಸರ್ಕಾರ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರಿತ್ತು. ಈ ಬಾರಿಯೂ ಮನೆ, ದೇವಸ್ಥಾನಗಳಲ್ಲಿ ಮಾತ್ರ ಸರಳವಾಗಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಚಪ್ಪರ, ಪೆಂಡಾಲ್‌, ಶಾಮಿಯಾನ, ದೊಡ್ಡ ವೇದಿಕೆ ನಿರ್ಮಿಸಿ ಗೌರಿ–ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿಷೇಧ ಹೇರಿದೆ. ಹೀಗಾಗಿ, ಮೂರ್ತಿ ತಯಾರಕರು ಸಣ್ಣ ಗಾತ್ರದ ಮೂರ್ತಿಗಳನ್ನು ಮಾತ್ರ ತಯಾರಿಸಿದ್ದಾರೆ.

‘ಮೂರ್ನಾಲ್ಕು ತಲೆಮಾರುಗಳಿಂದಲೂ ನಮ್ಮ ಕುಟುಂಬಗಳು ಗಣೇಶನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಹಬ್ಬಕ್ಕೆ ಹಲವು ತಿಂಗಳ ಮುಂಚೆಯೇ ಸಿದ್ಧತೆ ಆರಂಭಗೊಂಡು, ಮನೆ ಮಂದಿಯೆಲ್ಲ ಕೆಲಸದಲ್ಲಿ ತೊಡಗಿಕೊಳ್ಳುತ್ತೇವೆ. ಪ್ರತಿ ವರ್ಷ 250ರಿಂದ 300 ಮೂರ್ತಿಗಳನ್ನು ಮಾಡಿಟ್ಟುಕೊಳ್ಳುತ್ತಿದ್ದೆವು. ಹಲವರು ದೊಡ್ಡ ಮೂರ್ತಿಗೆ ಮುಂಗಡ ಹಣ ನೀಡಿ ಕೊಂಡೊಯ್ಯುತ್ತಿದ್ದರು. ಆದರೆ, ಕೊರೊನಾ ಕಾರಣಕ್ಕೆ ಈಗ ದೊಡ್ಡ ಮೂರ್ತಿಗಳಿಗೆ ಬೇಡಿಕೆ ಇಲ್ಲ. ಸಂಘಟಕರು ಈಗ 2 ಅಡಿ ಎತ್ತರ ಮೂರ್ತಿಗಳನ್ನು ಕೇಳುತ್ತಿದ್ದಾರೆ. ಈ ವರ್ಷ ಇನ್ನೂ ಬೇಡಿಕೆ ಬಂದಿಲ್ಲ. ಸಣ್ಣ ಗಾತ್ರದ ಮೂರ್ತಿಗಳನ್ನಷ್ಟೇ ಮಾಡುತ್ತಿದ್ದೇವೆ. 100 ಮೂರ್ತಿಗಳನ್ನು ಮಾತ್ರ ಮಾಡಿಟ್ಟುಕೊಂಡಿದ್ದೇವೆ. ಇವೂ ಮಾರಾಟ ಆಗುತ್ತವೋ ಇಲ್ಲವೊ ಎಂದು ನೋಡಬೇಕು’ ಎಂದು ಅಳಲು ತೋಡಿಕೊಳ್ಳುತ್ತಾರೆ ಎಂ.ಕೆ.ಕೆ ಬಡಾವಣೆಯ ಮೂರ್ತಿ ತಯಾರಕ ಚನ್ನಪ್ಪ.

ವರ್ಷದ ಕೂಳಿಗೆ ಕುತ್ತು: ಶಿವಮೊಗ್ಗ ನಗರದ ಎಂ.ಕೆ.ಕೆ ರಸ್ತೆ, ಕುಂಬಾರ ಗುಂಡಿ ಬೀದಿಯಲ್ಲಿ ಕೆಲ ಮನೆಗಳ ಅಂಗಳದಲ್ಲಿ ಪ್ರತಿ ವರ್ಷ ಗಣೇಶ ಹಬ್ಬಕ್ಕೂ ಮುನ್ನ ಮಣ್ಣಿನ ಗಣಪಗಳು ಬಿಸಿಲು ಕಾಯುತ್ತ ನಿಲ್ಲುತ್ತಿದ್ದವು. ಮನೆಯಲ್ಲಿ ಕೂರಿಸುವ ಸಣ್ಣ ಮೂರ್ತಿಗಳ ಜತೆಗೆ ಸಾರ್ವಜನಿಕ ಉತ್ಸವಗಳಿಗೆಂದೇ ದೊಡ್ಡ ಗಾತ್ರದ ಮೂರ್ತಿಗಳನ್ನೂ ಇಲ್ಲಿ ಸಿದ್ಧಪಡಿಸಲಾಗುತಿತ್ತು. ಆದರೆ, ಕೊರೊನಾ ಕಲಾವಿದರ ಬದುಕಿಗೂ ಸಂಕಷ್ಟ ತಂದೊಡ್ಡಿದೆ. ಬೇಡಿಕೆಯೇ ಇರದ ಕಾರಣ ಇಂತಹ ಮೂರ್ತಿಗಳ ತಯಾರಿಕೆಯನ್ನೇ ಈ ಕುಟುಂಬಗಳು ನಿಲ್ಲಿಸಿವೆ. ಬದಲಾಗಿ ಮನೆಯಲ್ಲಿ ಪ್ರತಿಷ್ಠಾಪಿಸಲು ಅನುವಾಗುವಂತೆ ಸಣ್ಣ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ.

ಈ ಕುಟುಂಬಗಳ ಕಲಾವಿದರು ಹಬ್ಬಕ್ಕೆ ಮೂರು ತಿಂಗಳು ಮುಂಚೆಯೇ ಊರಿನ ಕೆರೆಯಿಂದ ಜೇಡಿ ಮಣ್ಣು ತಂದು, ಅದನ್ನು ಹದ ಮಾಡಿ ಮೂರ್ತಿ ತಯಾರಿಕೆ ಆರಂಭಿಸುತ್ತಾರೆ. ಹಬ್ಬ ಸಮೀಪಿಸಿದಂತೆಲ್ಲ ಕೆಲಸ ಹೆಚ್ಚುತ್ತ ಹೋಗುತ್ತದೆ. ಮನೆಯ ಮಹಿಳೆಯರು, ಮಕ್ಕಳು ಸೇರಿ ಇಡೀ ಕುಟುಂಬವೇ ಈ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತದೆ. ಮೂರ್ತಿ ಮಾರಾಟದಿಂದ ಬರುವ ಆದಾಯವನ್ನೇ ನಂಬಿಕೊಂಡು ಜೀವನ ಸಾಗುತ್ತಿದ್ದಾರೆ. ಆದರೆ, ಎರಡು ವರ್ಷಗಳಿಂದ ಕೊರೊನಾ ಇವರ ವರ್ಷದ ಕೂಳಿಗೆ ಕುತ್ತು ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT