ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಭೂಮಿ ಒತ್ತುವರಿ; ಇಬ್ಬರಿಗೆ ಶಿಕ್ಷೆ, ತೆರವಿಗೆ ಅದೇಶ

90 ವರ್ಷದ ವೃದ್ಧ ಸೇರಿದಂತೆ ಇಬ್ಬರ ಮೇಲಿನ ಆರೋಪ ಸಾಬೀತು
Published 19 ಆಗಸ್ಟ್ 2024, 16:11 IST
Last Updated 19 ಆಗಸ್ಟ್ 2024, 16:11 IST
ಅಕ್ಷರ ಗಾತ್ರ

ಶಿವಮೊಗ್ಗ: ಸರ್ಕಾರಿ ಭೂಮಿ ಒತ್ತುವರಿ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಶಿಕಾರಿಪುರ ತಾಲ್ಲೂಕಿನ ಭದ್ರಾಪುರ ಗ್ರಾಮದ ಇಬ್ಬರಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ ಹಾಗೂ ಕಬಳಿಕೆಯಾದ ಜಮೀನನ್ನು ವಾಪಸ್ ಪಡೆಯಲು ಸರ್ಕಾರಕ್ಕೆ ಆದೇಶಿಸಿದೆ.

ಶಿಕಾರಿಪುರ ತಾಲ್ಲೂಕಿನ ಭದ್ರಾಪುರ ಗ್ರಾಮದ ಸರ್ವೆ ನಂ. 19ರ ಸರ್ಕಾರಿ ಜಮೀನಿನಲ್ಲಿ ಅದೇ ಗ್ರಾಮದ ವೀರಯ್ಯ ಎಂಬುವವರ ಪುತ್ರ ಚನ್ನಯ್ಯ (71) ಅವರು 25 ಗುಂಟೆ ಹಾಗೂ ಅಯ್ಯಣ್ಣ ಎಂಬುವವರ ಪುತ್ರ ಬಸಪ್ಪ (90) ಅವರು 36 ಗುಂಟೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಶಿಕಾರಿಪುರ ತಹಶೀಲ್ದಾರ್‌ಗೆ ದೂರು ನೀಡಿದ್ದರು. ಪರಿಶೀಲನೆ ನಡೆಸಿದ್ದ ತಹಶೀಲ್ದಾರ್ ನಂತರ ಅಲ್ಲಿನ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ಕರ್ನಾಟಕ ಭೂಕಬಳಿಕೆ ಕಂದಾಯ ಅಧಿನಿಯಮದಡಿ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. 

ಪ್ರಕರಣವನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಸ್ವೀಕರಿಸಿ ಸಂಪೂರ್ಣ ಸಾಕ್ಷ್ಯ ವಿಚಾರಣೆ ನಡೆಸಿದೆ. ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿಗಳಿಗೆ 1 ವರ್ಷ ಸಾದಾ ಶಿಕ್ಷೆ ಮತ್ತು ₹5,000 ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆ ವಿಧಿಸಿ 2ನೇ ವಿಶೇಷ ನ್ಯಾಯಾಲಯದ ಸದಸ್ಯ ಕೆ.ಎಚ್.ಅಶ್ವತ್ಥ ನಾರಾಯಣಗೌಡ ಅವರ ಪೀಠವು ತೀರ್ಪು ನೀಡಿದೆ. 

ಆರೋಪಿತರು ಒತ್ತುವರಿ ಮಾಡಿಕೊಂಡ ಸರ್ಕಾರಿ ಜಮೀನನ್ನು ಕೂಡಲೇ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಶಿಕಾರಿಪುರ ತಹಶೀಲ್ದಾರ್‌ಗೆ ನಿರ್ದೇಶಿಸಿ ತೀರ್ಪು ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT