ಮಂಗಳವಾರ, ನವೆಂಬರ್ 24, 2020
27 °C

ಆಡಳಿತ ಮಂಡಳಿ ಕಿರುಕುಳ ಆರೋಪ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಇಲ್ಲಿನ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು ಕಾಲೇಜಿನ ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಬುಧವಾರ ಸಂಜೆ ಕಾಲೇಜಿನ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

ಕಾಲೇಜಿನ ಆಡಳಿತಾಧಿಕಾರಿ ಗುರುಪ್ರಸಾದ್ ಅವರ ವರ್ತನೆಯಿಂದ ಉಪನ್ಯಾಸಕರು ಕೆಲಸ ಮಾಡದ ವಾತಾವರಣ ನಿರ್ಮಾಣವಾಗಿದೆ. ಸಣ್ಣಪುಟ್ಟ ವಿಷಯಗಳಿಗೂ ನೋಟಿಸ್ ನೀಡಿ ಸಸ್ಪೆಂಡ್ ಮಾಡುವವರೆಗೂ ವಿಷಯವನ್ನು ಕೊಂಡೊಯ್ಯುತ್ತಿದ್ದಾರೆ ಎಂದು ಉಪನ್ಯಾಸಕರು ಆರೋಪಿಸಿದರು.

ಪ್ರತಿ ತಿಂಗಳ ವೇತನದಲ್ಲಿ ಶೇ 10ರಷ್ಟು ಹಣವನ್ನು ಆಡಳಿತ ಮಂಡಳಿಗೆ ನೀಡಬೇಕು ಎಂದು ನಿಯಮಬಾಹಿರವಾಗಿ ಒತ್ತಡ ಹೇರಲಾಗುತ್ತಿದೆ. ಉಪನ್ಯಾಸಕರ ಬಾಕಿ ವೇತನದ ಅನುದಾನದ ಮೊತ್ತ ₹ 1.68 ಕೋಟಿ ಬಿಡುಗಡೆಯಾಗಿ ಆರು ತಿಂಗಳು ಕಳೆದಿದ್ದರೂ ಆ ಹಣವನ್ನು ನೀಡದೆ ಆಡಳಿತ ಮಂಡಳಿಯೇ ಉಳಿಸಿಕೊಂಡಿದೆ ಎಂದು ಉಪನ್ಯಾಸಕರು ದೂರಿದರು.

ದಲಿತ ಮಹಿಳಾ ಉಪನ್ಯಾಸಕರೊಬ್ಬರಿಗೆ ಮಾನಸಿಕ ಕಿರುಕುಳ ನೀಡಿ ಅವರ ಇಚ್ಛೆಗೆ ವಿರುದ್ಧವಾಗಿ ಆಡಳಿತ ಮಂಡಳಿ ಪ್ರಮುಖರು ಮುಚ್ಚಳಿಕೆ ಬರೆಸಿಕೊಳ್ಳಲು ಮುಂದಾಗಿದ್ದಾರೆ. ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿದ ತರಗತಿಗಳನ್ನು ಜ್ಞಾನಸಾಗರ ಖಾಸಗಿ ಶಾಲೆಗೆ ಬಿಟ್ಟುಕೊಡಲಾಗಿದೆ. ಸೇವಾ ಪುಸ್ತಕದ ದೃಢೀಕೃತ ಪ್ರತಿಯನ್ನು ನೀಡುತ್ತಿಲ್ಲ ಎಂದು ಪ್ರತಿಭಟನಾನಿರತರು ದೂರಿದರು.

ಸ್ಥಳಕ್ಕೆ ಬಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ಮಾರ್ಗವಿದ್ದು, ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದರು.

ಆಡಳಿತ ಮಂಡಳಿ ಲೋಪವಿದ್ದರೆ ಸರಿಪಡಿಸಿಕೊಳ್ಳುವ ಭರವಸೆ ನೀಡಿದರು.

ಉಪನ್ಯಾಸಕರಾದ ಕೊಟ್ರೇಶ್, ಸತೀಶ್, ಗಿರೀಶ್, ಸುರೇಶ್, ಸುನೀಲ್ ದಾಸ್, ಪ್ರತಾಪ್ ಸಿಂಗ್, ಜಯಲಕ್ಷ್ಮೀ, ಮೀನಾಕ್ಷಿ ಸೇರಿ 80 ಉಪನ್ಯಾಸಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.