ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: 1370 ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆ

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಗುರುಮೂರ್ತಿ
Last Updated 4 ಡಿಸೆಂಬರ್ 2022, 6:56 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಮುಂದುವರಿದ 233 ಕಾಮಗಾರಿಗಳು ಮತ್ತು 1137 ಹೊಸ ಕಾಮಗಾರಿಗಳು ಸೇರಿ ಒಟ್ಟು 1370 ಕಾಮಗಾರಿಗಳನ್ನು 2022–23ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಸರ್ಕಾರದ ಅನುಮೋದನೆ ದೊರೆತಿದೆ’ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ಎಂ.ಎ.ಡಿ.ಬಿ) ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ತಿಳಿಸಿದರು.

ಎಂ.ಎ.ಡಿ.ಬಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಂಡಳಿಯ ಸದಸ್ಯರು ತಮ್ಮ ಪ್ರಸ್ತಾವಿತ ಹೊಸ ಕಾಮಗಾರಿಗಳ ಕ್ರಿಯಾಯೋಜನೆಯನ್ನು ರೂಪಿಸಿ, ಏಜೆನ್ಸಿಯನ್ನು ಗುರುತಿಸಿ ತ್ವರಿತವಾಗಿ ಸಲ್ಲಿಸಿದರೆ ಅವುಗಳನ್ನು ಪರಿಶೀಲಿಸಿ, ಡಿಸೆಂಬರ್ ಅಂತ್ಯದೊಳಗೆ ಅನುಮೋದನೆ ನೀಡಲಾಗುವುದು. ಕೈಗೊಳ್ಳುವ ಯೋಜನೆಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದ ಅವರು, ‘ಈ ಎಲ್ಲಾ ಕಾಮಗಾರಿಗಳ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಮಂಡಳಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ಮಂಡಳಿಯ 65 ವಿಧಾನಸಭಾ ಕ್ಷೇತ್ರ ಮತ್ತು 21 ವಿಧಾನ ಪರಿಷತ್ ಕ್ಷೇತ್ರ ಸೇರಿ ಒಟ್ಟು 86 ಶಾಸಕರುಗಳಿಂದ ತಲಾ ₹ 33 ಲಕ್ಷದಂತೆ ಕ್ರಿಯಾಯೋಜನೆ ಪ್ರಸ್ತಾವನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರವು 86 ಶಾಸಕರಿಗೆ ತಲಾ ₹ 1 ಕೋಟಿಯಂತೆ ₹ 86 ಕೋಟಿಗಳಿಗೆ ಹಾಗೂ ಶೇ 20ರಷ್ಟು ಹೆಚ್ಚುವರಿ ಕ್ರಿಯಾ ಯೋಜನೆ ರೂಪಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಸರ್ಕಾರಕ್ಕೆ ಸಲ್ಲಿಸಲಾದ ಒಟ್ಟು ₹ 102.53 ಕೋಟಿ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡಿದೆ’ ಎಂದು ಮಾಹಿತಿ ನೀಡಿದರು.

ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ‘ಮಲೆನಾಡು ಭಾಗದ ಜಿಲ್ಲೆಗಳಿಂದ ರಾಜ್ಯ ಸರ್ಕಾರಕ್ಕೆ ಸಂದಾಯವಾಗಿರುವ ರಾಜಸ್ವದ ಕುರಿತು ಸರ್ಕಾರದ ಗಮನಸೆಳೆದು, ಈ ಹಿಂದೆ ಸಲ್ಲಿಸಿದ ಪ್ರಸ್ತಾವನೆಯ ಮೊತ್ತಕ್ಕಿಂತ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು’ ಎಂದು ಮನವಿ ಮಾಡಿದರು.

ಈ ಕುರಿತು ಮುಖ್ಯಮಂತ್ರಿ ಗಮನ ಸೆಳೆಯಲು ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಮಂಡಳಿಯ ಸರ್ವ ಸದಸ್ಯರ ಸಭೆ ಕರೆದು ಸಮಾಲೋಚನೆ ನಡೆಸುವಂತೆಯೂ ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎಸ್.ಗುರುಮೂರ್ತಿ, ‘ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನ ಸಕಾಲದಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ. ಶಾಸಕರು ಕಾಮಗಾರಿಗಳ ಕ್ರಿಯಾಯೋಜನೆ ಸಲ್ಲಿಸದಿರುವುದು, ಹಳೆಯ ಕಾಮಗಾರಿಗಳಿಗೆ ಅನುದಾನ ಬಳಸಿಕೊಳ್ಳುತ್ತಿರುವುದು ಇದಕ್ಕೆ ಕಾರಣ’ ಎಂದರು.

ಸರ್ವ ಸದಸ್ಯರು ಸಕಾಲದಲ್ಲಿ ಸಭೆಗೆ ಆಗಮಿಸಿ, ಉತ್ತಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಅಧ್ಯಕ್ಷರು ಮನವಿ ಮಾಡಿದರು. ಸಣ್ಣ ಮೊತ್ತದ ಹೆಚ್ಚಿನ ಕಾಮಗಾರಿಗಳಿಗೆ ಪ್ರಸ್ತಾವ ಸಲ್ಲಿಸುವುದಕ್ಕಿಂತ ಕನಿಷ್ಠ ₹ 5 ಲಕ್ಷ ಮೇಲ್ಪಟ್ಟ ಮೊತ್ತದ ಕಾಮಗಾರಿಗಳಿಗೆ ಪ್ರಸ್ತಾವ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ಸೂಚಿಸಿದರು.

ಶಾಸಕರಾದ ಕೆ.ಬಿ.ಅಶೋಕ ನಾಯ್ಕ್, ಪ್ರೊ.ಲಿಂಗಣ್ಣ (ಮಾಯಕೊಂಡ), ಸಿ.ಎಂ.ನಿಂಬಣ್ಣ (ಕಲಘಟಗಿ), ತಿಮ್ಮಯ್ಯ (ಚಾಮರಾಜನಗರ), ವಿರೂಪಾಕ್ಷಪ್ಪ ಬಳ್ಳಾರಿ (ಬ್ಯಾಡಗಿ), ಡಿ.ಎಸ್.ಅರುಣ್, ನಾಮನಿರ್ದೇಶಿತ ಸದಸ್ಯರು, ಆಡಳಿತಾಧಿಕಾರಿ ಕೆ.ಎಸ್.ಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT