ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲ: ಆರ್.ಎಂ. ಮಂಜುನಾಥ ಗೌಡ

ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ಅಭಿಮತ
Last Updated 21 ನವೆಂಬರ್ 2022, 7:15 IST
ಅಕ್ಷರ ಗಾತ್ರ

ಹೊಸನಗರ: ‘ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ನಡೆಯುತ್ತಿದೆ. ಆರ್ಥಿಕ ಸದೃಢತೆಯಿಂದ ಅಭಿವೃದ್ಧಿ ಹೊಂದಿದ ಸಹಕಾರ ಸಂಸ್ಥೆಗಳ ಮೇಲೆ ಸರ್ಕಾರ ಬಿಗಿಹಿಡಿತ ಸಾಧಿಸುತ್ತಿದೆ. ಇದು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಮಾರಕವಾಗಿದೆ’ ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ ಗೌಡ ಆರೋಪಿಸಿದರು.

ತಾಲ್ಲೂಕಿನ ಬಟ್ಟೆಮಲ್ಲಪ್ಪದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ನೂರಾರು ವರ್ಷಗಳ ಇತಿಹಾಸವಿರುವ ಸಹಕಾರ ಕ್ಷೇತ್ರ ಇಂದು ಆರ್ಥಿಕವಾಗಿ ಸುಸ್ಥಿರ ನೆಲೆಗಟ್ಟಿನಲ್ಲಿ ಸಾಗುತ್ತಿದೆ. ಇದೀಗ ಸಹಕಾರ ಕ್ಷೇತ್ರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಹವಣಿಸಿದ ಸರ್ಕಾರ ರಾಜಕೀಯ ಪಿತೂರಿ ನಡೆಸುತ್ತಿದೆ. ಸಂಘಗಳನ್ನು ಮಟ್ಟ ಹಾಕಲು ಷಡ್ಯಂತ್ರ ನಡೆಸುತ್ತಿದೆ. ಇದರಿಂದ ಸಹಕಾರ ಸಂಸ್ಥೆಗಳು ಅಡಕತ್ತರಿಯಲ್ಲಿ ಸಿಲುಕಿದ ಸ್ಥಿತಿಯಲ್ಲಿವೆ’ ಎಂದು ಹೇಳಿದರು.

ಸಹಕಾರ ರತ್ನಗಳು ಸಂತೆಯ ಸರಕಾಗಿವೆ: ‘ಸರ್ಕಾರದಿಂದ ಕೊಡಮಾಡುವ ಸಹಕಾರ ರತ್ನ ಪ್ರಶಸ್ತಿಗಳಿಗೆ ತನ್ನದೇ ಮಾನ್ಯತೆ ಇದೆ. ಆದರೆ ಇಂದು ಈ ರತ್ನ ಪ್ರಶಸ್ತಿಗಳು ಸಂತೆಯ ಸರಕು ಆಗಿವೆ. ಸಹಕಾರ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ ಸಹಕಾರಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಿ ಸಹಕಾರ ತತ್ವಾದರ್ಶವನ್ನು ಎತ್ತಿ ಹಿಡಿಯಲಾಗುತ್ತಿತ್ತು. ಆದರೆ ಈಗ ನೂರಾರು ಮಂದಿಗೆ ರತ್ನ ಪ್ರಶಸ್ತಿಗಳು ಲಭಿಸಿವೆ. ಯಾವುದೇ ಮಾನದಂಡಗಳು ಇಲ್ಲಿ ಪಾಲನೆ ಆಗುತ್ತಿಲ್ಲ. ಮನ ಬಂದಂತೆ ಪ್ರಶಸ್ತಿಗಳು ಬಿಕರಿ ಆಗುತ್ತಿವೆ’ ಎಂದು ಮಂಜುನಾಥ್‌ ಗೌಡ ಆರೋಪಿಸಿದರು.

ಜಿಲ್ಲಾ ಸಹಕಾರಿ ಯೂನಿಯಾನ್ ಅಧ್ಯಕ್ಷ ಕೆ.ಎಲ್. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಉತ್ತಮ ಸಹಕಾರ ಸಂಸ್ಥೆ, ಉತ್ತಮ ನೌಕರ ಮತ್ತಿತರ ಹಲವು ವಿಭಾಗದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಗೌರವಿಸಲಾಯಿತು.

ಸಮಾರಂಭದಲ್ಲಿ ಎಚ್.ಎಲ್.ವಿಜಯದೇವ್, ಎಚ್.ಎಲ್.ಷಡಕ್ಷರಿ, ಸಂಜೀವಕುಮಾರ್, ಎಸ್.ಕೆ.ಮರಿಯಪ್ಪ, ಕಲ್ಯಾಣಪ್ಪಗೌಡ, ರಾಜು ಪಾಟೀಲ್, ಜಿ.ಎನ್.ಸುಧೀರಗೌಡ, ಹಾಲಗದ್ದೆ ಉಮೇಶ್, ಶಶಿರೇಖಾ, ಮಮತಾ, ಲೀಲಾವತಿ, ಶ್ರೀಜಯ, ಡಿ.ಆರ್.ವಾಸುದೇವ್ ಇದ್ದರು.

ಸಹಕಾರಿ ಧುರೀಣ ವಾಟಗೋಡು ಸುರೇಶ್ ಪ್ರಸ್ತಾವಿಕ ಮಾತನಾಡಿದರು. ಆರ್. ಪರಮೇಶ್ ಸ್ವಾಗತಿಸಿದರು. ಹರತಾಳು ನಾಗರಾಜ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT