ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಚುನಾವಣೆಗೆ ಸರ್ಕಾರ ಬದ್ಧ: ಶಾಸಕ ಹರತಾಳು ಹಾಲಪ್ಪ

Last Updated 27 ಜೂನ್ 2020, 15:25 IST
ಅಕ್ಷರ ಗಾತ್ರ

ಹೊಸನಗರ: ರಾಜ್ಯದಲ್ಲಿನ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಸರ್ಕಾರ ಬದ್ಧವಾಗಿದೆ. ಸೂಕ್ತ ಕಾಲದಲ್ಲಿ ಚುನಾವಣೆ ನಡೆಯಲಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ತಾಲ್ಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಚುನಾವಣೆ ಶಾಸನ ಬದ್ಧವಾದ ಪ್ರಕ್ರಿಯೆ. ಅವಧಿ ಮುಗಿದ ಗ್ರಾಮ ಪಂಚಾಯಿತಿಗಳಿಗೆ ನಿಗದಿತ ವೇಳೆಯಲ್ಲಿ ಚುನಾವಣೆ ನಡೆದು ಹೊಸ ಸದಸ್ಯರ ಆಯ್ಕೆ ನಡೆಯಬೇಕು. ಇದೀಗ ಕೊರೊನಾ ಭೀತಿ ಪರಿಣಾಮ ಚುನಾವಣೆ ನಡೆಸಲು ಸಾಧ್ಯವಾಗದೇ ಇರುವುದರಿಂದ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ ಎಂದರು.

ರಾಜ್ಯದಲ್ಲಿನ ಗ್ರಾಮ ಪಂಚಾಯಿತಿಗಳ ಸಂಖ್ಯೆಯಲ್ಲಿ ಸರಳೀಕರಣ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಅಧಿಕಾರಿಗಳ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಕುರಿತು ಸರ್ಕಾರ ಹೆಜ್ಜೆ ಇಡಲಿದೆ ಎಂದರು.

ಸ್ಥಳೀಯ ಸಂಸ್ಥೆಗೆ ತನ್ನದೇ ಆದ ಅಸ್ತಿತ್ವವಿದೆ. ಪಂಚಾಯಿತಿಯೇ ಸುಪ್ರೀಂ ಆಗಿದೆ. ಇಲ್ಲಿ ಸ್ಥಳೀಯರಿಗೆ ಅಧಿಕಾರ ಲಭಿಸುವುದರಿಂದ ಸ್ಥಳೀಯ ಕೆಲಸ ಕಾರ್ಯಗಳು ಸೂಸೂತ್ರವಾಗಿ ನಡೆಯುತ್ತವೆ ಎಂದರು.

ಭೇಟಿ ನೀಡಲ್ಲ: ಶಾಸಕನಾದ ನಾನು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡುವ ಪದ್ಧತಿ ಬೆಳೆಸಿಕೊಂಡಿಲ್ಲ. ನಾನು ಹೋಗುತ್ತಿದ್ದರೆ ಅಲ್ಲಿನ ಜನ ಪ್ರತಿನಿಧಿಗಳಿಗೆ ಏನು ಕೆಲಸ ಎಂದು ಅವರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಹೋಗುತ್ತಿದ್ದರು. ಅವರು ಹೋದರೆ, ಬಂದರೆ ಅದಕ್ಕೊಂದು ಬೆಲೆ ಇತ್ತು ಬಿಡಿ. ಹಾಗೆಂದು ಎಲ್ಲರೂ ಹೋಗುವುದು ಸರಿಯಲ್ಲ ಎಂದು ಛೇಡಿಸಿದರು.

ಹರಿದ್ರಾವತಿ ವಾಟಗೋಡು ಸುರೇಶ್ ಬಿಜೆಪಿಯಲ್ಲೇ ಇದ್ದವರು. ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಅಲ್ಲೂ ಯಶಸ್ವಿಯಾಗಿದ್ದಾರೆ. ಈಗ ಕೈಗಿಂತ ಹೂವು ಉತ್ತಮವಾಗಿದೆ. ಹೂ ಹಿಡಿಯಿರಿ ಎಂದು ವಾಟಗೋಡು ಸುರೇಶ್ ಅವರಿಗೆ ಸಭೆಯಲ್ಲಿಯೇ ಆಹ್ವಾನ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಟಗೋಡು ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆದವಳ್ಳಿ ವೀರೇಶ್, ಸದಸ್ಯೆ ರುಕ್ಮಿಣಿ ರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೀಣಾ ಗೋಪಾಲ್, ಸದಸ್ಯರಾದ ಮಂಜುನಾಥ್, ಪೂರ್ಣಿಮಾ, ಸುವರ್ಣ, ವಿದ್ಯಾದರ್ ಭಟ್, ಶ್ರೀಜಯ, ಲತಾ ಮಂಜಪ್ಪ, ಮಂಜುನಾಥ ಬ್ಯಾಣದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT