ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಬಳಿ ಭಾಷಾ ನೀತಿ ಇಲ್ಲ: ಪುರುಷೋತ್ತಮ ಬಿಳಿಮಲೆ

ಲೇಖಕ ಪುರುಷೋತ್ತಮ ಬಿಳಿಮಲೆ ಹೇಳಿಕೆ
Last Updated 8 ಆಗಸ್ಟ್ 2022, 4:35 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಸರ್ಕಾರದ ಬಳಿ ಸರಿಯಾದ ಭಾಷಾ ನೀತಿಯೇ ಇಲ್ಲ. ನಮ್ಮ ಭಾಷೆ ಸಾವಿಗೆ ನಾವೇ ಸಾಕ್ಷಿಯಾಗಬಾರದು. ಕುವೆಂಪು ವಿಚಾರ ಕೇಂದ್ರೀಕರಿಸಿ ಚಳವಳಿ ರೂಪಿಸುವ ಅಗತ್ಯ ಇದೆ’ ಎಂದು ಜಾನಪದ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಅರ್ಹನಿಶಿ ಪ್ರಕಾಶನ ಆಶ್ರಯದಲ್ಲಿ ಶನಿವಾರ ಇಲ್ಲಿನ ಬಂಟರ ಭವನದಲ್ಲಿ ಆಯೋಜಿಸಿದ್ದ ‘ಕುವೆಂಪು ಚಿಂತನೆಯ ಪ್ರಸ್ತುತತೆ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಸಂವಿಧಾನದ 8ನೇ ಪರಿಚ್ಛೇದದಲ್ಲಿ 22 ಭಾಷೆಗಳಿದ್ದು, ಕನ್ನಡ ಕೊನೆಯ ಸ್ಥಾನ ಪಡೆದಿರುವುದು ಆತಂಕಕಾರಿ. ಭಾರತದಲ್ಲಿ ಶೇ 66 ಜನಸಂಖ್ಯೆ ಹಿಂದಿ ಬಳಕೆ ಮಾಡುತ್ತಾರೆ. ಆದರೆ ಕನ್ನಡ ಶೇ 3.75ಕ್ಕೆ ಮಾತ್ರ ಸೀಮಿತಗೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು.

1968ರಲ್ಲಿ ಜಾರಿಗೆ ಬಂದ ತ್ರಿಭಾಷಾ ಸೂತ್ರವನ್ನು ತಮಿಳುರು ಯಾವತ್ತೂ ಒಪ್ಪಲಿಲ್ಲ. ಕನ್ನಡದ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದರೆ ದೆಹಲಿಯಲ್ಲಿ ಎಲ್ಲಿಯ ಭಾಷೆ ಎಂದು ವಿದ್ವಾಂಸರು ಕೇಳುವಷ್ಟರ ಮಟ್ಟಿಗೆ ಹದಗೆಟ್ಟಿದೆ. ಹಿಂದಿ ಹೇರಿಕೆಯ ಪರಿಣಾಮವಾಗಿ ಬ್ಯಾಂಕ್ ನೌಕರರೊಂದಿಗೆ ಗ್ರಾಮೀಣರು‌ ವ್ಯವಹರಿಸದಂತೆ ಆಗಿದೆ ಎಂದು ಬೇಸರಿಸಿದರು.

ಕನ್ನಡದ ಹಿರಿಮೆ ಸಾರಿ ಎಲ್ಲಾ ಕವಿಗಳು ಕವಿತೆ ರಚಿಸಿದ್ದಾರೆ. ಕುವೆಂಪು ಅವರಷ್ಟು ಯಾರೂ ಬರೆದಿಲ್ಲ. ತ್ರಿಭಾಷಾ ಸೂತ್ರವನ್ನು ಅವರು ಪ್ರಬಲವಾಗಿ ತಿವಿದಿದ್ದರು. ಕನ್ನಡದ ಕುರಿತಾಗಿ ಅವರಿಗೆ ಒಂದು ಸ್ಪಷ್ಟವಾದ ಕಲ್ಪನೆ ಮತ್ತು ನಿಲುವಿತ್ತು ಎಂದು ಹೇಳಿದರು.

ಕಸಾಪ‌‌ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಕಾರ್ಯದರ್ಶಿ ಸೌಳಿ ನಾಗರಾಜ್ ಸ್ವಾಗತಿಸಿದರು. ಲೇಖಕ ಜಿ.ಕೆ. ಸತೀಶ್ ವಂದಿಸಿದರು. ಗಾಯತ್ರಿ ಶೇಷಗಿರಿ ನಿರೂಪಿಸಿದರು.

ಕನ್ನಡಕ್ಕೆ ಕೇವಲ ₹ 8 ಕೋಟಿ ಅನುದಾನ

24 ಸಾವಿರ ಜನರು ಮಾತನಾಡುವ ಸಂಸ್ಕೃತ ಭಾಷೆಯ ಬೆಳವಣಿಗೆಗೆ ₹ 5,548 ಕೋಟಿ ಅನುದಾನ ನೀಡಲಾಗಿದ್ದರೆ, ಕನ್ನಡಕ್ಕೆ ಕೇವಲ ₹ 8 ಕೋಟಿ ನೀಡಿದ್ದಾರೆ. 1871ರಲ್ಲಿ ರಾಜ್ಯದಲ್ಲಿ ಕೊರಗ ಭಾಷೆ ಮಾತನಾಡುವವರು 55 ಸಾವಿರ ಜನರಿದ್ದರು. 2011ರಲ್ಲಿ ಇದು 11 ಸಾವಿರಕ್ಕೆ ಇಳಿಯಿತು. ಈಗ 3 ಸಾವಿರಕ್ಕೆ ಬಂದಿದೆ. ಅಪೌಷ್ಟಿಕತೆ, ಅಜ್ಞಾನ, ಮೌಢ್ಯ, ರೋಗಗಳಿಂದ ಕೊರಗ ಸಮುದಾಯದ ಯುವಕರು ಹೆಚ್ಚು ಅಸು ನೀಗಿದರು. ಆದರೆ ಇತ್ತೀಚಿಗೆ ಇವರ ಭಾಷೆಗೆ ಕೊಡುವ ಅನುದಾನ ನಿಲ್ಲಿಸುವ ಆದೇಶ ಬಂದಿರುವುದು ದುರಂತ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT