ಬುಧವಾರ, ಏಪ್ರಿಲ್ 21, 2021
32 °C
ಮುಖ್ಯಮಂತ್ರಿ ತವರಲ್ಲಿ ವಿಶೇಷ ಸಭೆ, ಬೇಡಿಕೆ ಈಡೇರಿಕೆಗೆ ಒತ್ತಾಯ

ಸೇವಾವಿಲೀನಕ್ಕೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ರ‍್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಬಜೆಟ್‌ನಲ್ಲಿ ಸೇವಾವಿಲೀನ ಘೋಷಣೆಗೆ ಆಗ್ರಹಿಸಿ ರಾಜ್ಯದ ವಿವಿಧ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ಶನಿವಾರ ಅಂಬೆಡ್ಕರ್‌ ಭವನದಿಂದ ಪತ್ರಿಕಾ ಭವನದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು.

ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಕನಿಷ್ಠ ಗೌರವ ಧನ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ. ಕರೋನಾ ಸಂಕಷ್ಟದಿಂದ ಬದುಕು ಎದುರಿಸುವ ಧೈರ್ಯ ಕಳೆದುಕೊಂಡು ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 20 ಜನರು  ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದಾರೆ.ಅವರ ಕುಟುಂಬಗಳು ಆರ್ಥಿಕ ನೆರವಿಲ್ಲದೆ ಕಣ್ಣೀರಿನಲ್ಲೆ ಬದುಕು ಸಾಗಿಸುತ್ತಿದ್ದಾರೆ ಎಂದರು.

ಕೋವಿಡ್ ಮಾರ್ಗಸೂಚಿಯಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಐದು ತಿಂಗಳ ಗೌರವಧನ ಬಿಡುಗಡೆ ಮಾಡಿದ್ದರು. ಆದರೆ, ಆಗಸ್ಟ್‌ನಿಂದ ವೇತನವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದೇವೆ. ಫೆಬ್ರುವರಿ, ಮಾರ್ಚ್ ಎರಡು ತಿಂಗಳು ಕೆಲಸಕ್ಕೆ ತೆಗೆದುಕೊಂಡು, ಮಾರ್ಚ್‌ನಿಂದ ಬಿಡುಗಡೆ ಮಾಡಿದ್ದಾರೆ. ಪರೀಕ್ಷೆ ಮೌಲ್ಯಮಾಪನದಂತಹ ಕೆಲಸಕ್ಕೆ ವೇತನ ರಹಿತವಾಗಿ ದುಡಿಸಿಕೊಳ್ಳಲಾಗುತ್ತಿದೆ. ಇದು ಸರ್ಕಾರಿ ಶೋಷಣೆಯ ಜೀತಗಾರಿಕೆ. ಪ್ರಜಾಪ್ರಭುತ್ವ ಮಾದರಿಗೆ ವಿರುದ್ಧವಾಗಿದೆ ಎಂದು ದೂರಿದರು.

ಸುಮಾರು ಎರಡು ದಶಕಗಳಿಂದ ಅತಿಥಿ ಉಪನ್ಯಾಸಕ ಗುಲಾಮಗಿರಿಯ ಕರಿನೆರಳಲ್ಲಿ ವಿದ್ಯಾವಂತ ಸಮುದಾಯಕ್ಕೆ ಇಎಸ್‌ಐ, ಪಿಎಫ್‌ ನಂತಹ ಯಾವುದೇ ನೆರವು ನೀಡಿಲ್ಲ. ಕನಿಷ್ಠ ವೇತನ ನೀಡಿ ದುಡಿಸಿಕೊಂಡು ಬಂದಿರುವುದು ಆಧುನಿಕ ಸರ್ಕಾರಿ ಜೀತಪದ್ಧತಿಗೆ ಸಮ. ದೇಶದ ಭದ್ರ ಬುನಾದಿಗೆ ಗುಣಮಟ್ಟದ ಶಿಕ್ಷಣ ಅಗತ್ಯದ ಹೆಸರಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಾವಿರಾರೂ ಕೋಟಿ ರೂಪಾಯಿ ಅನುದಾನ ನೀಡಲು ಮುಂದಾಗಿರುವ ಸರ್ಕಾರ ಅತಿಥಿ ಉಪನ್ಯಾಸಕರ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡುತ್ತಿದೆ. ಸರ್ಕಾರ ಇಂತಹ ಶೋಷಣೆಯ ನೀತಿ ಕೊನೆಗಾಣಿಸಬೇಕು ಎಂದು ಆಗ್ರಹಿಸಿದರು.

ಎಂಟು ಸಾವಿರ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಮುಂದಾಗಿದೆ. ಶೇ 80ರಷ್ಟು ಅತಿಥಿ ಉಪನ್ಯಾಸಕರನ್ನೆ ಕಾಲೇಜು, ವಿಶ್ವವಿದ್ಯಾಲಯಗಳು ಬಳಸಿಕೊಂಡಿವೆ. ಸರ್ಕಾರ ಗುಣಮಟ್ಟದ ಬೋಧನ ಕೌಶಲ, ಅನುಭವ ಹೊಂದಿರುವ ಅತಿಥಿ ಉಪನ್ಯಾಸಕರನ್ನೇ ಸೇವೆಯಲ್ಲಿ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಮಿತಿಯ ಅಧ್ಯಕ್ಷ ಡಾ.ಎಚ್.ಸೋಮಶೇಖರ್ ಶಿವಮೊಗ್ಗಿ, ಮಲ್ಲಿಕಾರ್ಜುನ್, ಮದ್ದೂರು ನಾಗರಾಜ್, ಡಾ.ನರಹರಿ, ರೂಪಾ, ಪರಿಮಳ, ದೀಪಾ, ರಾಘವೇಂದ್ರ, ಶ್ಯಾಮಲಾ, ಪ್ರೇಮಾ, ಡಾ.ರವೀದ್ರ ಮತ್ತಿತರರು ಇದ್ದರು.

ಪ್ರತಿಭಟನಾ ರ‍್ಯಾಲಿಯ ನಂತರ ನಡೆದ ಸಭಾ ಕಾರ್ಯಕ್ರಮವನ್ನು ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಉದ್ಘಾಟಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.