ಗುರುವಾರ , ಜನವರಿ 28, 2021
16 °C

ತಳಮಟ್ಟದಿಂದ ಪಕ್ಷ ಸಂಘಟಿಸಲು ಹಾಲಪ್ಪ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಬೇಕು. ಅದಕ್ಕಾಗಿ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕಾಗಿದೆ. ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಇಂದಿನಿಂದಲೇ ಕೈ ಜೋಡಿಸಬೇಕು ಎಂದು ಶಾಸಕ ಎಚ್‌. ಹಾಲಪ್ಪ ಹರತಾಳು ಕಾರ್ಯಕರ್ತರಿಗೆ ಸಲಹೆ ನೀಡಿದರು.

ತಾಲ್ಲೂಕಿನ ಜಯನಗರದ ಚಾಮುಂಡಿ ಬೆಟ್ಟದ ಸಭಾ ಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಹೊಸನಗರ ಮಂಡಲದ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅಧಿಕಾರವಿದೆ. ಜನಸೇವೆ ಮಾಡುವಲ್ಲಿ ಇಲ್ಲಿ ಹೆಚ್ಚಿನ ಅವಕಾಶವಿದೆ. ಹಾಗಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳನ್ನು ಕೈವಶ ಮಾಡಿಕೊಳ್ಳುವಲ್ಲಿ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಇಂದಿನಿಂದಲೇ ಕಾರ್ಯತತ್ಪರರಾಗಬೇಕು ಎಂದರು.

‘ಪ್ರಶಿಕ್ಷಣ ವರ್ಗದಿಂದ ಹೆಚ್ಚಿನ ಜವಾಬ್ದಾರಿ ಸಿಗುತ್ತದೆ. ಇಲ್ಲಿನ ಸೂಚನೆಗಳಿಂದ ಕಾರ್ಯಕರ್ತರು ಪ್ರಬುದ್ಧರಾಗಲು ಸಾಧ್ಯವಿದೆ. ಪ್ರಶಿಕ್ಷಣದ ನೀತಿಪಾಠಗಳು ನಮ್ಮ ಅಭ್ಯುದಯಕ್ಕೆ ಪೂರಕ’ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಇಂದು ಒಡೆದಮನೆ ಆಗಿದೆ. ಆ ಪಕ್ಷಕ್ಕೆ ಎಲ್ಲೆಡೆಯೂ ಸೋಲಿನ ಭೀತಿ ಇದೆ. ಸಮರ್ಪಕ ನಾಯಕತ್ವ ಇಲ್ಲದ ಕಾರಣ ಆ ಪಕ್ಷ ಮುಳುಗುವ ದೋಣಿಯಂತಾಗಿದೆ. ಸಾಗರ ಕಾಂಗ್ರೆಸ್ ಸಮಿತಿಯಲ್ಲಿ ಗೊಂದಲ ಮನೆ ಮಾಡಿದೆ. ಯಾರು ಮುಂದಿನ ಅಭ್ಯರ್ಥಿ ಎಂಬುದೇ ಪಕ್ಷದಲ್ಲಿ ರಾಜಕಾರಣಕ್ಕೆ ಕಾರಣವಾಗಿದೆ. ಕಾಗೋಡು ತಿಮ್ಮಪ್ಪ ಅವರೂ ಇದ್ದಾರೆ. ಅವರ ಪುತ್ರಿಯ ಹೆಸರೂ ಕೇಳಿ ಬರುತ್ತಿದೆ. ಹಿರಿಯರಾದ ಬಿ.ಆರ್‌. ಜಯಂತ್ ಕೂಡ ರೇಸ್‌ನಲ್ಲಿದ್ದಾರೆ. ಕಾಂಗ್ರೆಸ್ ಚುಕ್ಕಾಣಿ ಇಲ್ಲದ ಹಡಗಿನಂತಾಗಿದೆ ಎಂದು ಟೀಕಿಸಿದರು.

ಶರಾವತಿ ಸಂತ್ರಸ್ತರ ಜಮೀನು ಸರ್ವೆ
ಜಲವಿದ್ಯುತ್ ಯೋಜನೆಗೆ ತಮ್ಮ ನೆಲ, ಮನೆ ನೀಡಿದ ಶರಾವತಿ ಮುಳುಗಡೆ ಸಂತ್ರಸ್ತರ  ಕಣ್ಣೊರೆಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅರಣ್ಯ ಪ್ರದೇಶದಲ್ಲಿ ನೆಲೆ ಕಂಡುಕೊಂಡ ಇಲ್ಲಿನ ಸಂತ್ರಸ್ತರಿಗೆ ಜಮೀನಿಗೆ ಸಾಗುವಳಿ ಪಟ್ಟ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಶಾಸಕ ಎಚ್‌. ಹಾಲಪ್ಪ ಹರತಾಳು ಹೇಳಿದ‌ರು.

‘ಮುಳುಗಡೆ ಸಂತ್ರಸ್ತರು ಅರಣ್ಯ ಪ್ರದೇಶದಲ್ಲಿ ನೆಲೆ ನಿಂತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಸಾಗುವಳಿ ಪಟ್ಟ ಕೊಡಲು ಸಮಸ್ಯೆ ಇದ್ದು, ಈವರೆಗೂ ಪಟ್ಟ ನೀಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಸರ್ಕಾರ ಅಗತ್ಯ ಮಾಹಿತಿ ಕಲೆ ಹಾಕಿದ್ದು ಸಮಿತಿ ರಚಿಸಿ ಸಭೆ ನಡೆಸಿದೆ. ಸಂತ್ರಸ್ತರ ಭೂಮಿ ಸರ್ವೆ ಕಾರ್ಯ ಆರಂಭವಾಗಲಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅರಣ್ಯ ಪ್ರದೇಶದಲ್ಲಿ ನೆಲೆ ನಿಂತ 14 ಸಾವಿರ ರೈತರಿಗೆ ಇದರಿಂದ ಉಪಯೋಗವಾಗಲಿದೆ. ಸರ್ಕಾರದ ಈ ಯೋಜನೆ ದಿಕ್ಕು ತಪ್ಪುವ ಅವಕಾಶ ಇಲ್ಲದಂತೆ ಎಚ್ಚರವಹಿಸಲಾಗುವುದು ಎಂದು ಹೇಳಿದರು.

ಹೊಸನಗರ ಪಟ್ಟಣಕ್ಕೆ ನೀರು: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಯನಗರ ಸಮೀಪದ ರಾಮಚಂದ್ರಪುರ ಗ್ರಾಮದ ಬಳಿಯಲ್ಲಿ ಶರಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಶೀಘ್ರ ಸರ್ವೆ ಕಾರ್ಯ ನಡೆಯಲಿದ್ದು, ಅಗತ್ಯ ಅನುದಾನ ಬಿಡುಗಡೆ ಆಗಲಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು