ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಕಾಂಗ್ರೆಸ್‌ನ ಪಾಪದ ಕೂಸು: ಹಾಲಪ್ಪ

ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿಕೆ
Last Updated 4 ಡಿಸೆಂಬರ್ 2022, 6:59 IST
ಅಕ್ಷರ ಗಾತ್ರ

ಸಾಗರ: ‘ಸುದೀರ್ಘ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮಲೆನಾಡಿನ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಈ ಸಮಸ್ಯೆ ಕಾಂಗ್ರೆಸ್‌ನ ಪಾಪದ ಕೂಸು’ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಆರೋಪಿಸಿದರು.

‘ತಾವು ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡದೆ ಸಂತ್ರಸ್ತರ ಸಮಸ್ಯೆಯನ್ನು ಜೀವಂತವಾಗಿಟ್ಟ ಕಾಂಗ್ರೆಸ್ ಮುಖಂಡರು, ಈಗ ಬಿಜೆಪಿ ಸರ್ಕಾರದ ಮೇಲೆ ಹರಿಹಾಯುತ್ತಿರುವುದು ಅಕ್ಷಮ್ಯ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕಾಗೋಡು ತಿಮ್ಮಪ್ಪ ಅವರು ರಾಜಕಾರಣಕ್ಕೆ ಬರುವ ಮುನ್ನ ವಕೀಲರಾಗಿದ್ದರು. ನಂತರ ಅವರು ಅರಣ್ಯ ಹಾಗೂ ಕಂದಾಯ ಖಾತೆ ಕೂಡ ನಿಭಾಯಿಸಿದ್ದಾರೆ. ಆಗ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಲು ಅವರಿಗೆ ತೊಂದರೆ ಏನಿತ್ತು’ ಎಂದು ಅವರು ಪ್ರಶ್ನಿಸಿದರು.

‘ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ತಾರ್ಕಿಕ ಅಂತ್ಯ ಹೇಳುವುದಕ್ಕೆ ಬಿಜೆಪಿ ಬದ್ಧವಾಗಿದೆ. ಸಂತ್ರಸ್ತರು ಎಲ್ಲೇ ಇದ್ದರೂ ತಮ್ಮ ಜಮೀನಿನ ವಿವರವನ್ನು ತಹಶೀಲ್ದಾರ್‌ ಅವರ ಕಚೇರಿಗೆ ಸಲ್ಲಿಸಬಹುದು. ಅಗತ್ಯ ಬಿದ್ದರೆ ಸಾಗರದ ಶಾಸಕರ ಕಚೇರಿಯಲ್ಲೂ ಪ್ರತ್ಯೇಕ ವಿಭಾಗ ತೆರೆಯಲಾಗುವುದು’ ಎಂದು ಹೇಳಿದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸಿದ್ದೆ ಎಂಬ ಕಾಂಗ್ರೆಸ್ ಮುಖಂಡರ ಆರೋಪದಲ್ಲಿ ಹುರುಳಿಲ್ಲ. ಇದನ್ನು ಕಾಂಗ್ರೆಸ್ ಮುಖಂಡ ಬಿ.ಆರ್. ಜಯಂತ್ ಅವರು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲು ಹಾಕಿದರು.

ಬಿಜೆಪಿಯ ಪ್ರಮುಖರಾದ ಲೋಕನಾಥ ಬಿಳಿಸಿರಿ, ಆನಂದ ಜನ್ನೆಹಕ್ಲು, ವಿನಾಯಕರಾವ್, ಹರೀಶ್ ಮೂಡಳ್ಳಿ, ಆನಂದ ಮೆಣಸೆ, ತಂತಿ ಕಾಳಪ್ಪ, ರವೀಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT