ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪ್ಪನ್‌ಪೇಟೆ | ಸಾಧನೆಯ ಹಾದಿಗೆ ಪರಿಶ್ರಮವೇ ಮಂತ್ರದಂಡ: ಡಾ.ಕೃಷ್ಣ ಎಸ್.ಭಟ್

‘ಪ್ರಜಾವಾಣಿ’ ಅಮೃತ ಮಹೋತ್ಸವ ಸಂಭ್ರಮದಲ್ಲಿ ವಿದ್ಯಾರ್ಥಿಗಳಿಗೆ ಡಾ.ಕೃಷ್ಣ ಎಸ್. ಭಟ್ ಕಿವಿಮಾತು
Last Updated 24 ಫೆಬ್ರುವರಿ 2023, 4:13 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ‘ಸಾಧನೆಯ ಆಸೆ ಎಲ್ಲರಿಗೂ ಇರುತ್ತದೆ. ಅದು ಈಡೇರಲು ಪ್ರಯತ್ನ ಬಹಳ ಮುಖ್ಯ. ಕಷ್ಟಪಡಬೇಕು. ಪರಿಶ್ರಮಿಗಳಾಗಬೇಕು. ಶ್ರಮವೇವ ಜಯತೆ ಎಂಬುದನ್ನು ಅರಿತು ಹೆಜ್ಜೆ ಹಾಕಬೇಕು’ ಎಂದು ಡಾ. ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ.ಕೃಷ್ಣ ಎಸ್.ಭಟ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಟ್ಟಣದ ‘ಪ್ರಜಾವಾಣಿ’ ಓದುಗರ ವೇದಿಕೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ‘ಪ್ರಜಾವಾಣಿ’ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ‘ವಿದ್ಯಾರ್ಥಿಗಳು ಗುರಿ ತಲುಪುವುದು ಹೇಗೆ’ ಎಂಬ ವಿಷಯದ ಕುರಿತು ಅವರು ಮಾರ್ಗದರ್ಶನ ನೀಡಿದರು.

‘ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ಬಹಳ ವಿಷಯಗಳು ನಮಗೆ ಪ್ರಕೃತಿಯಲ್ಲಿಯೇ ಕಾಣಸಿಗುತ್ತವೆ. ನಾವು ಮಕ್ಕಳನ್ನು ಬೆಕ್ಕು ತನ್ನ ಮರಿಯ ಮೇಲೆ ತೋರುವ ಕಾಳಜಿಯಷ್ಟು ಅಸ್ಥೆ ತೋರದೆ ಮಂಗನ ರೀತಿ ನಿರ್ಲಿಪ್ತವಾಗಿ ಬೆಳೆಸಬೇಕು. ಮಕ್ಕಳನ್ನು ಅತಿ ಕಾಳಜಿಯಿಂದ ಬೆಳೆಸಿದರೆ ಹೆದರಿಕೆ, ಅಂಜುಬುರುಕುತನ, ಜನರ ಮುಂದೆ ಬಾರದ ಭಾವನೆ ಬೆಳೆಸಿಕೊಳ್ಳುತ್ತಾರೆ. ಅವರು ಆ ಭಾವನೆಯಿಂದ ಹೊರಬರಲು ಬಹಳ ಕಷ್ಟವಾಗುತ್ತದೆ. ಹೀಗಾಗಿ ಮಕ್ಕಳಲ್ಲಿ ಸ್ವತಂತ್ರ ಭಾವ, ಧೈರ್ಯ ಬೆಳೆಸಬೇಕು. ನಮ್ಮ ವ್ಯಕ್ತಿತ್ವ ನಿರ್ಮಾಣವಾದಂತೆ ನಮ್ಮ ಗುರಿ ಹಂತ ಹಂತವಾಗಿ ಈಡೇರುತ್ತದೆ’ ಎಂದರು.

‘ಬದುಕಿನಲ್ಲಿ ಗುರಿ, ನಿರ್ಧಾರ ಕಪಿಮುಷ್ಠಿಯಂತೆ ದೃಢವಾಗಿ ಇರಬೇಕು. ಪರಿಸರ, ಕುಟುಂಬ ಚೆನ್ನಾಗಿದ್ದರೆ ನಾವು ನೋಡಿ ಕಲಿಯುತ್ತೇವೆ. ಕಲಿಕೆ ಈ ವಯಸ್ಸಿನಲ್ಲಿ ನಿರಂತರವಾಗಿ ಜ್ಞಾನ ಸಂಪಾದನೆಗೆ ಸಹಾಯ ಮಾಡುತ್ತದೆ. ಗುರಿ ಸಾಧನೆಗೆ ಕೆಲವು ಮೆಟ್ಟಿಲುಗಳಿವೆ. ಅವುಗಳನ್ನು ಹತ್ತಿದರೆ ಗುರಿ ಸಾಧನೆ ಮಾಡಲು ಸಾಧ್ಯ’ ಎಂದರು.

‘ಪರೀಕ್ಷೆ ಪಾಸ್ ಆಗಬೇಕು ಎಂಬ ಗುರಿ ತಲುಪಲು ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಈಗಲೇ ತಂದುಕೊಳ್ಳಬೇಕು. ನನ್ನ ಸಾಮರ್ಥ್ಯ, ದೌರ್ಬಲ್ಯವೇನು? ಯಾವ ಅವಕಾಶಗಳು ಇವೆ. ಯಾವುದು ಬಾಧಕವಾಗಲಿದೆ ಎಂಬುದನ್ನು ಅರಿತು ಸಾಮರ್ಥ್ಯವನ್ನು ಗುರಿ ಸಾಧನೆಗೆ ಬಳಸಬೇಕು. ಗುರಿ ಸಾಧಿಸಲು ಬದಲಾವಣೆ ಆಗಬೇಕು. ಬದ್ಧತೆ ತೋರಿಸಬೇಕು. ಸಾಧನೆಯಲ್ಲಿ ಪ್ರಯತ್ನ ಬಹಳ ಮುಖ್ಯವಾದದ್ದು. ಅದಕ್ಕೆ ಶೇ 1ರಷ್ಟು ಸ್ಫೂರ್ತಿ ಅವಕಾಶ
ವಾದರೆ, ಶೇ 99ರಷ್ಟು ಕಷ್ಟ ಪಡಬೇಕು’ ಎಂದು ಸಲಹೆ ನೀಡಿದರು.

‘ನಮ್ಮ ಪರಿಸರದಲ್ಲಿ ಎದುರಾಗುವ ಕಷ್ಟವನ್ನು ಬದಿಗೊತ್ತಿ. ಆಕರ್ಷಣೆಗಳಿಂದ ಮುಕ್ತರಾಗಿ ಪರೀಕ್ಷಾ ವೇಳೆಗೆ ನಿಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳುವುದು ನಿಮ್ಮ ಬದ್ಧತೆಯನ್ನು ಅವಲಂಬಿಸಿದೆ. ಆ ಬದ್ಧತೆ ಪ್ರಾಮಾಣಿಕವಾಗಿರಬೇಕು’ ಎಂದರು.

‘ಮನಸ್ಸನ್ನು ಪಕ್ವ ಮಾಡಿಕೊಳ್ಳಬೇಕು. ಜಾಗೃತ ಮನಸ್ಸು, ಸುಪ್ತ ಮನಸ್ಸು ಹಾಗೂ ಅತಿ ಜಾಗೃತ ಮನಸ್ಸಿನ (ಇದ್, ಇಗೊ, ಸೂಪರ್ ಇಗೊ) ನಡುವೆ ಸಮನ್ವಯ ಸಾಧಿಸಬೇಕು. ಇದು ನಮ್ಮ ಮನಸ್ಸಿನ ಗುಣ. ಗುರಿ ಸಾಧನೆಯಲ್ಲಿ ಸುಪ್ತ ಮನಸ್ಸನ್ನು ಬಹಳ ಉಪಯೋಗಿಸಿಕೊಳ್ಳಬೇಕು. ಗುರಿ, ವಿಚಾರ ನಿತ್ಯ ಬರೆದು ದೃಢೀಕರಿಸಿಕೊಳ್ಳಿ. ಋಣಾತ್ಮಕ ವಿಷಯ ಬೇಡ. ನನ್ನ ಗುರಿ ನಾನು ತಲುಪುತ್ತೇನೆ ಎಂಬ ಭಾವನೆ ಹೆಜ್ಜೆ ಹೆಜ್ಜೆಗೂ ದೃಢವಾಗಲಿ’ ಎಂದು ಸಲಹೆ ನೀಡಿದರು.

‘ಪ್ರಜಾವಾಣಿ’ ದಾವಣಗೆರೆ ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಮಾತನಾಡಿ, ‘ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪದವಿ ಪಡೆದು ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂಬ ಉಮೇದಿಯಲ್ಲಿದ್ದೀರಿ. ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಬೇಕಾದರೆ ಓದು ಮತ್ತು ಬರವಣಿಗೆ ಬಹಳ ಮುಖ್ಯ’ ಎಂದು ಹೇಳಿದರು.

‘ಯಾವುದೇ ಕೆಲಸವನ್ನು ವಿಧಿ–ವಿಧಾನದೊಂದಿಗೆ ಮಾಡಬೇಕು. ಅದಕ್ಕೆ ಪೂರಕವಾಗಿ ನಾವು ಮುನ್ನಡೆಯಬೇಕು. ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

‘ಪ್ರಜಾವಾಣಿ’ ಓದುಗರ ಬಳಗದ ವೇದಿಕೆಯ ರಿ.ರಾ. ರವಿಶಂಕರ್, ಪ್ರಸರಣ ವಿಭಾಗದ ಮುಖ್ಯಸ್ಥ ಪ್ರಕಾಶ ನಾಯಕ್, ಜಿಲ್ಲಾ ವರದಿಗಾರ ವೆಂಕಟೇಶ್ ಜಿ.ಎಚ್., ಜಾಹೀರಾತು ವಿಭಾಗದ ಮುಖ್ಯಸ್ಥ ಚೇತನ್‌ಕುಮಾರ್, ಪತ್ರಕರ್ತ ರಫೀಕ್ ರಿಪ್ಪನ್‌ಪೇಟೆ, ಉದ್ಯಮಿ ಹಸನಬ್ಬ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹುಲಿಗಿನ ಮನೆಯ ಕೃಷಿಕ ಬಿ.ಟಿ. ರವೀಂದ್ರ, ಚಿಂತಕ ಚಂದ್ರಶೇಖರ್ (ಮಂಜಣ್ಣ), ಶಿಕ್ಷಣ ಸಂಯೋಜಕ ದುಗ್ಗಪ್ಪ ಜಿ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಬೋಜಪ್ಪ ಹಾಗೂ ಪತ್ರಿಕಾ ವಿತರಕ ಎಂ.ಲೋಕೇಶ್ ಅವರನ್ನು ಸನ್ಮಾನಿಸಲಾಯಿತು.

ಸಾಮಾಜಿಕ ಜವಾಬ್ದಾರಿಯ ಕೆಲಸ: ಶ್ಲಾಘನೆ

‘ಮನುಷ್ಯ ಹುಟ್ಟು ಸಾಲಗಾರ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಈ ಸಮಾಜಕ್ಕೆ, ಕುಟುಂಬಕ್ಕೆ, ಸ್ನೇಹಿತರು, ಪ್ರಕೃತಿಯ ಋಣ ನಾವು ತೀರಿಸಲು ಅಗುವುದಿಲ್ಲ. ಆದರೆ ಋಣ ಭಾರ ಕಡಿಮೆ ಮಾಡಿಕೊಳ್ಳಲು ಮಾತ್ರ ಸಾಧ್ಯವಿದೆ. ಅದನ್ನು ಎಲ್ಲರೂ ಮಾಡಬೇಕು. ಸಿಂಧುವಿನಲಿ ಬಿಂದುವಿನಂತೆ ‘ಪ್ರಜಾವಾಣಿ’ ಕೂಡ ತನ್ನ ಅಮೃತ ಮಹೋತ್ಸವದ ಸಂಭ್ರಮದ ಈ ಹೊತ್ತಿನಲ್ಲಿ ಸಾಮಾಜಿಕ ಜವಾಬ್ದಾರಿಯ ಇಂತಹ ಕೆಲಸ ಮಾಡುತ್ತಿದೆ’ ಎಂದು ಡಾ.ಕೃಷ್ಣ ಎಸ್. ಭಟ್ ಶ್ಲಾಘಿಸಿದರು.

‘ಪ್ರಜಾವಾಣಿ’ ಜನರ ವಾಣಿಯಾಗಿ ವ್ಯಕ್ತಿತ್ವ ನಿರ್ಮಾಣ, ಸಾಹಿತ್ಯ, ಕಲೆಗೆ ಅಪಾರ ಕೊಡುಗೆ ನೀಡಿದೆ. ಮುಂದೆ ಪ್ರಜೆಗಳಾಗಬೇಕಿರುವ ವಿದ್ಯಾರ್ಥಿ ವೃಂದಕ್ಕೆ ತಮ್ಮ ಪತ್ರಿಕೆ ಉಣಬಡಿಸಬೇಕು. ಓದುಗರಲ್ಲಿನ ಪ್ರಜ್ಞೆ ಜಾಗೃತಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಕನ್ನಡಿಗರ ಅಸ್ಮಿತೆ ‘ಪ್ರಜಾವಾಣಿ’: ಕುನಗೋಡು

ಕನ್ನಡ ಸಾಹಿತ್ಯ ಮತ್ತು ಪರಂಪರೆಗೆ ತನ್ನದೇಯಾದ ಲೋಕದೃಷ್ಟಿ ಇದೆ. ಅದನ್ನು ಕಾಲಕಾಲಕ್ಕೆ ಸಮರ್ಥವಾಗಿ ಕಟ್ಟಿಕೊಟ್ಟದ್ದು ‘ಪ್ರಜಾವಾಣಿ’ ಎಂದು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರತ್ನಾಕರ್ ಸಿ. ಕುನಗೋಡು ಸ್ಮರಿಸಿದರು.

‘ಭಾರತಕ್ಕೆ ಸ್ವಾತಂತ್ರ್ಯ ಕಾಲಿಟ್ಟಾಗ ‘ಪ್ರಜಾವಾಣಿ’ ಆರಂಭವಾಗಿದೆ. ಅದರ 75 ವರ್ಷಗಳ ಪ್ರಯಾಣ ಅತ್ಯಂತ ರೋಚಕವಾದದ್ದು. ನಾವೆಲ್ಲರೂ ಸ್ಮರಿಸಬೇಕಾದದ್ದು. ಕನ್ನಡಿಗರ ಜೀವನಾಡಿ ಪತ್ರಿಕೆ ಆಗಿ ತನ್ನ ವಿಶ್ವಾಸಾರ್ಹತೆ, ವಸ್ತುನಿಷ್ಠತೆ ಹಾಗೂ ನಿಖರತೆಯಿಂದ ನಾಡು–ನುಡಿ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದೆ’ ಎಂದರು.

‘ಕನ್ನಡ ಸಾಹಿತ್ಯದ ಎಲ್ಲ ಚಳವಳಿಗಳಲ್ಲಿ ಹೆಚ್ಚೂಕಡಿಮೆ ಮುಖವಾಣಿಯಾಗಿ ಸಾಹಿತ್ಯ ಚಳವಳಿಯನ್ನು ಗಟ್ಟಿಗೊಳಿಸಿದೆ. ತನ್ನ ಜೀವಪರ, ಮನುಷ್ಯಪರ ಚಿಂತನೆಗಳನ್ನು ಕಾಪಿಟ್ಟುಕೊಂಡು ಮುನ್ನಡೆದ ಪತ್ರಿಕೆ ಇದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡದ ಮಟ್ಟಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಯಶಸ್ಸು ಸಾಧಿಸುವ ಎಲ್ಲರಿಗೂ ‘ಪ್ರಜಾವಾಣಿ’ ದಿನಪತ್ರಿಕೆ ಅತ್ಯುತ್ತಮ ಮಾರ್ಗದರ್ಶಿ.

–ಆರ್.ಕೆ. ರಾಜು, ಪ್ರಾಚಾರ್ಯರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನ್‌ಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT