‘ಪ್ರಜಾವಾಣಿ’ ಅಮೃತ ಸಂಭ್ರಮ: ಆರೋಗ್ಯ ಶಿಬಿರದ ಮೆರುಗು

ಸೊರಬ: ‘ಪ್ರಜಾವಾಣಿ’ಯ ಅಮೃತ ಮಹೋತ್ಸವದ ಸಂಭ್ರಮಕ್ಕೆ ಜೊತೆಯಾದ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮಂಗಳವಾರ ಇಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುವ ಮೂಲಕ ಪತ್ರಿಕೆಯ ಅಮೃತ ಘಳಿಗೆಯ ಸ್ಮರಣೆಯನ್ನು ಸಾರ್ಥಕಗೊಳಿಸಿತು.
ಸೊರಬ ಪಟ್ಟಣ ಮಾತ್ರವಲ್ಲದೇ ಸುತ್ತಮುತ್ತಲಿನ ಹಳ್ಳಿಗಳ 123 ಜನರು ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅದರಲ್ಲಿ 40ಕ್ಕೂ ಹೆಚ್ಚುಮಕ್ಕಳು ಒಳಗೊಂಡಿದ್ದು ವಿಶೇಷವಾಗಿತ್ತು. ಸಂತೆಯ ದಿನವಾದ ಕಾರಣ ಪಟ್ಟಣಕ್ಕೆ ಬಂದಿದ್ದ ಹಳ್ಳಿಗರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಸೊರಬ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರಭು ಸಾಹುಕಾರ್ ನೇತೃತ್ವದಲ್ಲಿ ಶಿಬಿರ ಆಯೋಜನೆಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಹಾಗೂ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಯೋಜನೆಯಡಿ ಗ್ರಾಮಗಳಲ್ಲಿ ಅಂಗನವಾಡಿಗೆ ಬರುವ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು,
ಅದರಲ್ಲಿ ಅತಿಯಾದ ಎದೆ ನೋವು, ರಕ್ತದೊತ್ತಡ, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುವ ಮಕ್ಕಳನ್ನು ಪೋಷಕರು ಕರೆತಂದು ಉಚಿತವಾಗಿ ಪರೀಕ್ಷೆ ನಡೆಸಲಾಯಿತು.
ಶಿಬಿರದಲ್ಲಿ ನವಜಾತ ಶಿಶು ಮತ್ತು ಮಕ್ಕಳ ಹೃದ್ರೋಗ ಸಮಸ್ಯೆಗಳು, ವಯಸ್ಕರಲ್ಲಿ ಎದೆನೋವು, ರಕ್ತದ ಒತ್ತಡ, ಆಯಾಸ, ಅತಿಯಾದ ಬೆವರುವಿಕೆ, ಎದೆಯಲ್ಲಿ ಉರಿ, ಉಸಿರಾಟದಲ್ಲಿ ತೊಂದರೆಯ ಬಗ್ಗೆ
ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರಿಂದ ತಪಾಸಣೆ ನಡೆಯಿತು. ಇಸಿಜಿ, ಎಕೋ ಸ್ಕ್ರೀನಿಂಗ್, ಜಿಆರ್‌ಬಿಎಸ್, ರಕ್ತದ ಒತ್ತಡ ಪರೀಕ್ಷೆಯ ಜೊತೆ ವೈದ್ಯರೊಂದಿಗೆ ಸಮಾಲೋಚನೆಗೆ ಅವಕಾಶ ಮಾಡಿಕೊಡಲಾಗಿತ್ತು.
ಪುಟ್ಟ ಮಕ್ಕಳನ್ನು ಕರೆತಂದಿದ್ದ ತಾಯಂದಿರು, ಮಧ್ಯ ವಯಸ್ಕರು,
ಹಿರಿಯರು ಸಾಲಾಗಿ ಬಂದು ನೋಂದಣಿ ಮಾಡಿಸಿ ಮಧ್ಯಾಹ್ನದವರೆಗೂ ಶಿಬಿರದ ಪ್ರಯೋಜನ ಪಡೆದುಕೊಂಡರು.
ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯ ಡಾ.ಎ.ಜೆ.ಅಶ್ವಲ್, ಡಾ.ಹಿಮಾ ಸ್ಕೆರಿಯಾ ನೇತೃತ್ವದಲ್ಲಿ
ತಪಾಸಣೆ ಕಾರ್ಯ ನಡೆಯಿತು. ಶಿಬಿರದ ಉಸ್ತುವಾರಿ ಎಸ್.ಗಣೇಶ್ ಹಾಜರಿದ್ದರು.
..........
‘ಮಕ್ಕಳಿಗೆ ಒತ್ತಡ ಮುಕ್ತ ಬಾಲ್ಯ ನೀಡಿ’
‘ಮಕ್ಕಳಲ್ಲೂ ಈಚೆಗೆ ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದಕ್ಕೆ ಬದಲಾದ ಜೀವನ ಕ್ರಮ ಹಾಗೂ ಆಹಾರ ಪದ್ಧತಿಯೂ ಕಾರಣವಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭು ಸಾಹುಕಾರ್ ಅಭಿಪ್ರಾಯಪಡುತ್ತಾರೆ.
ಆರೋಗ್ಯ ಶಿಬಿರದ ನಡುವೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಪತ್ರಿಕೆಯ ಅಮೃತ ಮಹೋತ್ಸವ ಸಂಭ್ರಮಕ್ಕೆ ಶುಭಾಶಯ ಕೋರಿದರು.
‘ಪೋಷಕರು ಮಕ್ಕಳ ಮೇಲೆ ಅತಿಯಾದ ನಿರೀಕ್ಷೆ ಇಡುತ್ತಿದ್ದೇವೆ. ಅದು ಅವರಲ್ಲಿ ಒತ್ತಡ ಉಂಟಾಗುತ್ತಿದೆ. ಮಕ್ಕಳ ಬಾಲ್ಯ ಕಸಿದುಕೊಂಡಿದ್ದೇವೆ. ಶಾಲೆಯಲ್ಲಿ ಜಾಸ್ತಿ ಹೋಂ ವರ್ಕ್‌ನ ಒತ್ತಡ, ಮನೆಗೆ ಬಂದಾಗ ಅಪ್ಪ–ಅಮ್ಮನ ಒತ್ತಡ ಅವರನ್ನು ಹೈರಾಣಾಗಿಸಿದೆ. ಸರಿಯಾಗಿ ಊಟ, ನಿದ್ದೆ ಕೂಡ ಮಾಡಲು ಬಿಡುವುದಿಲ್ಲ. ಎಷ್ಟೇ ಫ್ರೀಯಾಗಿ ಬಿಟ್ಟರೂ ಮತ್ತೊಂದು ಮಗುವಿಗೆ ಹೋಲಿಸುವುದನ್ನು ಬಿಡುವುದಿಲ್ಲ. ಹೀಗೆ ಒತ್ತಡ ಹೇರುವ ಬದಲು ಮಕ್ಕಳ ಅಸಕ್ತಿಯ ಕ್ಷೇತ್ರದ ಕಡೆ ಪ್ರೋತ್ಸಾಹ ನೀಡಬೇಕು’ ಎಂದು ಸಲಹೆ ನೀಡುತ್ತಾರೆ.
‘ಇನ್ನು ಊಟದಲ್ಲಿ ಶೇ 50ರಷ್ಟು ವಿಷ ತಿನ್ನಿಸುತ್ತಿದ್ದೇವೆ. ಜಂಕ್ ಫುಡ್ ಅವರ ಆರೋಗ್ಯಕ್ಕೆ ಮಾರಕವಾಗಿದೆ. ಇನ್ನು ತರಕಾರಿ, ಹಣ್ಣು, ಆಹಾರ ಧಾನ್ಯ ಎಲ್ಲದರಲ್ಲೂ ಮಿತಿಮೀರಿದ ಔಷಧ ಬಳಕೆಯಾಗುತ್ತಿದೆ. ತರಕಾರಿ ಹಸಿರು ಆಗಿ ಕಾಣಲು ಔಷಧ ಹಾಕುವಂತಹ ವಿಷಮ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಇದೆಲ್ಲವೂ ಹೃದ್ರೋಗಗಳಿಗೆ ಕಾರಣವಾಗುತ್ತಿದೆ’ ಎಂದರು.
ದೊಡ್ಡವರು, ಮಕ್ಕಳು ಎನ್ನದೇ ಪ್ರತಿಯೊಬ್ಬರೂ ನಿತ್ಯ ಅರ್ಧ ಗಂಟೆಯಾದರೂ ವ್ಯಾಯಾಮ ಮಾಡಲೇಬೇಕು. ಆಗ ಮಾತ್ರ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ಹೇಳಿದರು.
ಹುಟ್ಟಿನಿಂದ ಬರುವ ಹೃದಯ ಕಾಯಿಲೆಗಳ ತಪಾಸಣೆ
ಶಿಬಿರದಲ್ಲಿ ಇಕೋ, ಇಸಿಜಿ ಮಾಡಲಾಗುತ್ತಿದ್ದು, ಇದು
ವಿಶೇಷವಾಗಿ ಮಕ್ಕಳಿಗೋಸ್ಕರ ಮಾಡಲಾಗಿದೆ. ಮಕ್ಕಳಲ್ಲಿರುವ ಹೃದ್ರೋಗ ಪತ್ತೆ ಮಾಡಿ ಅವರಿಗೆ ಬೇಕಾದ ಚಿಕಿತ್ಸೆಗೆ ಇಲ್ಲಿ ಸಲಹೆ ನೀಡುತ್ತಿದ್ದೇವೆ. ಜೊತೆಗೆ ವಯಸ್ಕರಿಗೂ ತಪಾಸಣೆ ಮಾಡಿದ್ದೇವೆ ಎಂದು ಶಿಬಿರದ ನೇತೃತ್ವ ವಹಿಸಿದ್ದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತಜ್ಞ ವೈದ್ಯ ಡಾ.ಅಶ್ವಲ್ ತಿಳಿಸಿದರು.
‘ಹುಟ್ಟಿನಿಂದ ಮಕ್ಕಳಿಗೆ ಬರುವ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ತಂದೆ ತಾಯಂದಿರಿಗೆ ಅರಿವು ಇರುವುದಿಲ್ಲ. ಯಾರಾದರೂ ಹೇಳಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಶಿಬಿರದ ಮೂಲಕ ಅವರಲ್ಲಿ ತಿಳಿವಳಿಕೆ ಮೂಡಿಸುತ್ತಿದ್ದೇವೆ’ ಎಂದು ತಿಳಿಸಿದರು.
ಉಚಿತ ತಪಾಸಣಾ ಶಿಬಿರದ ಬಗ್ಗೆ ‘ಪ್ರಜಾವಾಣಿ’ ಪೇಪರ್‌ನಲ್ಲಿ ಬಂದಿದ್ದನ್ನು ನೋಡಿ ನಮ್ಮ ಪಾಪುಗೆ ಕರೆತಂದು ಚೆಕ್‌ಅಪ್ ಮಾಡಿಸಿದೆವು. ಎಲ್ಲ ಸರಿಯಾಗಿದೆ. ಏನೂ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.
–ಶಕುಂತಲಾ, ಜಡೆ ಕಲಕೊಪ್ಪ
ಆಸ್ಪತ್ರೆಯಲ್ಲಿ ನಡೆದ ಈ ಶಿಬಿರದಲ್ಲಿ ವೈದ್ಯರು ಇಸಿಜಿ ಮಾಡಿದ್ದಾರೆ. ಬಿಪಿ, ಶುಗರ್ ಚೆಕ್ ಮಾಡಿದ್ದಾರೆ.
– ತೆಕ್ಕು ಕೆರಿಯಪ್ಪ, ಕಲ್ಲಂಬಿ
.........
ಶಿಬಿರದಲ್ಲಿ ಬೆಳಿಗ್ಗೆಯಿಂದ ತಪಾಸಣೆ ಮಾಡುತ್ತಾ ಇದ್ದಾರೆ. ನಾನೂ ತಪಾಸಣೆ ಮಾಡಿಸಿಕೊಂಡಿದ್ದೇನೆ. ಇದೊಂದು ಉತ್ತಮ ಕಾರ್ಯಕ್ರಮ.
–ಶಿವಪ್ಪ, ಕೊಡಕನಹಳ್ಳಿ ಗ್ರಾಮಸ್ಥ
.......
ಮಕ್ಕಳಲ್ಲಿ ಹುಟ್ಟಿನಿಂದಲೇ ಬರುವ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಅರಿವು ಮೂಡಿತು. ಒಟ್ಟಾರೆ ಆರೋಗ್ಯ ತಪಾಸಣೆ ಶಿಬಿರ ನಮಗೆ ನೆರವಾಯಿತು.
– ವಿನೋದಾ, ಸ್ಥಳೀಯರು
ಈ ಶಿಬಿರ ಆಯೋಜಿಸಿರುವುದು ಬಡವರಿಗೆ ಬಹಳ ಉಪಯುಕ್ತ. ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ ಮಾಡಿಸಿಕೊಳ್ಳಲು ನೆರವಾಯಿತು.
–ಯಲ್ಲಪ್ಪ ಉದ್ರಿ, ಸ್ಥಳೀಯರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.