ಶನಿವಾರ, ಜೂನ್ 25, 2022
24 °C
ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ

ಜಲ ಸಂಸ್ಕೃತಿ ಉಳಿಸಲು ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ‘ನಾಡಿನ ಜಲ ಮೂಲಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಜಲ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಅಗತ್ಯ ನೆರವು ನೀಡಲು ಕರ್ಣಾಟಕ ಬ್ಯಾಂಕ್ ಸದಾ ಸಿದ್ಧವಿದೆ’ ಎಂದು ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಹೇಳಿದರು.

ಸಮೀಪದ ವರದಾಮೂಲ ಗ್ರಾಮದಲ್ಲಿ ಸ್ವಾನ್ ಎಂಡ್ ಮ್ಯಾನ್ ಸಂಸ್ಥೆ ಕರ್ಣಾಟಕ ಬ್ಯಾಂಕ್ ಸಹಯೋಗದೊಂದಿಗೆ ಪುನಶ್ಚೇತನಗೊಳಿಸಿದ ಅಗಸ್ತ್ಯತೀರ್ಥ ಕೆರೆಯನ್ನು ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕರ್ಣಾಟಕ ಬ್ಯಾಂಕ್ ಜನರ ಬ್ಯಾಂಕ್‌. ಜನರ ಠೇವಣಿ ಹಾಗೂ ಸಾಲದ ಬಡ್ಡಿ ಹಣದಿಂದ ಬ್ಯಾಂಕ್ ಅಭಿವೃದ್ಧಿ ಸಾಧಿಸಿದ್ದು, ಅದಕ್ಕೆ ಪ್ರತಿಯಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ದೃಷ್ಟಿಯನ್ನು ಬ್ಯಾಂಕ್ ಹೊಂದಿದೆ. ಹೀಗಾಗಿ ಕೆರೆ ಹೂಳೆತ್ತುವ ಕೆಲಸಕ್ಕೆ ಗ್ರಾಮಸ್ಥರೊಂದಿಗೆ ಕರ್ನಾಟಕ ಬ್ಯಾಂಕ್ ಕೈಜೋಡಿಸಿದೆ ಎಂದು ಹೇಳಿದರು.

ಈ ಹಿಂದೆ ತಾಲ್ಲೂಕಿನ ಬಂಗಾರಮ್ಮನ ಕೆರೆ ಹೂಳೆತ್ತಲು ₹ 5 ಲಕ್ಷ, ಆನೆಸೊಂಡಿಲು ಕೆರೆ ಹೂಳೆತ್ತಲು ₹ 2 ಲಕ್ಷ ನೆರವು ನೀಡಲಾಗಿತ್ತು. ಇದೀಗ ಅಗಸ್ತ್ಯತೀರ್ಥ ಕೆರೆ ಅಭಿವೃದ್ಧಿಗೆ ₹ 6 ಲಕ್ಷ ನೀಡಲಾಗಿದೆ. ನೀಚಡಿ ಗ್ರಾಮದ ಕೆರೆ ಅಭಿವೃದ್ಧಿಗೆ ಕೂಡ ಬ್ಯಾಂಕ್ ಸಹಕಾರ ನೀಡಿದೆ ಎಂದು ಹೇಳಿದರು.

‘ಕೆರೆಯ ಹೂಳು ಎತ್ತಿ ಅಭಿವೃದ್ಧಿ ಕಾರ್ಯ ನಡೆಸುವುದರಿಂದ ಅಂತರ್ಜಲ ವೃದ್ಧಿಯಾಗುವ ಜೊತೆಗೆ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಕೆರೆಗಳು ಜೀವಂತವಾಗಿದ್ದರೆ ಪ್ರಾಣಿ, ಪಕ್ಷಿಗಳಿಗೂ ಅನುಕೂಲವಾಗುತ್ತದೆ. ಈ ಅಂಶವನ್ನು
ನಾವು ಪರಿಗಣಿಸಬೇಕಿದೆ’ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಡಾ.ಎಲ್. ನಾಗರಾಜ್ , ‘ಸರ್ಕಾರದ ನೆರವಿಲ್ಲದೆ ಸಂಘ ಸಂಸ್ಥೆಗಳು, ಆಯಾ ಗ್ರಾಮಗಳ ಪ್ರಮುಖರು ಒಟ್ಟಿಗೆ ಸೇರಿ ಕೆರೆಯ ಅಭಿವೃದ್ಧಿಗೆ ಮುಂದಾಗಿರುವುದು ಆರೋಗ್ಯಕರ ಬೆಳವಣಿಗೆ. ಇಂತಹ ಕಾರ್ಯಕ್ಕೆ ಎಲ್ಲರ ನೆರವು ಅತ್ಯಗತ್ಯ’ ಎಂದರು.

ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯ ಕಾರ್ಯದರ್ಶಿ ಅಖಿಲೇಶ್ ಚಿಪ್ಪಳಿ, ‘40 ದಿನಗಳಲ್ಲಿ ಅಗಸ್ತ್ಯತೀರ್ಥ ಕೆರೆಯ ಹೂಳೆತ್ತಲು ₹ 17 ಲಕ್ಷ ವೆಚ್ಚ ಮಾಡಲಾಗಿದೆ. ಅಸ್ತಿ ಭಾರದಿಂದ ತುಂಬಿಹೋಗಿದ್ದ ಈ ತೀರ್ಥದ ಶುದ್ಧೀಕರಣ ಸವಾಲಿನ ಕೆಲಸವಾಗಿತ್ತು. ಕರ್ಣಾಟಕ ಬ್ಯಾಂಕ್‌ ನೀಡಿರುವ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಅದೇ ರೀತಿ ಹಲವು ದಾನಿಗಳು ಕೂಡ ಕೈಜೋಡಿಸಿದ್ದಾರೆ’ ಎಂದು ತಿಳಿಸಿದರು.

ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯ ನಿರ್ದೇಶಕ ಕಲ್ಯಾಣ ಸುಂದರಂ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕ ಹಯವದನರಾವ್, ಗ್ರಾಮಸ್ಥರಾದ ಮಂಜುನಾಥ್, ಎಲ್.ವಿ. ಅಕ್ಷರ, ವಿ.ಜಿ. ಶ್ರೀಧರ್ ಇದ್ದರು.

ಭಾರತಿ ಭಟ್ ಪ್ರಾರ್ಥಿಸಿದರು. ಮಂಜುನಾಥ ಶೆಟ್ಟಿ ಸ್ವಾಗತಿಸಿದರು. ಗುರುದತ್ತ ಶರ್ಮ ಗ್ರಾಮಸ್ಥರ ಪರವಾಗಿ ಮಾತನಾಡಿದರು. ವ.ಶಂ. ರಾಮಚಂದ್ರ ಭಟ್ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು