ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌ ತೆಗೆಯಲು ನಿರಾಕರಣೆ: ಪರೀಕ್ಷೆ ‍ಬರೆಯದೇ ತೆರಳಿದ ವಿದ್ಯಾರ್ಥಿನಿಯರು

ಪ್ರೌಢಶಾಲೆ ತರಗತಿಗಳು ಆರಂಭ; ಹಿಜಾಬ್‌ ಧರಿಸಿ ತರಗತಿಯಲ್ಲಿ ಕೂರಲು ಅವಕಾಶ ನಿರಾಕರಣೆ
Last Updated 15 ಫೆಬ್ರುವರಿ 2022, 2:05 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಬಿ.ಎಚ್‌. ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 13 ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದಿಡಲು ಸೋಮವಾರ ನಿರಾಕರಿಸಿದರು. ಪೂರ್ವಭಾವಿ ಪರೀಕ್ಷೆ ತ್ಯಜಿಸಿ ಮನೆಗೆ ಮರಳಿದರು.

ಜಿಲ್ಲೆಯಲ್ಲಿ ಸೋಮವಾರದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತೆ ಪರೀಕ್ಷೆ ಆರಂಭಗೊಂಡಿದೆ. ಬಿ.ಎಚ್. ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿಯೊಳಗೆ ಹಿಜಾಬ್‌ ಧರಿಸಿ ಬಂದಿದ್ದರು. ಹಿಜಾಬ್, ಬುರ್ಖಾ ಧರಿಸುವಂತಿಲ್ಲ ಎಂದು ಶಿಕ್ಷಕರು ತಿಳಿಸಿದರು. ಆದರೆ, ಹಿಜಾಬ್ ತೆಗೆಯಲು ಒಪ್ಪದ 13 ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿಯಿಂದ ಹೊರ ನಡೆದರು. ಶಿಕ್ಷಕರು ಅವರ ಮನವೊಲಿಸಿ ಪರೀಕ್ಷೆ ಎದುರಿಸುವಂತೆ ಹೇಳಿದರು. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಹೊರ ನಡೆದರು.

ಪೋಷಕರು ಮತ್ತು ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ನಡೆದಿದೆ. ಈ ಮಧ್ಯೆ ಶಾಲೆಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಗಿ ಭದ್ರೆತೆಯಲ್ಲಿ ಶಾಲೆ ಆರಂಭ: ಹಿಜಾಬ್–ಕೇಸರಿ ಶಾಲು ಸಂಘರ್ಷದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಮೊದಲ ಹಂತದಲ್ಲಿ ಪ್ರೌಢಶಾಲೆಗಳ ತರಗತಿ ಆರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಕಳೆದ ವಾರ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಲು ತೂರಟವಾಗಿತ್ತು. ಹೀಗಾಗಿ ಸಮೀಪದಲ್ಲೇ ಇರುವ ಬಿ.ಎಚ್. ರಸ್ತೆಯ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆ ಸಂಭವಿಸದಂತೆ ಮೀಸಲು ಪೊಲೀಸ್‌ ಪಡೆಯನ್ನೂ ನಿಯೋಜಿಸಲಾಗಿದೆ.

ಸಮವಸ್ತ್ರ ಕಡ್ಡಾಯ: ಹಿಜಾಬ್, ಬುರ್ಖಾ, ಕೇಸರಿ ಶಾಲು ಧರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಅದರಂತೆ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ, ಹಿಜಾಬ್ ಸೇರಿ ಧರ್ಮ ಸೂಚಕ ಬಟ್ಟೆ ಧರಿಸದಂತೆ ನಿಗಾ ವಹಿಸಲಾಯಿತು. ಹಿಜಾಬ್, ಬುರ್ಖಾ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಸಮವಸ್ತ್ರದಲ್ಲಿ ಶಾಲೆಗೆ ಬರುವಂತೆ ಸೂಚಿಸಲಾಯಿತು.

ಕಾರ್ಗಲ್ ವರದಿ: ಹಿಜಾಬ್ ಧರಿಸಲು ಅವಕಾಶ ನೀಡದೇ ಇದ್ದುದರಿಂದ ಮುಸ್ಲಿಂ ವಿದ್ಯಾರ್ಥಿನಿಯರು ಇಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಗೈರಾದರು.

ಸೋಮವಾರ ಶಾಲೆ ಆರಂಭಗೊಂಡಿದ್ದು, ಒಟ್ಟು 171 ವಿದ್ಯಾರ್ಥಿಗಳಲ್ಲಿ 122 ವಿದ್ಯಾರ್ಥಿಗಳು ಹಾಜರಿದ್ದರು. ಈ ಪೈಕಿ 13 ವಿದ್ಯಾರ್ಥಿನಿಯರು ಗೈರಾದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT