ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಗ್ಗಿದ ಪಾದಚಾರಿ ಮಾರ್ಗ; ಕುಗ್ಗಿದ ರಸ್ತೆಗಳು: ಎಚ್.ಎಂ.ಚಂದ್ರಶೇಖರಪ್ಪ ಅಸಮಾಧಾನ

ಮಾಜಿ ಶಾಸಕರ ವೇದಿಕೆ ಅಧ್ಯಕ್ಷ
Last Updated 11 ಡಿಸೆಂಬರ್ 2021, 12:23 IST
ಅಕ್ಷರ ಗಾತ್ರ

ಶಿವಮೊಗ್ಗ: ಪಾದಚಾರಿ ಮಾರ್ಗಗಳನ್ನು ಹಿಗ್ಗಿಸಿ, ರಸ್ತೆಗಳನ್ನು ಕುಗ್ಗಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡುವ ಈ ಸ್ಮಾರ್ಟ್‌ಸಿಟಿ ಯೋಜನೆಯ ಅಗತ್ಯವಿದೆಯೇ ಎಂದು ಮಾಜಿ ಶಾಸಕರ ವೇದಿಕೆ ಅಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ ಪ್ರಶ್ನಿಸಿದರು.

ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಮುಗಿಯಲು ಎಷ್ಟು ದಿನಗಳು ಬೇಕಿದೆ. ಅವೈಜ್ಞಾನಿಕವಾಗಿ ಯೋಜನೆ ರೂಪಿಸಲಾಗಿದೆ. ಪಾದಚಾರಿ ಮಾರ್ಗಗಳನ್ನು ದೊಡ್ಡದಾಗಿ ವಿಸ್ತರಿಸಲಾಗಿದೆ. ರಸ್ತೆಗಳು ಕಿರಿದಾಗಿವೆ. ದೊಡ್ಡದಾದ ಫುಟ್‌ಪಾತ್‌ಗಳನ್ನು ವ್ಯಾಪಾರಸ್ಥರು, ಬೀದಿ ಬದಿ ತಿಂಡಿ ವ್ಯಾಪಾರಿಗಳು, ಹೋಟೆಲ್, ವಾಣಿಜ್ಯ ಮಳಿಗೆಗಳ ಮಾಲೀಕರು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಹೊಸದಾಗಿ ನಿರ್ಮಾಣವಾಗಿರುವ ಫುಟ್‌ಪಾತ್‌ಗಳನ್ನು ತಮ್ಮ ಸ್ವತ್ತುಗಳೆಂದು ಭಾವಿಸಿಕೊಂಡಿದ್ದಾರೆ. ಪಾದಚಾರಿಗಳು ಓಡಾಡಲು ಅವಕಾಶವೇ ಇಲ್ಲ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಸ್ಮಾರ್ಟ್‌ಸಿಟಿ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಶೇ 70ರಷ್ಟು ಕಮಿಷನ್ ನೀಡಿ, ಇನ್ನುಳಿದ ಶೇ 30ರಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ಅನುಮಾನವಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಕಚೇರಿ, ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ಅವಧಿಯ ನಾಮಫಲಕಗಳು ಇರುವಂತೆ ಶಾಸಕರ ನಾಮಫಲಕಗಳೂ ಇರಬೇಕು. ಯಾವ ಶಾಸಕರು ಎಷ್ಟು ವರ್ಷ ಜನಸೇವೆ ಮಾಡಿದ್ದರು ಎಂಬ ವಿವರದ ಆವಶ್ಯಕತೆ ಇದೆ. ಇದು ಇಡೀ ದೇಶದ ಸ್ಥಳೀಯ ಸಂಸ್ಥೆಗಳು, ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕು. ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದರು.

ದೇಶಕ್ಕಾಗಿ ತ್ಯಾಗ ಮಾಡಿದ ಸೈನಿಕರನ್ನು ಸ್ಮರಿಸಬೇಕಿದೆ. ಸೇನಾಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿ. ಸಚಿವರು, ಮುಖ್ಯಮಂತ್ರಿಗೆ ಇರುವಂತೆ ಸೇನೆಯ ಪ್ರಮುಖರಿಗೂ ಭದ್ರತೆಗೆ ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT