ಭಾನುವಾರ, ಸೆಪ್ಟೆಂಬರ್ 26, 2021
21 °C

ಹೊಸನಗರ: ಜಲಮೂಲ ಗಟ್ಟಿಗೊಳಿಸಿದ ಗ್ರಾಮಸ್ಥರು

ರವಿ ನಾಗರಕೊಡಿಗೆ Updated:

ಅಕ್ಷರ ಗಾತ್ರ : | |

ಹೊಸನಗರ: ತಾಲ್ಲೂಕಿನ ಮುತ್ತಲ ಗ್ರಾಮದಲ್ಲಿ ಸ್ಥಳೀಯರೇ ಸೇರಿಕೊಂಡು ಮೂರು ಪುರಾತನ ಕೆರೆಗಳ ಹೂಳೆತ್ತಿ, ಅವುಗಳಿಗೆ ಮರುಜೀವ ನೀಡಿದ್ದಾರೆ. ಇವರಿಗೆ ‘ಸಾರಾ’ ಸಂಸ್ಥೆ ಮಾರ್ಗದರ್ಶನ ನೀಡಿದೆ.

ಗ್ರಾಮದಲ್ಲಿ 82 ಮನೆಗಳಿದ್ದು, ಎಲ್ಲರೂ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಕೆರೆ ಹೂಳೆತ್ತುವ ಮೂಲಕ ಕೃಷಿ ಚಟುವಟಿಕೆಗೆ ಸ್ಥಳೀಯವಾಗಿಯೇ ಇವರು ನೀರಿನ ಮೂಲವನ್ನು  ಕಂಡುಕೊಂಡಿದ್ದಾರೆ.

‘ಕೃಷಿ ಚಟುವಟಿಕೆಗೆ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ನಿರ್ಣಯ ಕೈಗೊಂಡಿದ್ದರು. ಇದಕ್ಕಾಗಿ ಮೂರು ಪುರಾತನ ಕೆರೆಗಳನ್ನು ಗುರುತಿಸಲಾಯಿತು. ಪ್ರಥಮವಾಗಿ ಮಾಕೋಡು ಕೆರೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆವು. ಸರ್ಕಾರದ ನೆರವಿಗೆ ಕಾಯದೇ, ಗ್ರಾಮಸ್ಥರೇ ಈ ಕಾರ್ಯ ಆರಂಭಿಸಿದರು.  ‘ಸಾರಾ’ ಸಂಸ್ಥೆಯವರು ಜೆಸಿಬಿಯನ್ನು ಒದಗಿಸಿದರು. ಊರಿನ ಪ್ರತಿ ಮನೆಯವರು ಧನಸಹಾಯ ಮಾಡಿದರು. ಇದರಿಂದಾಗಿ, ಹೂಳನ್ನು ಪೂರ್ಣವಾಗಿ ತೆಗೆದು ಕೆರೆಗೆ ಮರುಜೀವ ನೀಡಲು ಸಾಧ್ಯವಾಗಿದೆ’ ಎನ್ನುತ್ತಾರೆ ಸ್ವಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ.

‘ಮೊದಲ ಪ್ರಯತ್ನದ ಯಶಸ್ಸಿನಿಂದ ಉತ್ತೇಜಿತರಾಗಿ ಇದೀಗ ಊರಿನ ಇನ್ನೊಂದು ಹಳೆಯ ಕೆರೆಯಾದ ‘ವರ್ತೆ ಕೆರೆ’ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಶೇ 60ರಷ್ಟು ಕೆಲಸ ಮುಗಿದಿದೆ.  ಮಾಕೋಡು ಕೆರೆ ಅಭಿವೃದ್ಧಿಯಿಂದ 22 ಎಕರೆ ಜಮೀನಿಗೆ ನೀರಾವರಿ ಸಾಧ್ಯವಾಗಲಿದೆ. ಇದೇ ರೀತಿ ವರ್ತೆ ಕೆರೆ ಅಭಿವೃದ್ಧಿಯಿಂದ 60 ಎಕರೆ ಜಮೀನಿಗೆ ನೀರು ಪೂರೈಕೆ ಸಾಧ್ಯವಾಗಲಿದೆ. ಮಾಕೋಡು ಕೆರೆ ಅಭಿವೃದ್ಧಿಗೆ ₹2.40 ಲಕ್ಷ ವೆಚ್ಚವಾಗಿದ್ದು, ವರ್ತೆ ಕೆರೆ ಅಭಿವೃದ್ಧಿಗೆ ₹3.80 ಲಕ್ಷ ವೆಚ್ಚ ನಿರೀಕ್ಷಿಸಲಾಗಿದೆ. ಇನ್ನೊಂದು ಕೆರೆ ಅಭಿವೃದ್ಧಿ ಕಾರ್ಯವನ್ನು ಮಳೆಗಾಲ ಮುಗಿದ ಬಳಿಕ ಜನವರಿಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಗ್ರಾಮದಲ್ಲಿ ಇನ್ನೊಂದು ಇಂಗುಗುಂಡಿ ಕಾಮಗಾರಿಯನ್ನು ಸಹ ಆರಂಭಿಸಲಾಗಿದೆ’ ಎಂದು ಅವರು ಹೇಳುತ್ತಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು