ಶನಿವಾರ, ಜನವರಿ 28, 2023
15 °C

ಮುಳುಗಡೆ ತಾಲ್ಲೂಕನ್ನು ಮರೆತ ಸರ್ಕಾರಗಳು: ಪ್ರವಾಸೋದ್ಯಮವೊಂದೇ ದಾರಿ

ರವಿ ನಾಗರಕೊಡಿಗೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ಹೊಸನಗರ ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊತ್ತು ದಶಕಗಳು ಕಳೆದರೂ ಅಭಿವೃದ್ಧಿ ಪಥದಲ್ಲಿ ಎಡವುತ್ತಲೇ ಸಾಗಿದೆ.

ಹೊಸನಗರ ತಾಲ್ಲೂಕು ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ ಎಂಬಂತಾಗಿದ್ದು ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಜನರು ರೋಸಿ ಹೋಗಿದ್ದಾರೆ. ಬಜೆಟ್ ಸಂದರ್ಭದಲ್ಲೂ ತಾಲ್ಲೂಕನ್ನು ಮರೆತು ವ್ಯವಹರಿಸಿದ್ದೇ ಹೆಚ್ಚು. ಇಲ್ಲಿನ ಹತ್ತಾರು ಬೇಡಿಕೆಗಳಿಗೆ ಯಾವುದೇ ವಿಶೇಷ ಅನುದಾನ ಹರಿದು ಬರದಿರುವುದರಿಂದ ತೀವ್ರ ನಿರಾಸೆ ಉಂಟಾಗಿದೆ.

ಮುಳುಗಡೆ ತಾಲ್ಲೂಕು: ಹೊಸನಗರ ಹೇಳಿಕೇಳಿ ಮುಳುಗಡೆ ತಾಲ್ಲೂಕು. ಒಂದಲ್ಲ ಎರಡಲ್ಲ ನಾಲ್ಕು ಜಲಾಶಯಗಳಿಂದಾಗಿ ಮುಳುಗಡೆ ಹಿನ್ನೀರನ್ನು ತನ್ನ ಒಡಲಲ್ಲಿ ತುಂಬಿಕೊಂಡಿದ್ದು, ಇಲ್ಲ ಇಲ್ಲಗಳ ನಡುವೆಯೇ ತನ್ನ ಅಸ್ತಿತ್ವ ಕಳೆದುಕೊಂಡಿದೆ.

ಇಲ್ಲಿದ್ದ ಫಲವತ್ತಾದ ಭೂ ಪ್ರದೇಶವನ್ನು ಜಲಾಶಯಗಳ ಹಿನ್ನೀರು ಒಂದೇ ಗುಟುಕಿಗೆ ಆಪೋಶನ ತೆಗೆದುಕೊಂಡ ಬೆನ್ನಲ್ಲೇ ಹೊಸನಗರ ಪಾಪದ ಕೂಪಕ್ಕೆ ತಳ್ಳಲ್ಪಟ್ಟಿತು. ಅಳಿದುಳಿದ ಜಾಗದಲ್ಲಿ ಬದುಕು ಕಟ್ಟಿಕೊಳ್ಳಲು ಹರಸಾಹಸಪಟ್ಟ ಇಲ್ಲಿನ ಜನರು ಸರ್ಕಾರದತ್ತ ಆಸೆಗಣ್ಣಿನಿಂದ ನೆಟ್ಟ ನೋಟಕ್ಕೆ ಕೊನೆಗೂ ಬೆಲೆ ಸಿಗದಾಯಿತು. ಜನರಿಗೆ ಸೂಕ್ತ ಪರಿಹಾರ ಸಿಗದೆ ಬದುಕು ಮುರಾಬಟ್ಟೆ ಆದಾಗಲೂ ಸರ್ಕಾರ ಯಾವುದೇ ಅಭಯ ನೀಡಿಲ್ಲ. ನೂರಾರು ಕುಟುಂಬಗಳಿಗೆ ಇನ್ನೂ ಪರಿಹಾರ ಲಭ್ಯವಾಗಿಲ್ಲ. ಪುನರ್ವಸತಿ ಪ್ರದೇಶ ಬಲಾಢ್ಯರ ಪಾಲಾಗಿದೆ. ಬರಿಗೈಲಿ ಹೋದ ರೈತರಿಗೆ ಇಲ್ಲಿ ಆಶ್ರಯ, ನೆಲೆ ಸಿಗದೆ ಹೆದರಿ ಊರು ಬಿಟ್ಟವರೇ ಹೆಚ್ಚಿದ್ದಾರೆ.

ಪ್ರವಾಸೋದ್ಯಮವೊಂದೇ ಅಭಿವೃದ್ಧಿ ದಾರಿ: ಮುಳುಗಡೆ ತಾಲ್ಲೂಕಾದ ಹೊಸನಗರದ ಸಮಗ್ರ ಅಭಿವೃದ್ಧಿಗೆ ಇಲ್ಲಿನ ಪ್ರವಾಸಿ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸುವುದು ಒಂದೇ ದಾರಿ ಇದೆ. ಇಲ್ಲಿನ ಪ್ರಾಕೃತಿಕ, ಪ್ರೇಕ್ಷಣೀಯ, ರಮಣೀಯ ಸ್ಥಳಗಳಾದ ನಗರ ಕೋಟೆ, ಕೊಡಚಾದ್ರಿ ಗಿರಿಶಿಖರ, ಹಿಂಡ್ಲುಮನೆ, ತಪಾಸಿ ಜಲಪಾತ ಮತ್ತಿತರ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಹೊಸನಗರಕ್ಕೊಂದು ಹೊಸ ರೂಪ ನೀಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಕೊಡಚಾದ್ರಿ ಗಿರಿ ಶಿಖರದ ಸೊಬಗು ಸವಿಯಲು ದಿನಕ್ಕೆ ನೂರಾರು ಜನ ಬರುತ್ತಾರೆ. ಆದರೆ, ಇಲ್ಲಿ ಮೂಲಸೌಕರ್ಯಗಳು ಇಲ್ಲ. ವಾಹನ ಸಂಚಾರಕ್ಕೆ ಯೋಗ್ಯ ರಸ್ತೆ, ತಂಗಲು ಸೂಕ್ತ ಸ್ಥಳಾವಕಾಶ ಇಲ್ಲವಾಗಿದೆ. ಇಲ್ಲಿನ ಜೀಪ್ ಮಾಫಿಯಾದಿಂದ ಪ್ರವಾಸಿಗರಿಗೆ ಅನುಕೂಲಕ್ಕಿಂತ ಕಿರಿ ಕಿರಿಯೇ ಹೆಚ್ಚು. ಸರ್ಕಾರ ಕೊಡಚಾದ್ರಿ ಗಿರಿ ಶಿಖರ ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮೂಲೆಗುಂಪಾದ ಕೆಪಿಸಿ ವಸಹಾತು: ಸಾವೇಹಕ್ಕಲು, ಚಕ್ರಾ, ವಾರಾಹಿ ಜಲಾಶಯ ನಿರ್ಮಾಣ ಕಾಲದಲ್ಲಿ ಪ್ರವರ್ಧಮಾನದಲ್ಲಿದ್ದ ಕೆಪಿಸಿ ಕಾ‌ಲೊನಿಗಳು ಇಂದು ಮೂಲೆಗುಂಪಾಗಿವೆ. ಅಧಿಕಾರಿ, ನೌಕರರಿಂದ ತುಂಬಿದ್ದ ಕಾಲೊನಿ ಜನವಸತಿ ಇಲ್ಲದೆ ಹಾಳು ಬಿದ್ದಿದೆ. ಕೊಟ್ಯಾಂತರ ರೂಪಾಯಿ ಸುರಿದು ನಿರ್ಮಿಸಿದ್ದ ವಸತಿ ಸಮುಚ್ಚಯಗಳು ಸರ್ಕಾರವನ್ನು ಅಣಕಿಸುತ್ತಿವೆ. ಅವುಗಳನ್ನು ಬದಲಿ ವ್ಯವಸ್ಥೆಗೆ ಬಳಸಿಕೊಳ್ಳಬೇಕೆಂಬ ಸ್ಥಳೀಯರ ಹಕ್ಕೋತ್ತಾಯಕ್ಕೆ ಇನ್ನೂ ಮಾನ್ಯತೆ ಸಿಕ್ಕಿಲ್ಲ ಎನ್ನುತ್ತಾರೆ ರೈತ ಸಂಘದ ಅಧ್ಯಕ್ಷ ರವೀಂದ್ರ.

ಸಂಪರ್ಕ ಸೇತುವೆ ಪ್ರಮುಖ ಸಮಸ್ಯೆ: ಮುಳುಗಡೆ ಪ್ರದೇಶದಲ್ಲಿ ಸಂಪರ್ಕ ಸೇತವೆ ಪ್ರಮುಖ ಸಮಸ್ಯೆಯಾಗಿದೆ. ಯಡೂರು, ಮಾಸ್ತಿಕಟ್ಟೆ, ನಿಟ್ಟೂರು, ಸಂಪೇಕಟ್ಟೆ ಭಾಗದಲ್ಲಿ ಊರುಗಳ ನಡುವೆ ಸಂಪರ್ಕ ಸಾಧಿಸುವುದು ದುಸ್ತರವಾಗಿದೆ. ಇಲ್ಲಿನ ಜನರಿಗೆ ತಾಲ್ಲೂಕು ಕೇಂದ್ರದ ಸಂಪರ್ಕ ಸಲೀಸಾಗಿಲ್ಲ. ಕಿ.ಮೀ. ಸುತ್ತಿ ಬರಬೇಕಾಗಿದೆ. ಇಲ್ಲಿನ ಮುಳುಗಡೆ ಕಡುವಿನಲ್ಲಿ ಸಂಪರ್ಕ ಸೇತು ನಿರ್ಮಾಣ ಮಾಡಬೇಕೆಂಬ ಕೂಗು ಪ್ರತಿಧ್ವನಿಸುತ್ತಲೇ ಇದೆ. ಬೆಕ್ಕೋಡಿ ಸೇತುವೆ ನಿರ್ಮಾಣ ಪ್ರಸ್ತಾವನೆ ಸರ್ಕಾರ ಮಟ್ಟದಲ್ಲಿದ್ದು, ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನಿರೀಕ್ಷೆ ಮಾಡಲಾಗಿದೆ.

**
ತಾಲ್ಲೂಕನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದರಿಂದ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯಿಂದ ಹೊರಗುಳಿಯಲಿದೆ. ತಾಲ್ಲೂಕಿನ ಇಬ್ಬರು ಬಿಜೆಪಿ ಶಾಸಕರು ಬಜೆಟ್ ಮಂಡನೆಯಲ್ಲಿ ಹೊಸನಗರಕ್ಕೆ ಪ್ರಾತಿನಿಧ್ಯ ತೋರುವಲ್ಲಿ ಶ್ರಮ ವಹಿಸಬೇಕು.
-ಬಿ.ಜಿ. ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

**
ಬಿಲ್ಸಾಗರ ಕಡುವಿನಲ್ಲಿ ಸೇತುವೆ ನಿರ್ಮಾಣ ಸಂಬಂಧ ಬೇಡಿಕೆ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೇಡಿಕೆಗೆ ಸ್ಪಂದಿಸಿ ₹ 18 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ.
-ಕೆ.ವಿ. ಕೃಷ್ಣಮೂರ್ತಿ, ಬಿಜೆಪಿ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು