ಗುರುವಾರ , ಮೇ 19, 2022
21 °C
ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌ನ 7ನೇ ವಾರ್ಷಿಕ ಸಮ್ಮೇಳನ

‘ಯುವಕರಿಗೆ ದಿವ್ಯತ್ರಯರ ಸಂದೇಶ ತಲುಪಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಸಂಘರ್ಷದಿಂದ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಯುವಜನರಿಗೆ ದಿವ್ಯತ್ರಯರ ಸಂದೇಶಗಳನ್ನು ಹೆಚ್ಚು ತಲುಪಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಚೆನ್ನೈನ ವಿವೇಕಾನಂದ ಕಾಲೇಜು ಮುಖ್ಯಸ್ಥ ಹಾಗೂ ಕೋಲ್ಕತ್ತ ಬೇಲೂರು ಮಠದ ಪ್ರತಿನಿಧಿ ಶುಕದೇವಾನಂದಜೀ ಮಹಾರಾಜ್ ಹೇಳಿದರು.

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌ನ 7ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

‘ಇಂದು ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚಿದೆ. ಸಾಕಷ್ಟು ನಕಾರಾತ್ಮಕ ಚಿಂತನೆಗಳು ಕಂಡುಬರುತ್ತಿವೆ. ದಿವ್ಯತ್ರಯರ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಸಿದ್ಧಿಸುತ್ತದೆ. ದಿವ್ಯತ್ರಯರ ಸಂದೇಶಗಳು ಎಲ್ಲರಲ್ಲೂ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದ ಭಾವ ಮೂಡಿಸುವುದಾಗಿದೆ. ಹೀಗಾಗಿ ಇವರ ಚಿಂತನೆಗಳು ಪ್ರಸ್ತುತ ಕಾಲಘಟ್ಟಕ್ಕೆ ಅತಿ ಅವಶ್ಯ ಎಂದರು.

ಗದಗ-ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ‘ಮನುಷ್ಯನಲ್ಲಿ ಆತ್ಮಶಕ್ತಿ ಜಾಗೃತವಾಗುವಲ್ಲಿ ವಿವೇಕಾನಂದರ ಚಿಂತನೆ ಅವಶ್ಯ. ದಿವ್ಯತ್ರಯರ ಚಿಂತನೆ, ಸಂದೇಶಗಳಿಂದ ಮಾತ್ರ ಭಾರತ ಉದ್ಧಾರ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಭವಿಷ್ಯವೇ ಮಂಕಾಗುತ್ತದೆ’ ಎಂದರು.

ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ‘ಪ್ರತಿಯೊಬ್ಬರಲ್ಲೂ ವಿವೇಕಾನಂದ, ರಾಮಕೃಷ್ಣ ಪರಮಹಂಸ ಹಾಗೂ ಮಾತೆ ಶಾರದಾದೇವಿಯವರ ಚಿಂತನೆಗಳನ್ನು ಜಾಗೃತಿಗೊಳಿಸುವಲ್ಲಿ ಪುರುಷೋತ್ತಮಾನಂದ ಶ್ರೀಗಳ ಪಾತ್ರ ಹಿರಿದು’ ಎಂದು ಹೇಳಿದರು.

ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

ಮಾದಿಹಳ್ಳಿ-ತುರವೇಕೆರೆ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಜಿ ಮಹಾರಾಜ್, ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ, ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವಿನಯಾನಂದ ಸರಸ್ವತಿ, ದಾವಣಗೆರೆ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದಜಿ ಮಹಾರಾಜ್ ಹಾಗೂ ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಅಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.