ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶಕ್ಕೆ ಸಾಗಿಸಿದ್ದ ₹1.34 ಕೋಟಿ ಮೌಲ್ಯದ ಅಡಿಕೆ ವಶ

ಸಾಗರ: 350 ಚೀಲದಲ್ಲಿದ್ದ, ₹ 1.34 ಕೋಟಿ ಮೌಲ್ಯದ ಅಡಿಕೆ ಪತ್ತೆ ಮಾಡಿದ ಪೊಲೀಸರು
Last Updated 24 ನವೆಂಬರ್ 2022, 5:23 IST
ಅಕ್ಷರ ಗಾತ್ರ

ಸಾಗರ: ಗುಜರಾತ್‌ನ ಅಹ್ಮದಾಬಾದ್‌ಗೆ ಲಾರಿಯಲ್ಲಿ ತಲುಪಬೇಕಿದ್ದ ಇಲ್ಲಿನ ವರ್ತಕರೊಬ್ಬರ ಅಡಿಕೆಯನ್ನು ಮಧ್ಯಪ್ರದೇಶಕ್ಕೆ ಸಾಗಿಸಿ, ವಂಚನೆಗೆ ಯತ್ನಿಸಿದ್ದ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುವ ಗ್ರಾಮಾಂತರ ಠಾಣೆ ಪೊಲೀಸರು, ಈ ಸಂಬಂಧ ಮೂವರನ್ನು ಬಂಧಿಸಿ ಕರೆತಂದಿದ್ದಾರೆ.

350 ಚೀಲದಲ್ಲಿದ್ದ, ₹ 1.34 ಕೋಟಿ ಮೊತ್ತದ ಕೆಂಪು ಅಡಿಕೆ ಹಾಗೂ ಅದನ್ನು ಸಾಗಿಸಿದ್ದ ಲಾರಿಯನ್ನು ಮಂಗಳವಾರ ವಶಪಡಿಸಿಕೊಳ್ಳಲಾಗಿದ್ದು, ವಂಚನೆಗೆ ಯತ್ನಿಸಿದ್ದ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಸಾರಂಗಪುರದ ರಜಾಕ್ ಖಾನ್ ಅಲಿಯಾಸ್‌ ಸಲೀಂ, ತೇಜುಸಿಂಗ್, ಅನೀಸ್ ಅಬ್ಬಾಸಿ ಅವರನ್ನು ಬಂಧಿಸಲಾಗಿದೆ.

ಸಮೀಪದ ಬಳಸಗೋಡು ಗ್ರಾಮದ ವರ್ತಕ ಮಧುಕರ್ ಹೆಗಡೆ ಅವರಿಂದ 24,500 ಕೆ.ಜಿ. ತೂಕದ 350 ಚೀಲ ಕೆಂಪು ಅಡಿಕೆಯನ್ನು ಖರೀದಿಸಿದ್ದ ಭದ್ರಾವತಿಯ ದೋಲಾರಾಮ್, ಅಹ್ಮದಾಬಾದ್‌ನ ವ್ಯಾಪಾರಿಯೊಬ್ಬರಿಗೆ ತಲುಪಿಸಬೇಕಿತ್ತು.

‘ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದಿಂದ ಬೆಂಗಳೂರಿಗೆ ಲಾರಿಯಲ್ಲಿ ಗೋಧಿಯನ್ನು ತುಂಬಿಕೊಂಡು ಬಂದಿದ್ದ ಆರೋಪಿಗಳು ತಮ್ಮ ಊರಿಗೆ ವಾಪಸಾಗುವಾಗ ಲಾರಿಯಲ್ಲಿ ಯಾವುದಾದರೂ ಸರಕು ತುಂಬಿಸಿಕೊಂಡು ವಂಚನೆ ಮಾಡಬೇಕು ಎಂಬ ಉದ್ದೇಶದಿಂದಲೇ ಕೆಲವು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಸಂಚು ರೂಪಿಸಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬೆಂಗಳೂರಿಗೆ ಬರುವಾಗಲೇ ನಕಲಿ ಆಧಾರ್ ಕಾರ್ಡ್ ಹಾಗೂ ಅದೇ ಹೆಸರಿನಲ್ಲಿ ಮೂರು ಸಿಮ್ ಕಾರ್ಡ್ ಖರೀದಿಸಿದ್ದ ಆರೋಪಿಗಳು ಪರಸ್ಪರ ಮಾತುಕತೆ ನಡೆಸಿದ್ದರು. ಮಲೆನಾಡು ಪ್ರದೇಶದಿಂದ ಹೊರರಾಜ್ಯಕ್ಕೆ ಬೆಲೆಬಾಳುವ ಮೊತ್ತದ ಅಡಿಕೆ ನಿರಂತರವಾಗಿ ರವಾನೆಯಾಗುತ್ತದೆ ಎಂಬ ಮಾಹಿತಿ ಪಡೆದು ವಂಚಿಸಲು ಮುಂದಾಗಿದ್ದರು’ ಎಂದು ಮಾಹಿತಿ ನೀಡಿದರು.

ತರೀಕೆರೆಯ ವ್ಯಕ್ತಿಯೊಬ್ಬರ ಸಹಾಯದಿಂದ ದೋಲಾರಾಮ್ ಅವರನ್ನು ಸಂಪರ್ಕಿಸಿದ್ದ ಆರೋಪಿಗಳು, ‘ಲಾರಿ ಖಾಲಿ ತೆರಳುತ್ತಿದ್ದು, ನಿಮ್ಮ ಅಡಿಕೆಯನ್ನು ಹೇಳಿದಲ್ಲಿಗೆ ತಲುಪಿಸುತ್ತೇವೆ’ ಎಂದು ಬಾಡಿಗೆ ಕುದುರಿಸಿದ್ದರು. ಬಳಸಗೋಡು ಗ್ರಾಮದಿಂದ ಮಧುಕರ್ ಹೆಗಡೆ ಅವರ ಮಂಡಿಯಿಂದ ಅಡಿಕೆಯನ್ನು ಲಾರಿಯಲ್ಲಿ ತುಂಬಿಸಿಕೊಂಡು ಅಹ್ಮದಾಬಾದ್‌ಗೆ ಬದಲು ಮಧ್ಯಪ್ರದೇಶದತ್ತ ಹೋಗಿ ತಲೆ ಮರೆಸಿಕೊಂಡಿದ್ದರು ಎಂದು ಹೇಳಿದರು.

ಆರೋಪಿಗಳ ಮಾರ್ಗ ಮದ್ಯೆ ತಾವು ಬಳಸಿದ್ದ ಮೊಬೈಲ್ ಫೋನ್‌ ಅನ್ನು, ಸಿಮ್ ಕಾರ್ಡ್ ಸಮೇತ ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದು ಹೋಗಿದ್ದರಿಂದ ಅವರ ಪತ್ತೆ ಕಾರ್ಯ ಸವಾಲಿನಿಂದ ಕೂಡಿತ್ತು. ತನಿಖೆಗಾಗಿ ರಚಿಸಲಾದ ವಿಶೇಷ ತಂಡದ ಸದಸ್ಯರು ಮಧ್ಯಪ್ರದೇಶಕ್ಕೆ ತೆರಳಿ 22 ದಿನಗಳ ಕಾರ್ಯಾಚರಣೆ ನಡೆಸಿದ ಬಳಿಕ ಆರೋಪಿಗಳನ್ನು ಮಾಲು ಸಮೇತ ಪತ್ತೆ ಹಚ್ಚಲಾಗಿದೆ. ಚೆಕ್ ಪೋಸ್ಟ್‌ನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೊ ಜಾಡುಹಿಡಿದು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಆರೋಪಿಗಳನ್ನು
ಪತ್ತೆ ಮಾಡಲಾಗಿದೆ ಎಂದು
ಹೇಳಿದರು.

ಇದು ರಾಜ್ಯದಲ್ಲಿ ಅಡಿಕೆ ವಂಚನೆಗೆ ಯತ್ನಿಸಿದ ದೊಡ್ಡ ಪ್ರಕರಣವಾಗಿದ್ದು, ತನಿಖಾ ತಂಡದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಪ್ರವೀಣ್ ಕುಮಾರ್, ತಿರುಮಲೇಶ್, ಸಿಬ್ಬಂದಿ ಸನಾವುಲ್ಲಾ, ಶ್ರೀಧರ್, ತಾರಾನಾಥ್, ರವಿಕುಮಾರ್, ಹನುಮಂತಪ್ಪ ಜಂಬೂರ, ಇಂದ್ರೇಶ್, ವಿಜಯಕುಮಾರ್, ಗುರು ಇದ್ದರು. ಪ್ರತಿಯೊಬ್ಬರಿಗೆ ತಲಾ ₹ 10,000 ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಲಾಗುವುದು ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT