ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಚೂರಿ ಇರಿತ ಪ್ರಕರಣ| ರಾಜಕೀಯ ಒತ್ತಡದಿಂದ ಪತಿಗೆ ಗುಂಡು: ಆರೋಪಿ ಪತ್ನಿ

ಪತ್ರಿಕಾಗೋಷ್ಠಿಯಲ್ಲಿ ಬಂಧಿತ ಜಬೀವುಲ್ಲಾ ಪತ್ನಿ ಶಬಾನಾ ಅಳಲು
Last Updated 19 ಆಗಸ್ಟ್ 2022, 5:02 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರಾಜಕೀಯ ಒತ್ತಡದಿಂದಾಗಿ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿಕೊಂಡು ನನ್ನ ಪತಿ ಮೇಲೆ ಗುಂಡು ಹಾರಿಸಿ ಜೀವ ಬೆದರಿಕೆ ಹಾಕಿದ್ದಾರೆ. ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಚೂರಿ ಇರಿತ ಪ್ರಕರಣದ ಮುಖ್ಯ ಆರೋಪಿ ಜಬೀವುಲ್ಲಾ ಪತ್ನಿ ಶಬಾನಾ ಬಾನು ಒತ್ತಾಯಿಸಿದರು.

‘ನನ್ನ ಪತಿ ಅಮಾಯಕ. ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಗಂಡನನ್ನು ಬಿಡುಗಡೆ ಮಾಡಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಆಗಸ್ಟ್‌ 15ರಂದು ಶಿವಮೊಗ್ಗದಲ್ಲಿ ಗಲಾಟೆಯಾದಾಗ ನನ್ನ ಪತಿ ಮನೆಯಲ್ಲಿ ಇದ್ದರು. ಗಲಾಟೆಯ ಮಾಹಿತಿ ತಿಳಿದು ಎಲ್ಲಿಯೂ ಹೊರಗಡೆ ಹೋಗಿರಲಿಲ್ಲ. ಅದೇ ದಿನ ರಾತ್ರಿ ಸುಮಾರು 9.30ಕ್ಕೆ ಊಟ ಮಾಡುತ್ತಿರುವಾಗ ಕೆಲವು ಪೊಲೀಸರು ಬಂದು ಹೊರಗಡೆ ಬರಲು ಕರೆದಾಗ ಪತಿ ಊಟ ಮಾಡುವುದು ಬಿಟ್ಟು ಹೊರಗಡೆ ಬಂದರು. ಆಗ ಪೊಲೀಸರು ಸ್ಟೇಷನ್‌ಗೆ ಬರಲು ತಿಳಿಸಿದರು’ ಎಂದರು.

‘ಪತಿ ಅಮಾಯಕ ಎಂದರೂ ಮನೆಯಿಂದ ಕರೆದುಕೊಂಡು ಹೋಗಿ ಗುಂಡು ಹಾರಿಸಿದ್ದಾರೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪತಿಯ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಆಗಬೇಕು. ನ್ಯಾಯ ದೊರಕಿಸಿಕೊಡಬೇಕು. ನ್ಯಾಯಾಲಯಕ್ಕೆ ಈ ಪ್ರಕರಣವನ್ನು ಒಯ್ಯಲು ತೀರ್ಮಾನಿಸಿದ್ದೇನೆ’ ಎಂದರು.

***

‘ಹಿಂದೂ ಮುಖಂಡರ ಮೇಲೆ ಕ್ರಮ ಏಕಿಲ್ಲ’

‘ಶಾಸಕ ಕೆ.ಎಸ್.ಈಶ್ವರಪ್ಪ ಮೇಲೆ ಆರೋಪ ಬಂದಾಗಲೆಲ್ಲ ಶಿವಮೊಗ್ಗದಲ್ಲಿ ಗಲಭೆಯಾಗುತ್ತದೆ. ಅವರ ಮೇಲಿನ ಆರೋಪಗಳ ಗಮನ ಬೇರೆಡೆ ಸೆಳೆಯಲು ಹೀಗೆ ಮಾಡಲಾಗುತ್ತಿದೆ’ ಎಂದು ಪೀಸ್ ಕಮಿಟಿ ಮುಖಂಡ ರಿಯಾಜ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಬಜರಂಗದಳ ಮುಖಂಡ ದೀನ್‌ದಯಾಳ್ ನಗರವನ್ನು ಸುಟ್ಟುಹಾಕುತ್ತೇವೆ ಎಂದು ಹೇಳಿದರೂ ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ. ಮಸೀದಿಗಳಲ್ಲಿ ದೇಶ ವಿರೋಧಿ ಚಟುವಟಿಕೆ ಹೇಳಿಕೊಡುವುದಿಲ್ಲ. ಈ ರೀತಿ ಸುಳ್ಳು ಆರೋಪ ಮಾಡಿ ಯುವಕರನ್ನು ದಾರಿ ತಪ್ಪಿಸಬೇಡಿ’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT