ಭಾನುವಾರ, ಅಕ್ಟೋಬರ್ 24, 2021
20 °C
ರಂಭಾಪುರಿಶ್ರೀ ಶರನ್ನವರಾತ್ರಿ ದಸರಾ ದರ್ಬಾರ್‌ ಧರ್ಮ ಸಮಾರಂಭ: ವಿವಿಧ ಮಠಾಧೀಶರು, ಸಚಿವರು ಭಾಗಿ

ಧರ್ಮದಲ್ಲಿ ಮಾರ್ಗವಿದೆ, ವೇಗವಿಲ್ಲ: ರಂಭಾಪುರಿಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೇನಂದಿಹಳ್ಳಿ (ಶಿರಾಳಕೊಪ್ಪ): ಧರ್ಮದಲ್ಲಿ ಮಾರ್ಗವಿದೆ, ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಆದರೆ ಮಾರ್ಗವಿಲ್ಲ. ಇವೆರಡೂ ಪರಸ್ಪರ ಪೂರಕವಾಗಿದ್ದರೆ ಮಾನವನ ಪ್ರಗತಿ ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಕಡೇನಂದಿಹಳ್ಳಿ ಗ್ರಾಮದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ದರ್ಬಾರ್‌ ಕಾರ್ಯಕ್ರಮದ ಧರ್ಮ ಸಮಾರಂಭದ 4ನೇ ದಿನದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜೀವನದಲ್ಲಿ ವೇಗ ಇಲ್ಲದಿದ್ದರೆ ಜಡತ್ವ ಬರುತ್ತದೆ. ಧರ್ಮದ ಮಾರ್ಗ ಇಲ್ಲದೇ ಹೋದರೆ ಕೆಲವೊಮ್ಮೆ ಸಂಕಷ್ಟ ಬರುತ್ತದೆ. ಧರ್ಮವಿಲ್ಲದ ವಿಜ್ಞಾನ ಮತ್ತು ವಿಜ್ಞಾನವಿಲ್ಲದ ಧರ್ಮ ಬೆಳೆಯುವುದು ಬಲು ಕಷ್ಟ. ಧರ್ಮ ವಿಜ್ಞಾನಗಳು ಪೂರಕವಾಗಿ ಬೆಳೆದರೆ ಜಗತ್ತು ಕಲ್ಯಾಣವಾಗಲು ಸಾಧ್ಯ. ಶಾಂತಿ ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ. ದೇವರು ಧರ್ಮ ಮತ್ತು ಗುರುವಿನಲ್ಲಿ ಅಚಲ ನಂಬಿಕೆ ಇಟ್ಟು ಬಾಳಬೇಕಾಗುತ್ತದೆ. ನೆಲ, ಜಲ, ಗಾಳಿ, ಬೆಳಕು ಬಯಲು ಕೊಟ್ಟ ಭಗವಂತನನ್ನು ದಿನಕ್ಕೆ ಒಮ್ಮಯಾದರೂ ಸ್ಮರಿಸದೇ ಹೋದರೆ ಜೀವನ ವ್ಯರ್ಥ ಎಂದು ಹೇಳಿ‌ದರು.

ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ರಂಭಾಪುರಿಶ್ರೀ ವರ್ಷದ 12 ತಿಂಗಳ ಕಾಲ ನಿರಂತರ ಧರ್ಮ ಜಾಗೃತಿ, ಜನ ಜಾಗೃತಿ ಮಾಡುತ್ತ ಭಕ್ತರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ. ದುಷ್ಟ ಚಟಗಳಿಂದ ದೂರವಾಗುವ ಸಂಕಲ್ಪ ಎಲ್ಲರದಾಗಬೇಕು. ರಾಜ್ಯದ ಎಲ್ಲ ಗ್ರಾಮೀಣ ರಸ್ತೆಗಳು ಮೊದಲಿಗಿಂತ ಸುಧಾರಣೆಯಾಗಿದ್ದು, ಇನ್ನೂ ಹೆಚ್ಚಿನ ಸೌಕರ್ಯ ಕಲ್ಪಿಸುವ ಅಗತ್ಯವಿದೆ’ ಎಂದು ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ‘ನಾಡಿನ ಜನ ಸುಭಿಕ್ಷೆಯಿಂದ ಬಾಳಬೇಕಾಗಿದೆ. ಮನುಷ್ಯ ಮನುಷ್ಯನಾಗಿ ಬದುಕುತ್ತಿಲ್ಲ. ಮೃಗೀಯ ಗುಣ ಹೆಚ್ಚುತ್ತಿದೆ. ಮೌಲ್ಯಗಳು ಬೆಳೆಸುವಂಥ ಕಾರ್ಯ ಹೆಚ್ಚಾಗಬೇಕು. ಟನ್‍ಗಟ್ಟಲೇ ಗಾಂಜಾ, ಅಫೀಮು ದೊರೆಯುತ್ತಿದ್ದು, ಮಾದಕ ದ್ರವ್ಯದ ಹಾವಳಿ ತಡೆಗಟ್ಟಬೇಕಾಗಿದೆ.  ಮತಾಂತರದ ಪಿಡುಗನ್ನು ತಡೆಗಟ್ಟುವ ಅವಶ್ಯಕತೆಯಿದೆ’ ಎಂದು ಹೇಳಿದರು.

ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಡೆ ವಿರಕ್ತಮಠದ ಮಹಾಂತ ಸ್ವಾಮೀಜಿ ಮಾತನಾಡಿದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎನ್.ಜೆ. ರಾಜಶೇಖರ್ (ಸುಭಾಷ), ಮಾಜಿ ಶಾಸಕ ಎಚ್.ಸಿ. ಚಂದ್ರಶೇಖರಪ್ಪ, ಮಳಲಿ ನಾಗಭೂಷಣ ಶಿವಾಚಾರ್ಯರು ಪಾಲ್ಗೊಂಡಿದ್ದರು.

ಕಡೇನಂದಿಹಳ್ಳಿ-ದುಗ್ಲಿ ಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಶಿವಮೊಗ್ಗದ ಜಿ.ಜಿ. ರಕ್ಷಿತಾ ಭರತನಾಟ್ಯ ಪ್ರದರ್ಶಿಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ಪ್ರಶಾಂತಸ್ವಾಮಿ ಶಾಸ್ತ್ರಿ ಸ್ವಾಗತಿಸಿದರು. ಗದುಗಿನ ಗಾನಭೂಷಣ ವೀರೇಶ ಕಿತ್ತೂರ ಸಂಗೀತ ಸೌರಭ ಕಾರ್ಯಕ್ರಮ ನಡೆಸಿಕೊಟ್ಟರು. ರೇವಣಸಿದ್ಧಪ್ಪ ಪೂಜಾರ ತಬಲಾ ಸಾಥ್‌ ನೀಡಿದರು.

ಶಾಂತಾ ಆನಂದ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು