ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ನೆಮ್ಮದಿಗಾಗಿ ನೀರಾವರಿಗೆ ಆದ್ಯತೆ

ಮೂಗುರು ಏತ ನೀರಾವರಿ ಯೋಜನೆ ಉದ್ಘಾಟನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
Last Updated 1 ಮಾರ್ಚ್ 2021, 5:12 IST
ಅಕ್ಷರ ಗಾತ್ರ

ಆನವಟ್ಟಿ: ‘ರೈತ ಕೃಷಿ ಮಾಡಿ, ನೆಮ್ಮದಿಯ ಬದುಕು ಸಾಗಿಸುವಂತೆ ಆಗಬೇಕು ಎಂಬ ಸಂಕಲ್ಪದೊಂದಿಗೆ ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಭಾನುವಾರ ಆನವಟ್ಟಿಯ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಮೂಗುರು ಏತ ನೀರಾವರಿ ಯೋಜನೆಯ ಲೋಕಾರ್ಪಣೆ, ವಿವಿಧ ಇಲಾಖೆಗಳ ಕಾಮಗಾರಿಗಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸಿ ಅವರು ಮಾತನಾಡಿದರು.

‘30 ವರ್ಷಗಳ ಬಹು ಬೇಡಿಕೆಯ ವರದಾ ನದಿಯಿಂದ ₹ 105 ಕೋಟಿ ವೆಚ್ಚದಲ್ಲಿ ನೀರು ಎತ್ತುವ ಮೂಗುರು ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಈ ಯೋಜನೆಯಿಂದ 31 ಕೆರೆಗಳಿಗೆ ನೀರು ತುಂಬಲಾಗುತ್ತದೆ. ಬರಗಾಲ ಹಾಗೂ ಬೇಸಿಗೆ ಕಾಲದಲ್ಲಿ ಜನ, ಜಾನುವಾರುಗಳಿಗೆ ಅನುಕೂಲವಾಗಲಿದೆ’ ಎಂದರು.

‘ಕೋವಿಡ್ ಸಂಕಷ್ಟದ ಏಳು ತಿಂಗಳು ತೆರಿಗೆ ಸಂಗ್ರಹ ಸ್ಥಗಿತವಾಗಿತ್ತು. ಬೇರೆ-ಬೇರೆ ರೂಪದಲ್ಲಿ ಹಣ ಸಂಗ್ರಹ ಹಾಗೂ ಸಾಲ ಪಡೆಯುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು ಬರಲಾಗಿದೆ. ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾಮಗಾರಿಗಳು ಹಿನ್ನಡೆಯಾಗಲು ಬಿಡುವುದಿಲ್ಲ’ ಎಂದರು.

‘ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ, ನಿಗದಿ ಪಡಿಸಿದ ಕಾಲಾವಧಿಯಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ. ಯೋಜನೆಗಳು ತಡವಾಗಿ ಮುಗಿಸಿದರೆ ನಿಗದಿಪಡಿಸದ ಹಣಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ. ಮೂಗುರು ಏತ ನೀರಾವರಿ ಯೋಜನೆ ವರ್ಷದೊಳಗೆ ಪೂರ್ಣಗೊಳ್ಳಲು ಕಾರಣರಾದ ಎಲ್ಲರಿಗೂ ಅಭಿನಂದನೆ’ ಎಂದು ಹೇಳಿದರು.

‘ಬರುವ ಬಜೆಟ್‍ನಲ್ಲಿ ಮಹಿಳೆಯರನ್ನು ಗಮನದಲ್ಲಿ ಇಟ್ಟುಕೊಂಡು ಉದ್ಯೋಗ ಸಿಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಿದ್ದೇವೆ’ ಎಂದ ಅವರು, ‘ಬರೀ ಮಾತನಾಡುವ ಬದಲು ನಾವು ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಸಾಧನೆಗಳೇ ಮಾತನಾಡುವಂತೆ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮಾತನಾಡಿ, ‘ಸೊರಬ ಈಗ ಹಿಂದೆ ಉಳಿದ ಕ್ಷೇತ್ರವಲ್ಲ. ಬದಲಾಗಿ ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿದೆ. ಆನವಟ್ಟಿಯನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿ ದರ್ಜೆಗೆ ಏರಿಸಲಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ಸೊರಬಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ಹಿಂದೆ ಅಡಳಿತ ಮಾಡಿದ ಸರ್ಕಾರಗಳು ಯೋಜನೆ ಸಿದ್ಧಪಡಿಸಲು, ಟೆಂಡರ್ ಕರೆಯಲು ಹಾಗೂ ಯೋಜನೆ ಪೂರ್ಣ ಮಾಡಲು ಒಂದೊಂದು ಅವಧಿಯನ್ನೇ ತೆಗೆದುಕೊಳ್ಳುತ್ತಿದ್ದವು. ಆದರೆ ಯಡಿಯೂರಪ್ಪ ಸರ್ಕಾರದಲ್ಲಿ ಅವಧಿಗೂ ಮುನ್ನವೇ ಕಾಮಗಾರಿಗಳು ಪೂರ್ಣಗೊಳ್ಳುತ್ತಿವೆ’ ಎಂದು ಶ್ಲಾಘಿಸಿದರು.

‘ನರೇಂದ್ರ ಮೋದಿ ಸರ್ಕಾರದ ಬಜೆಟ್ ಉತ್ತಮವಾಗಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ’ ಎಂದ ಅವರು, ‘ಕೇಂದ್ರದಿಂದ ರೈತರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದಕ್ಕಾಗಿ ಮನೆ-ಮನೆ ಗಂಗೆ ಯೋಜನೆ ರೂಪುಗೊಳ್ಳುತ್ತಿದೆ’ ಎಂದರು.

‘₹ 234 ಕೋಟಿ ಮೊತ್ತದ ವಿವಿಧ ಇಲಾಖೆಗಳ ಯೋಜನೆಗಳು ಉದ್ಘಾಟನೆಗೊಳ್ಳುವ ಜೊತೆಗೆ ಆನವಟ್ಟಿ ಭಾಗದ ರೈತರ ಬಹು ನಿರೀಕ್ಷೆಯ ಮೂಗೂರು ಏತ ನೀರಾವರಿ ಕಾಮಗಾರಿ ಲೋಕಾರ್ಪಣೆಗೊಳ್ಳುವ ಮೂಲಕ ಈ ದಿನವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಿದೆ’ ಎಂದರು.

ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರ ತಾಲ್ಲೂಕಿಗಿಂತಲೂ ಒಂದು ಹೆಜ್ಜೆ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಸೊರಬ ತಾಲ್ಲೂಕಿಗೆ ನೀಡಿದ್ದಾರೆ. ₹ 105 ಕೋಟಿ ಹಣದಲ್ಲಿ ನಿರ್ಮಾಣದ ಮೂಗುರು ಯೋಜನೆಯೂ ಜನರು ತೆರಿಗೆ ಕಟ್ಟುವ ಹಣದಿಂದಲೇ ಆಗಿದೆ. ಬಡವರ ಬೆವರಿನಿಂದ ಪೂರ್ಣವಾದ ನೀರಾವರಿ ಯೋಜನೆಯ ಅನುಕೂಲ ರೈತರ ಬದುಕು ಹಸನಾಗಲೂ ಕಾರಣವಾಗಬೇಕು’ ಎಂದರು.

ಜಡೆ, ಚಂದ್ರಗುತ್ತಿ ಸೇರಿದಂತೆ ಅಗತ್ಯ ಇರುವ ಕಡೆ ದ್ವಿಮುಖ ರಸ್ತೆ ನಿರ್ಮಿಸುವಂತೆ, ಆನವಟ್ಟಿಯಲ್ಲಿ ಕೆಎಸ್‍ಆರ್‌ಟಿಸಿ ಬಸ್‍ ತಂಗುದಾಣ ನಿರ್ಮಾಣ, ಚಂದ್ರಗುತ್ತಿ ಗ್ರಾಮದಲ್ಲಿ ಪದವಿ ಕಾಲೇಜು ತೆರೆಯುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಮೂಗುರು ಏತ ನೀರಾವರಿ ಯೋಜನೆಯನ್ನು ಎಲ್‌ಇಡಿ ಪರದೆ ಮೇಲೆ ರಿಮೋಟ್‌ ಒತ್ತುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.

ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಪೊಲೀಸ್ ಉಪಾಧೀಕ್ಷಕ ಕಾಂತರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಅರ್ಜುನಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಕೆ.ಎಸ್. ಗುರುಮೂರ್ತಿಇದ್ದರು.

ಕುಮಾರ ಬಂಗಾರಪ್ಪ ಮುನಿಸು
ಮೂಗುರು ಏತ ನೀರಾವರಿ ಯೋಜನೆ ಪೂರ್ಣಗೊಳ್ಳುತ್ತಲೇ ಮತ್ತೆ ಮೂಲ ಬಿಜೆಪಿಗರು ಹಾಗೂ ಶಾಸಕ ಕುಮಾರ ಬಂಗಾರಪ್ಪ ನಡುವೆ ವೈಮನಸ್ಸು ಉಂಟಾಗಿದೆ. ಈಚೆಗೆ ವಿಧಾನ ಪರಿಷತ್ ಸದ್ಯಸ್ಯೆ ಭಾರತಿ ಶೆಟ್ಟಿ ಅವರನ್ನು ಕರೆಸಿಕೊಂಡು ಮೂಲ ಬಿಜೆಪಿಗರು ಮೂಗೂರು ಏತ ನೀರಾವರಿ ಸಂಬಂಧ ಸುದ್ದಿಗೋಷ್ಠಿಗಳನ್ನು ಮಾಡಿದ್ದಾರೆ. ಕುಮಾರ ಬಂಗಾರಪ್ಪ ಅವರನ್ನು ತಾಲ್ಲೂಕಿನ ಮೂಲ ಬಿಜೆಪಿಗರು ಕಡೆಗಣಿಸುತ್ತ ಬಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೂಗುರು ಏತ ನೀರಾವರಿ ಯೋಜನೆಯ ಉದ್ಘಾಟನೆಯ ಫ್ಲೆಕ್ಸ್ ಹಾಗೂ ವಿಟಿಯಲ್ಲಿ ಕುಮಾರ ಬಂಗಾರಪ್ಪ ಅವರ ಹೆಸರು ಮತ್ತು ಫೋಟೊ ಬಳಸದೇ ಇರುವುದು ಕುಮಾರ ಬಂಗಾರಪ್ಪ ಅವರು ಅಸಮಾಧಾನಗೊಳ್ಳಲು ಕಾರಣ ಎನ್ನಲಾಗಿದೆ.

ಕಾರ್ಯಕ್ರಮದ ಸ್ವಾಗತ ಕರೆಯೋಲೆ ಹಾಗೂ ವಿಟಿಯಲ್ಲಿ ತಮ್ಮ ಹೆಸರು ಹಾಗೂ ಫೋಟೊ ಇರದಿರುವ ಬಗ್ಗೆ ಕುಮಾರ ಬಂಗಾರಪ್ಪ ಅಧಿಕಾರಿಗಳನ್ನು ವಿಚಾರಿಸಿದ್ದಾರೆ. ಅವರಿಂದ ಸಮರ್ಪಕ ಉತ್ತರ ಬರದೇ ಇದ್ದಾಗ ‘ಕಾರ್ಯಕ್ರಮವನ್ನು ನೀವೇ ಮಾಡಿಕೊಳ್ಳಿ’ ಎಂದು ಕೋಪಗೊಂಡಿದ್ದರು ಎನ್ನಲಾಗಿದೆ.

ಕುಮಾರ ಬಂಗಾರಪ್ಪ ಹಾಗೂ ಅವರ ಬೆಂಬಲಿಗರು ಆನವಟ್ಟಿಯಲ್ಲಿ ನಡೆಯುವ ಕಾರ್ಯಕ್ರಮದಿಂದ ದೂರ ಉಳಿಯುವ ನಿರ್ಧಾರ ಮಾಡಿರುವುದನ್ನು ತಿಳಿದ ಸಂಸದ ಬಿ.ವೈ. ರಾಘವೇಂದ್ರ ಅವರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅವರೊಂದಿಗೆ ಶಾಸಕರ ಮನೆಗೆ ತೆರಳಿ, ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ಮನವೊಲಿಸಿದರು. ಬಳಿಕ ಶಾಸಕ ಕುಮಾರ ಬಂಗಾರಪ್ಪ ಸಂಸದ ರಾಘವೇಂದ್ರ ಜೊತೆ ಕಾರ್ಯಕ್ರಮಕ್ಕೆ ಹಾಜರಾದರು. ಹೀಗಾಗಿ 10.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ 12.30ಕ್ಕೆ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT