ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್‌: ಯಾರಿಗೂ ಬೇಡದ ಕೂಸು

ರಾಜಕೀಯ ಮೇಲಾಟಕ್ಕೆ ಬಲಿ? ಗುಣಮಟ್ಟ ಕುಸಿತ, ಗ್ರಾಹಕ ದೂರ
Last Updated 28 ನವೆಂಬರ್ 2022, 5:21 IST
ಅಕ್ಷರ ಗಾತ್ರ

ಶಿವಮೊಗ್ಗ: ಐದು ವರ್ಷಗಳಿಂದ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾದ ಇಂದಿರಾ ಕ್ಯಾಂಟೀನ್‌ಗಳು ನಗರದ ಬಡವರು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರ ಹೊಟ್ಟೆ ತುಂಬಿಸಬೇಕಿತ್ತು. ಆದರೆ, ಅನುದಾನವಿಲ್ಲದೇ ಆಳುವವರಿಗೆ ಬೇಡದ ಕೂಸಾಗಿ ಹಸಿದು ಕೂತಿವೆ.

ಹೆಸರಿಗಷ್ಟೇ ಜೀವ ಹಿಡಿದಿವೆ. ಮುಂದೆ ಹಣ ಬಿಡುಗಡೆ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ಗುತ್ತಿಗೆದಾರರು ಜೇಬಿನಿಂದ ಹಣ ಹಾಕಿ ಕ್ಯಾಂಟಿನ್ ನಡೆಸುತ್ತಿದ್ದಾರೆ.

‘ಇದರ ಫಲವಾಗಿ ಅಲ್ಲಿನ ಅನ್ನದ ರುಚಿ ಕೆಟ್ಟಿದ್ದು, ಗುಣಮಟ್ಟವೂ ಮೊದಲಿನಂತೆ ಇಲ್ಲ. ಮೆನು ಕಾರ್ಡ್ ಕೂಡ ಬದಲಾಗಿದೆ. ಸ್ವಚ್ಛತೆಯೂ ಮರೀಚಿಕೆಯಾಗಿದೆ’ ಎಂಬ ಅಳಲು ಸಾರ್ವಜನಿಕರದ್ದು.

ಸದ್ಯ ಶಿವಮೊಗ್ಗದಲ್ಲಿ ನಾಲ್ಕು, ಭದ್ರಾವತಿಯಲ್ಲಿ ಎರಡು ಹಾಗೂ ಸಾಗರದಲ್ಲಿ ಒಂದು ಇಂದಿರಾ ಕ್ಯಾಂಟಿನ್‌ಗಳಿವೆ. ಮಿಕ್ಕಂತೆ ಜಿಲ್ಲೆಯ ಉಳಿದ ತಾಲ್ಲೂಕು ಕೇಂದ್ರಗಳಲ್ಲಿ ಈ ಕ್ಯಾಂಟಿನ್‌ಗಳು ಆರಂಭವಾಗಿಲ್ಲ. ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಹಾಕಲಾಗಿದ್ದ ತಳಪಾಯಗಳು, ಪೂರ್ಣಗೊಂಡ ಕಟ್ಟಡಗಳು ಈಗ ಹಾಳು ಕೊಂಪೆಯಾಗಿವೆ. ಯೋಜನೆಯನ್ನು ಅಣಕವಾಡುತ್ತಾ ಅಸ್ತಿಪಂಜರದಂತೆ ಗೋಚರವಾಗುತ್ತಿವೆ. ಈ ಬಗ್ಗೆ ಈ ವಾರದ ‘ನಮ್ಮ ಜನ ನಮ್ಮ ಧ್ವನಿ‘ ಅಂಕಣ ಬೆಳಕು ಚೆಲ್ಲಲಿದೆ.

ಎಂಟು ತಿಂಗಳಿಂದ ಅನುದಾನ ಬಂದಿಲ್ಲ..

‘ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಶೇ 70ರಷ್ಟು ಅನುದಾನ ಪೌರಾಡಳಿತ ಇಲಾಖೆಯಿಂದ (ಸ್ಥಳೀಯ ಸಂಸ್ಥೆಗಳು) ಉಳಿದ ಶೇ 30ರಷ್ಟು ಹಣವನ್ನು ಕಾರ್ಮಿಕ ಇಲಾಖೆಯಿಂದ ಭರಿಸಲಾಗುತ್ತಿದೆ. ಆದರೆ ಎಂಟು ತಿಂಗಳಿನಿಂದ ಅನುದಾನವೇ ಬಂದಿಲ್ಲ. ಅದರೂ ಕ್ಯಾಂಟೀನ್ ನಿಲ್ಲಿಸದೇ ನಡೆಸುತ್ತಿದ್ದೇವೆ’ ಎಂದು ಶಿವಮೊಗ್ಗದಲ್ಲಿನ ಕ್ಯಾಂಟೀನ್‌ಗಳ ಗುತ್ತಿಗೆದಾರ ವಿಜಯಪುರದ ಸಿದ್ದಲಿಂಗಗೌಡ ಹೇಳುತ್ತಾರೆ.

‘ಪೌರಾಡಳಿತ ಇಲಾಖೆಯವರಾದರೂ ಈ ಹಿಂದೆ ಅನುದಾನ ಕೊಟ್ಟಿದ್ದಾರೆ. ಆದರೆ, ಕಾರ್ಮಿಕ ಇಲಾಖೆಯಿಂದ ಹಣ ಕೊಟ್ಟಿಲ್ಲ. ಈ ಹಿಂದೆ ನಾನು ಭದ್ರಾವತಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದು, ಅಲ್ಲಿನ ಗುತ್ತಿಗೆ ಅವಧಿ ಮುಗಿದಿದೆ. ಇನ್ನೂ ₹ 30 ಲಕ್ಷ ಬಾಕಿ ಬಿಡುಗಡೆ ಮಾಡಿಲ್ಲ’ ಎಂದು ಅಳಲು ಅವರು ತೋಡಿಕೊಳ್ಳುತ್ತಾರೆ.

ಬಿಡ್‌ದಾರರು ಮುಂದೆ ಬರುತ್ತಿಲ್ಲ:

ದಿನಸಿ ದರ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಸರ್ಕಾರ ನಿಗದಿಪಡಿಸಿರುವ ಬಿಡ್‌ ದರ ಇಳಿಕೆಯಾಗಿದೆ. ಈ ಮೊದಲು ದಿನಕ್ಕೆ ₹ 25 ಇತ್ತು. ಅದನ್ನು ಈಗ ₹ 17.50 ಮಾಡಲಾಗಿದೆ. ಹೀಗಾಗಿ ಕ್ಯಾಂಟೀನ್‌ ಗುತ್ತಿಗೆ ಬಿಡ್‌ ಮಾಡಲು ಮೊದಲಿನಂತೆ ಹೆಚ್ಚು ಜನ ಆಸಕ್ತಿ ವಹಿಸುತ್ತಿಲ್ಲ. ಇದು ಅಲ್ಲಿನ ಊಟದ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ ಎಂದು ಗುತ್ತಿಗೆದಾರರೊಬ್ಬರು ತಿಳಿಸಿದರು.

‘ಆರಂಭದಲ್ಲಿ ನಮಗೆ ತಿಂಗಳಿಗೆ ₹ 8,000 ವೇತನ ಕೊಡುತ್ತಿದ್ದರು. ಅದು ಈಗ ₹ 6,500ಕ್ಕೆ ಇಳಿಕೆಯಾಗಿದೆ. ನಿಯಮಾವಳಿಯಂತೆ ನಮಗೆ ₹ 12,000 ಕೊಡಬೇಕಿದೆ. ಗುತ್ತಿಗೆದಾರರು ಕೊಡುತ್ತಿಲ್ಲ.ಸರ್ಕಾರ ಅನುದಾನ ಕೊಟ್ಟಿಲ್ಲ ಎಂದು ಕೆಲಸಗಾರರು, ಭದ್ರತಾ ಸಿಬ್ಬಂದಿಯನ್ನು ಕಡಿತಗೊಳಿಸಿದ್ದಾರೆ. ತಿಂಡಿ, ಊಟಕ್ಕೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಕೆಲವು ಮಂದಿ ಬರುತ್ತಾರೆ. ರಾತ್ರಿ ಹೊತ್ತು ಯಾರೂ ಬರೊಲ್ಲ’ ಎಂದು ಶಿವಮೊಗ್ಗದ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಹೇಳುತ್ತಾರೆ.

‘ಅಡುಗೆಯ ರುಚಿ ಕೆಟ್ಟಿದೆ. ಸಾಂಬಾರ್ ತಿನ್ನುವಂತೆ ಇರುವುದಿಲ್ಲ. ಬಸ್‌ಸ್ಟ್ಯಾಂಡ್‌ಗೆ ಹತ್ತಿರ ಇರುವುದರಿಂದ ಅನಿವಾರ್ಯವಾಗಿ ಬರುತ್ತಿದ್ದೇವೆ’ ಎಂದು ಮಲವಗೊಪ್ಪ ನಿವಾಸಿ, ಪಾಲಿಟೆಕ್ನಿಕ್ ವಿದ್ಯಾರ್ಥಿ ಕೌಶಿಕ್ ಹೇಳುತ್ತಾರೆ.

‘ಕೋವಿಡ್ ನಂತರ ರಾತ್ರಿ ವೇಳೆ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ. ಅದಕ್ಕೆ ಗುಣಮಟ್ಟ ಕುಸಿತ ಕಾರಣ ಅಲ್ಲ’‌ ಎಂದು ಗುತ್ತಿಗೆದಾರ ಸಿದ್ದಲಿಂಗಗೌಡ ಹೇಳುತ್ತಾರೆ.

ಸ್ಥಳದ ಕೊರತೆ: ನಿರ್ಮಾಣವಾಗದ ಇಂದಿರಾ ಕ್ಯಾಂಟೀನ್

ಎಚ್.ಎಸ್. ರಘು

ಶಿಕಾರಿಪುರ:ಪಟ್ಟಣದಲ್ಲಿ ಸ್ಥಳದ ಕೊರತೆಯಿಂದ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿಲ್ಲ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು. ಹೊಸ ಸಂತೆ ಮೈದಾನದ ಪಕ್ಕದ ಕುರಿ ಮಾರುಕಟ್ಟೆ ಸ್ಥಳದಲ್ಲಿ ಹಾಗೂ ಮೀನು ಮಾರುಕಟ್ಟೆ ಸಮೀಪ ಕ್ಯಾಂಟೀನ್ ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿತ್ತು.

ಕುರಿ ಮಾರುಕಟ್ಟೆ ಸ್ಥಳದಲ್ಲಿ ಕ್ಯಾಂಟೀನ್ ನಿರ್ಮಿಸುವ ಕುರಿತು ಪುರಸಭೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಕೂಡ ಸಲ್ಲಿಸಿತ್ತು. ಆದರೆ ಆಗಿಲ್ಲ.

ಕಾಂಗ್ರೆಸ್ ಸದಸ್ಯರು ಕುರಿ ಮಾರುಕಟ್ಟೆ ಹಾಗೂ ಮೀನು ಮಾರುಕಟ್ಟೆ ಸಮೀಪದ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದರು. ಜನರಿಗೆ ಕ್ಯಾಂಟೀನ್ ಸದ್ಬಳಕೆ ಮಾಡಿಕೊಳ್ಳಲು ಬಸ್ ನಿಲ್ದಾಣ ಸಮೀಪ ನಿರ್ಮಿಸಬೇಕು ಎಂದು ಪಟ್ಟು ಹಿಡಿದರು. ಆದರೆ ನಂತರದ ದಿನಗಳಲ್ಲಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸುವ ಬಗ್ಗೆ ಚರ್ಚೆ ನಡೆಯಲೇ ಇಲ್ಲ.

ಪ್ರಚಾರದ ಕೊರತೆಯಿಂದ ಬಳಲುತ್ತಿರುವ ಕ್ಯಾಂಟೀನ್

ಎಂ.ರಾಘವೇಂದ್ರ

ಸಾಗರ: ನಗರದ ಜೋಗ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಅತಿ ಕಡಿಮೆ ದರದಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಮತ್ತು ರಾತ್ರಿಯ ಊಟ ದೊರಕುತ್ತಿದೆ. ಆದರೆ ಪ್ರಚಾರದ ಕೊರತೆಯಿಂದ ಅದು ಬಳಲುತ್ತಿದೆ.

ಕ್ಯಾಂಟಿನ್ ಚಾಲ್ತಿಯಲ್ಲಿದೆ ಎಂಬುದೇ ಹೆಚ್ಚಿನವರಿಗೆ ತಿಳಿಯುತ್ತಿಲ್ಲ.

2021ರ ಜೂನ್‌ನಲ್ಲಿ ಕೋವಿಡ್ ಸಂದರ್ಭದಲ್ಲಿ ಉದ್ಘಾಟನೆಯಾದ ಇಲ್ಲಿನ ಇಂದಿರಾ ಕ್ಯಾಂಟೀನ್ ಕೆಲ ಸಮಯದ ನಂತರ ಬಂದ್ ಆಗಿತ್ತು. ಜನವರಿಯಿಂದ ಮತ್ತೆ ಆರಂಭವಾಗಿದೆ.

ಬೆಳಿಗ್ಗೆ ಮೂರು ಇಡ್ಲಿಗೆ ₹ 5 ದರ ನಿಗದಿಪಡಿಸಲಾಗಿದೆ. ಪಲಾವ್ ₹ 5ಕ್ಕೆ ದೊರಕುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ ₹ 10ಕ್ಕೆ ಅನ್ನ, ಸಾಂಬಾರ್ ಉಪ್ಪಿನಕಾಯಿ ನೀಡಲಾಗುತ್ತಿದೆ.

‘ಬೆಳಿಗ್ಗೆ ಮತ್ತು ಮಧ್ಯಾಹ್ನ ತಲಾ 500 ಜನರು ಕ್ಯಾಂಟೀನ್‌ನ ಪ್ರಯೋಜನ ಪಡೆಯುತ್ತಿದ್ದಾರೆ. ರಾತ್ರಿ ವೇಳೆ ಮಾತ್ರ 50 ಜನರಷ್ಟೇ ಊಟಕ್ಕೆ ಬರುತ್ತಾರೆ’ ಎನ್ನುತ್ತಾರೆ ಕ್ಯಾಂಟೀನ್‌ ನಿರ್ವಾಹಕ ಶ್ರೀನಿವಾಸ್ ಶೆಟ್ಟಿ.

ಸಕಾಲದಲ್ಲಿ ಸರ್ಕಾರದಿಂದ ಇಂದಿರಾ ಕ್ಯಾಂಟೀನ್ ಗುತ್ತಿಗೆ ಹಿಡಿದವರಿಗೆ ಹಣ ಬಿಡುಗಡೆಯಾಗದಿರುವುದು ಅದನ್ನು ನಡೆಸಲು ಹೆಚ್ಚಿನವರು ಆಸಕ್ತಿ ತೋರುತ್ತಿಲ್ಲ.

ಹೆಚ್ಚಾಗಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಕ್ಯಾಂಟೀನ್‌ನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಸ್ಥಳೀಯ ಆಡಳಿತ ಒಂದಿಷ್ಟು ಆಸಕ್ತಿ ತೋರಿಸಿ ವ್ಯಾಪಕ ಪ್ರಚಾರ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಿದರೆ ಮತ್ತಷ್ಟು ಜನರಿಗೆ ಇದರ ಪ್ರಯೋಜನ ಸಿಗಲಿದೆ ಎಂಬುದು ಸ್ಥಳೀಯ ಆಶಯ.

ಕ್ಯಾಂಟೀನ್‌ ಕನಸು ಭಗ್ನ

ನಿರಂಜನ ವಿ.
ತೀರ್ಥಹಳ್ಳಿ:
ಕಡಿಮೆ ದರದಲ್ಲಿ ಆಹಾರ ಪೂರೈಸುವ ಇಂದಿರಾ ಕ್ಯಾಂಟೀನ್‌ ತಾಲ್ಲೂಕಿಗೆ ಮಂಜೂರಾಗಿತ್ತು. 2018ರ ಮೇ ತಿಂಗಳಿನಲ್ಲಿ ಕ್ಯಾಂಟೀನ್‌ ತೆರೆಯುವ ಸಂಬಂಧ ಕಾರ್ಯಕ್ರಮ ನೆರವೇರಿತ್ತು. ನಂತರದ ರಾಜಕೀಯ ವಿದ್ಯಮಾನದಿಂದ ನನೆಗುದಿಗೆ ಬಿದ್ದಿದೆ.

ಆಗಿನ ಶಾಸಕ ಕಿಮ್ಮನೆ ರತ್ನಾಕರ ಅವರ ವಿಶೇಷ ಪ್ರಯತ್ನದಿಂದ ಪಟ್ಟಣದ ವಿವಿಧ ಭಾಗಗಳಲ್ಲಿ ಕ್ಯಾಂಟೀನ್‌ ತೆರೆಯಲು ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆದಿದೆ. ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆ ಪಕ್ಕದ ಜಿಲ್ಲಾ ಪಂಚಾಯಿತಿ ಕಚೇರಿಯ ಹಿಂಭಾಗದಲ್ಲಿ ಪಟ್ಟಣ ಪಂಚಾಯಿತಿ ಜಾಗ ಗುರುತಿಸಿತ್ತು. ಒಂದು ವೇಳೆ ಕ್ಯಾಂಟೀನ್‌ ತೆರೆದಿದ್ದರೆ ಆಸ್ಪತ್ರೆ ಪ್ರಾಂಗಣದಲ್ಲಿ ಅಗ್ಗದ ಆಹಾರ ಲಭ್ಯವಾಗುತ್ತಿತ್ತು. ಆದರೆ ಆಗಲಿಲ್ಲ.

ಕೊರೊನಾ ಸಂದರ್ಭದಲ್ಲಿ ಹೋಟೆಲ್‌ ಮಳಿಗೆಗಳು ಬಹುಪಾಲು ಮುಚ್ಚಿದ್ದವು. ಇದರಿಂದಾಗಿ ಆಹಾರದ ಸಮಸ್ಯೆ ತಲೆದೋರಿತ್ತು. ದಾನಿಗಳ ನೆರವಿನಿಂದ ಕಿಮ್ಮನೆ ರತ್ನಾಕರ ಅವರ ನೇತೃತ್ವದಲ್ಲಿ 4 ತಿಂಗಳು ಇಂದಿರಾ ಕ್ಯಾಂಟೀನ್‌ ಹೆಸರಿನಲ್ಲಿ ಆಸ್ಪತ್ರೆ ಸಮೀಪ ಖಾಸಗಿಯಾಗಿ ಕ್ಯಾಂಟೀನ್‌ ತೆರೆದು ಉಚಿತ ಸೇವೆ ನೀಡಿದ್ದರು. ಇದು ಕೊರೊನಾ ಸಂದರ್ಭದಲ್ಲಿ ಭಾರಿ ಜನಪ್ರಿಯತೆ ಪಡೆದಿತ್ತು.

ಖಾಸಗಿ ಹೋಟೆಲ್‌ ಮಾಲೀಕರ ಒತ್ತಡದಿಂದಾಗಿ ಇಂದಿರಾ ಕ್ಯಾಂಟೀನ್‌ ತೆರೆಯುವುದು ಕಷ್ಟವಾಯಿತು. ಈಗಲಾದರೂ ತೆರೆಯಲಿ ಎಂಬುದು ಜನರ ಆಗ್ರಹ.

ತಳಪಾಯಕ್ಕೆ ಸೀಮಿತಗೊಂಡ ಇಂದಿರಾ ಕ್ಯಾಂಟೀನ್

ರಾಘವೇಂದ್ರ ಟಿ.

ಸೊರಬ: ಕಾರ್ಮಿಕರು, ವಲಸಿಗರು, ವಿದ್ಯಾರ್ಥಿಗಳು ಹಾಗೂ ಕಡು ಬಡವರಿಗಾಗಿ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ ತಾಲ್ಲೂಕಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿದೆ.

2019ರಲ್ಲಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿಯೇ₹ 3 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಅಡಿಪಾಯ ಹಾಕಲಾಗಿತ್ತು.ಬಸ್ ನಿಲ್ದಾಣ ಮಾಡಿದ್ದ ಆವರಣದಲ್ಲಿಯೇ ಕ್ಯಾಂಟೀನ್ ಸ್ಥಾಪನೆಗೆ ಸಿದ್ಧತೆ ನಡೆದಿತ್ತು. ಆದರೆ ಆರಂಭದ ಉತ್ಸಾಹ ತಳಪಾಯ ಹಾಕುವುದಕ್ಕೆ ಮಾತ್ರ ಸೀಮಿತವಾಗಿದೆ.

ವ್ಯವಸ್ಥಿತವಾಗಿ ನಿರ್ಮಿಸಿದ್ದ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ನಿರ್ಮಿಸಲು ಗುಂಡಿ ತೆಗೆದು ನಿಲ್ದಾಣದ ಅಂದವನ್ನು ಹಾಳು ಮಾಡಿದ್ದಲ್ಲದೇ ಹೊಸ ಕಾಮಗಾರಿಯನ್ನೂ ಪೂರ್ಣಗೊಳಿಸಲಿಲ್ಲ. ಸಾರ್ವಜನಿಕರ
ಹಣವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ಸ್ಥಳೀಯರ ಆಕ್ರೋಶ.

ಇದರಿಂದ, ನಿತ್ಯ ತಾಲ್ಲೂಕು ಕೇಂದ್ರದಿಂದ 40 ಕಿ.ಮೀ. ದೂರದಿಂದ ದಾಖಲೆಪತ್ರ ಪಡೆಯಲು ನಗರಕ್ಕೆ ಬರುವ ರೈತರಿಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಕನಿಷ್ಠ ಹಣ ನೀಡಿ ತಿಂಡಿ, ಊಟ ಮಾಡುವ ಭಾಗ್ಯ ಸಿಗಲಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಸರಿಯಾಗಿಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಬಸ್ ತಪ್ಪಿಸಿಕೊಂಡ ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಹಾಗೂ ಬಡವರಿಗೆ ಇಂದಿರಾ ಕ್ಯಾಂಟೀನ್‍ನಲ್ಲಿ ಊಟ ಮಾಡುವ ಅವಕಾಶವೂ ಇಲ್ಲದಂತಾಗಿದೆ.

ಇಂದಿರಾ ಕ್ಯಾಂಟಿನ್‌ ಗುಣಮಟ್ಟ, ಸಿಬ್ಬಂದಿ ನಿರ್ವಹಣೆ ಸೇರಿದಂತೆ ಬೇರೆ ಬೇರೆ ವಿಚಾರಗಳಲ್ಲಿ ಏನಾದರೂ ಲೋಪಗಳಿವೆಯೇ ಎಂಬುದನ್ನು ಪರಿಶೀಲಿಸಲು ಪಾಲಿಕೆಯ ಆಹಾರ ನಿರೀಕ್ಷಕರ ತಂಡಕ್ಕೆ ಸೂಚಿಸುವೆ.

–ಮಾಯಣ್ಣಗೌಡ, ಆಯುಕ್ತ, ಶಿವಮೊಗ್ಗ ಮಹಾನಗರ ಪಾಲಿಕೆ

ಇಂದಿರಾ ಕ್ಯಾಂಟೀನ್ ನಿರ್ಮಿಸಲು ಪುರಸಭೆ ಅಧಿಕಾರಿಗಳು ಗುರುತಿಸಿದ ಸ್ಥಳ ಬಸ್ ನಿಲ್ದಾಣಕ್ಕೆ ದೂರವಾಗಿತ್ತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣ ಸಮೀಪವಿರುವ ಹಳೇ ಸಂತೆ ಮೈದಾನದಲ್ಲಿ ಕ್ಯಾಂಟೀನ್ ನಿರ್ಮಿಸಬೇಕು ಎಂದು ಮನವಿ ಮಾಡಿದ್ದೆವು. ಆದರೆ ಕ್ಯಾಂಟೀನ್ ನಿರ್ಮಾಣವಾಗಲಿಲ್ಲ.

–ಮಧು,ಪುರಸಭೆ ಮಾಜಿ ಸದಸ್ಯ, ಶಿಕಾರಿಪುರ

ಸ್ಥಳದ ಕೊರತೆಯಿಂದ ಇಂದಿರಾ ಕ್ಯಾಂಟೀನ್ ನಿರ್ಮಾಣವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಕ್ಯಾಂಟೀನ್ ನಿರ್ಮಾಣದ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
–ಭರತ್,ಮುಖ್ಯಾಧಿಕಾರಿ ಪುರಸಭೆ, ಶಿಕಾರಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT