ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಕೈಗಾರಿಕೆಗಳ ಸ್ಥಾಪನೆಗೆ ಶಿಕಾರಿಪುರ ಜನರ ನಿರೀಕ್ಷೆ

ನಿರುದ್ಯೋಗಿ ಯುವಕ, ಯುವತಿಯರ ವಲಸೆ ತಡೆಗಟ್ಟಲು ಬೇಕು ಅಗತ್ಯ ಕಾರ್ಯಕ್ರಮ
Last Updated 22 ಫೆಬ್ರುವರಿ 2022, 5:33 IST
ಅಕ್ಷರ ಗಾತ್ರ

ಶಿಕಾರಿಪುರ: ತಾಲ್ಲೂಕಿನಲ್ಲಿ ನಿರುದ್ಯೋಗಿ ಯುವಕ–ಯುವತಿಯರಿಗೆ ಕೆಲಸ ನೀಡಲು ಕೈಗಾರಿಕೆಗಳನ್ನು ಆರಂಭಿಸಲು ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಅವಕಾಶ ದೊರಕೀತೆ ಎಂಬ ನಿರೀಕ್ಷೆಯನ್ನು ಇಲ್ಲಿನ ಯುವ ಸಮುದಾಯ ಹೊಂದಿದೆ.

ಬಿ.ಎಸ್‌. ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗುವ ಮೊದಲು ತಾಲ್ಲೂಕಿನಲ್ಲಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಅನುದಾನ ದೊರೆಯುವುದೇ ಎಂಬ ನಿರೀಕ್ಷೆ ಇತ್ತು. ನೀರಾವರಿ ಯೋಜನೆ ಅನುದಾನಕ್ಕಾಗಿ ಎಲ್ಲಾ ಪಕ್ಷಗಳು ಪ್ರತಿಭಟನೆ ನಡೆಸಿ ಅಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಸಮ್ಮಿಶ್ರ ಸರ್ಕಾರ ಡಿಪಿಆರ್ ತಯಾರಿಸಲು ಅನುದಾನ ಒದಗಿಸಿತ್ತು.

2019 ಜು.26ರಂದು ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತಾಲ್ಲೂಕಿನ ಹೊಸೂರು,ಉಡುಗಣಿ, ತಾಳಗುಂದ, ಅಂಜನಾಪುರ ಹಾಗೂ ಕಸಬಾ ಐದು ಹೋಬಳಿಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಸುಮಾರು₹ 1,350 ಕೋಟಿ ಅನುದಾನ ನೀಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ನಾಲ್ಕು ಹೋಬಳಿಗಳ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಕಸಬಾ ಹೋಬಳಿ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ.

ಪ್ರಸ್ತುತ ತಾಲ್ಲೂಕಿನಲ್ಲಿ ನಿರುದ್ಯೋಗ ಯುವಕ ಯುವತಿಯರ ಸಂಖ್ಯೆ ಹೆಚ್ಚಾಗಿದ್ದು, ಉದ್ಯೋಗ ಅರಸಿ ಬೆಂಗಳೂರು ಸೇರಿ ವಿವಿಧ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ವಲಸೆ ತಪ್ಪಿಸಲು ಹೊಸ ಕೈಗಾರಿಕೆಗಳನ್ನು ಆರಂಭಿಸಲು ಸರ್ಕಾರ ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು ಎಂಬ ನಿರೀಕ್ಷೆಯನ್ನು ಯುವ ಸಮುದಾಯ ಹೊಂದಿದೆ.

ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಡ ಕೈಗಾರಿಕಾ ಪ್ರದೇಶದಲ್ಲಿ ಪಶು ಆಹಾರ ತಯಾರಿಕಾ ಘಟಕ ಆರಂಭಿಸಲಾಗಿದ್ದು, ತಾಲ್ಲೂಕಿನ ಕೆಲವು ನಿರುದ್ಯೋಗಿ ಯುವಕ–ಯುವತಿಯರಿಗೆ ಉದ್ಯೋಗ ದೊರೆತಿದೆ. ಸಂಡ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆ ಆರಂಭಿಸಲು ಅಗತ್ಯ ಭೂಮಿ ಇದ್ದು, ಈ ಪ್ರದೇಶದಲ್ಲಿ ಹಾಗೂ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಬಜೆಟ್‌ನಲ್ಲಿ ಅವಕಾಶ ನೀಡಿದರೆ ಯುವಕ, ಯುವತಿಯರಿಗೆ ಉದ್ಯೋಗ ದೊರೆಯುತ್ತದೆ. ಬೆಂಗಳೂರು ಸೇರಿ ವಿವಿಧ ನಗರಗಳಿಗೆ ವಲಸೆ ಹೋಗಿದ್ದವರು ಕೊರೊನಾ ಕಾರಣ ತಾಲ್ಲೂಕಿಗೆ ಆಗಮಿಸಿದ್ದು, ಉದ್ಯೋಗ ಹುಡುಕುವ ಕಾಯಕದಲ್ಲಿ ನಿರತರಾಗಿದ್ದಾರೆ.

ತಾಲ್ಲೂಕು ಕೃಷಿ ಕ್ಷೇತ್ರವಾದ್ದರಿಂದ ಕೃಷಿಗೆ ಪೂರಕವಾದ ಕಾಲೇಜುಗಳು ತಾಲ್ಲೂಕಿನಲ್ಲಿ ಇಲ್ಲ. ಕೃಷಿ ಕ್ಷೇತ್ರಕ್ಕೆ ಪೂರಕವಾದ ಕೋರ್ಸ್‌ಗಳನ್ನು ತಾಲ್ಲೂಕಿನಲ್ಲಿ ಸರ್ಕಾರ ಆರಂಭಿಸಬೇಕು ಎನ್ನುತ್ತಾರೆ ಕೃಷಿಕ ಕುಮಾರ್.

**

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಜಿಲ್ಲಾ ಕೇಂದ್ರದ ರೀತಿ ಶಿಕಾರಿಪುರ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜಿಲ್ಲಾ ಕೇಂದ್ರವಾಗಿ ಘೋಷಿಸಲು ಪ್ರಸ್ತಾವ ಸಲ್ಲಿಸಿಲ್ಲ.
-ಬಿ.ವೈ. ರಾಘವೇಂದ್ರ, ಸಂಸದ

ಘೋಷಣೆಯಾಗದ ಜಿಲ್ಲಾ ಕೇಂದ್ರ
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದ ಮಟ್ಟದಲ್ಲಿ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದವು. ಶಿಕಾರಿಪುರ ತಾಲ್ಲೂಕನ್ನು ಜಿಲ್ಲೆಯಾಗಿ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ಜನರಲ್ಲಿತ್ತು. ಆದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಶಿಕಾರಿಪುರ ಜಿಲ್ಲೆಯಾಗುವ ನಿರೀಕ್ಷೆ ಹುಸಿಯಾಯಿತು.

ಉದ್ಯೋಗಾವಕಾಶ ಕಲ್ಪಿಸಲಿ
ತಾಲ್ಲೂಕಿನಲ್ಲಿರುವ ವಿದ್ಯಾವಂತ ಯುವಕ, ಯುವತಿಯರು ಉದ್ಯೋಗ ಅರಸಿ ಬೆಂಗಳೂರು ಸೇರಿ ವಿವಿಧ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಹಾಗೂ ತಾಲ್ಲೂಕಿನಲ್ಲಿರುವ ಯುವಕ, ಯುವತಿಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ಬಜೆಟ್‌ನಲ್ಲಿ ಅನುಮೋದನೆ ನೀಡಬೇಕು.
ಉಮೇಶ್, ಸಮಾಜ ಸೇವಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT