ಶುಕ್ರವಾರ, ಮೇ 27, 2022
21 °C

ಸಾಗರ: ಕನ್ನಡಧ್ವಜ ಸುಟ್ಟವರನ್ನು ಬಂಧಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜ ಸುಟ್ಟವರ ವಿರುದ್ಧ ಕಟ್ಟುನಿಟ್ಟಿನ ಕಾನೂನುಕ್ರಮ ಜರುಗಿಸಬೇಕು ಮತ್ತು ಕನ್ನಡಪರ ಹೋರಾಟಗಾರ ಸಂಪತ್ ದೇಸಾಯಿ ವಿರುದ್ಧ ಹಾಕಿರುವ ಕೇಸನ್ನು ಹಿಂದಕ್ಕೆ ಪಡೆದು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ವೇದಿಕೆ ತಾಲ್ಲೂಕು ಅಧ್ಯಕ್ಷ ವಿ.ಕೆ. ವಿಜಯ ಕುಮಾರ್ ಮಾತನಾಡಿ, ‘ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಹಾವಳಿ ಮಿತಿಮೀರುತ್ತಿದೆ. ಕನ್ನಡಿಗರ ಆತ್ಮವಿಶ್ವಾಸಕ್ಕೆ ಧಕ್ಕೆ ತರುವ ಕೆಲಸವನ್ನು ಪದೇಪದೇ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಕುವ ಮೂಲಕ ನೀಚತನ ಮೆರೆದಿದೆ’ ಎಂದು ಆರೋಪಿಸಿದರು.

‘ಕನ್ನಡಪರ ಹೋರಾಟಗಾರ ಸಂಪತ್ ಕುಮಾರ್ ಮತ್ತಿರರರ ಮೇಲೆ ಕೊಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿರುವ ಪ್ರಕರಣವನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತೇನೆ. ಸಂಪತ್ ಕುಮಾರ್ ಮತ್ತಿರರ ಮೇಲೆ ಹೂಡಿರುವ ಎಲ್ಲ ಪ್ರಕರಣಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಕನ್ನಡ ಧ್ವಜ ಸುಟ್ಟಿರುವ ದುಷ್ಕರ್ಮಿಗಳ ವಿರುದ್ದ ಕಟ್ಟುನಿಟ್ಟಿನ ಕಾನೂನುಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ವೇದಿಕೆಯ ಗೌರವಾಧ್ಯಕ್ಷ ಪುರುಷೋತ್ತಮ್ ಮಾತನಾಡಿ, ‘ಕನ್ನಡ ಧ್ವಜ ಸುಟ್ಟಿರುವ ಎಂಇಎಸ್ ಪುಂಡರ ಕೃತ್ಯವನ್ನು ಸಮಸ್ತ ಕನ್ನಡಿಗರೂ ಖಂಡಿಸಬೇಕು. ಕನ್ನಡ ನಾಡುನುಡಿ, ಧ್ವಜ ಸೇರಿ ಯಾವುದರ ಅಸ್ತಿತ್ವಕ್ಕೂ ಧಕ್ಕೆ ಆಗಬಾರದು. ಅಂತಹ ಘಟನೆ ನಡೆದಾಗ ಸರ್ಕಾರ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ಬೆಳಗಾವಿಯಲ್ಲಿ ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡುವ ಕೆಲಸವನ್ನು ಎಂಇಎಸ್ ಮಾಡುತ್ತಿದೆ. ಸರ್ಕಾರ ಅಂತಹವರ ವಿರುದ್ದ ಅಗತ್ಯ ಕಾನೂನುಕ್ರಮ ಜರುಗಿಸಬೇಕು. ಸರ್ಕಾರದ ಕನ್ನಡಪರ ನಿಲುವಿಗೆ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ನೀಡುತ್ತವೆ’ ಎಂದು ಹೇಳಿದರು.

ವೇದಿಕೆಯ ನಗರ ಅಧ್ಯಕ್ಷ ರಾಜು ಬಿ. ಮಡಿವಾಳ್, ಪತ್ರಕರ್ತ ನಾಗರಾಜ್, ಲಿಂಗರಾಜ್ ಆರೋಡಿ ಮಾತನಾಡಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಸಾಗರ್, ಪ್ರಮುಖರಾದ ಅನಂತ ಹೆಗಡೆ, ಸೌಭಾಗ್ಯ, ಆಶಾ ನಾಗರಾಜ್, ರೇಖಾ, ನಾಗರತ್ನಮ್ಮ, ಅಶೋಕ್ ಬೋಳುಗುಡ್ಡೆ, ಆಟೊ ದಿನೇಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು