ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

International Yoga Day 2021: ‘ಯೋಗ’ದಲ್ಲಿ ಅರಳುತ್ತಿರುವ ಗ್ರಾಮೀಣ ಪ್ರತಿಭೆ

Last Updated 21 ಜೂನ್ 2021, 5:04 IST
ಅಕ್ಷರ ಗಾತ್ರ

ತ್ಯಾಗರ್ತಿ: ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳಿಗೆ ಯೋಗ ಕಲಿಕೆಯಲ್ಲಿ ಶ್ರದ್ಧೆ, ಶ್ರಮ ಹಾಗೂ ಪೋಷಕರ ಸಹಕಾರ, ಪ್ರೋತ್ಸಾಹ ದೊರೆತರೆ ಉತ್ತಮ ಯೋಗಪಟುವಾಗಿ ಹೊರಹೊಮ್ಮಲು ಸಾಧ್ಯ ಎಂಬುದಕ್ಕೆ ಕಾನುಗೋಡು ಗ್ರಾಮದ ಚಂದನ್ ಕೆ.ಆರ್. ಸಾಕ್ಷಿಯಾಗಿದ್ದಾರೆ.

ಸಾಗರ ತಾಲ್ಲೂಕಿನ ಕಾನುಗೋಡು ಗ್ರಾಮದ ವಕೀಲ ವೃತ್ತಿ ನಡೆಸುತ್ತಿರುವ ರಾಘವೇಂದ್ರ ಕೆ.ಎಸ್. ಹಾಗೂ ವಿಜಯಲಕ್ಷ್ಮಿ ಎ.ಆರ್. ದಂಪತಿಯ ಪುತ್ರ ಚಂದನ್ ಚಿಕ್ಕ ವಯಸ್ಸಿನಲ್ಲಿಯೇ ಶ್ರೀಧರಮೂರ್ತಿ ಕಾನುಗೋಡು ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಿ ತಾಲ್ಲೂಕು, ಜಿಲ್ಲೆ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಉಡುಪಿಯ ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್ ಬಂಟಕಲ್ ಕಾಲೇಜಿನಲ್ಲಿ ಎಂಜಿನಿಯರ್ ವ್ಯಾಸಂಗ ಮಾಡುತ್ತಿರುವ ಚಂದನ್‌ ಅಲ್ಲಿಯೂ ಯೋಗಾಭ್ಯಾಸ ಮುಂದುವರಿಸಿ ಕಾಲೇಜಿನ ಹಲವಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.

2015–16ರಲ್ಲಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಸರ್ಕಾರದಿಂದ ಆಯೋಜಿಸಿದ್ದ ಯೋಗ ಸ್ಪರ್ಧೆಯಲ್ಲಿ ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟ ಮತ್ತು ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 2016–17ರಲ್ಲಿ ಸಾಗರದಲ್ಲಿ ನಡೆದ ತಾಲ್ಲೂಕು ಮಟ್ಟದ ಸ್ಪರ್ಧೆ, ತಾಳಗುಪ್ಪದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ ನಡೆದ ವಿಭಾಗಮಟ್ಟದ ಸ್ಪರ್ಧೆ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.

ಪದವಿಪೂರ್ವ ವ್ಯಾಸಂಗ ನಡೆಸುತ್ತಿರುವಾಗ ಶಿವಮೊಗ್ಗದಲ್ಲಿ ನಡೆದ ಜಿಲ್ಲಾಮಟ್ಟ, ರಾಮನಗರದಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.

ಉಡುಪಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸುವ ಯೋಗ ಸ್ಪರ್ಧೆ, ಸಾಗರದ ಗುರುಕುಲ ವಿದ್ಯಾ ಕೇಂದ್ರ, ಮೈಸೂರಿನ ವಿಶ್ವ ಸಂಸ್ಕೃತಿ ಯೋಗ ಫೌಂಡೇಶನ್, ಹಿಮಾಲಯ ಫೌಂಡೇಶನ್ ಮತ್ತು ಜಿಎಸ್‍ಎಸ್ ಫೌಂಡೇಶನ್‌ ಏರ್ಪಡಿಸಿದ್ದ ರಾಜ್ಯಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ಸು ಗಳಿಸಿದ್ದಾರೆ.

ಸಂಸ್ಕೃತಿ ಕುಂಭ, ಮಲೆನಾಡು ಉತ್ಸವ, ಯೋಗ ದಸರಾ, ಕನ್ನಡ ರಾಜ್ಯೋತ್ಸವ, ಯೋಗ ದಿನಾಚರಣೆಗಳಲ್ಲಿ ಸಾಗರ ತಾಲ್ಲೂಕು ಪ್ರಶಸ್ತಿ, ಶಿವಮೊಗ್ಗ ಜಿಲ್ಲಾ ಪ್ರಶಸ್ತಿ, ಹವ್ಯಕ ಪಲ್ಲವ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ದೇಶದಾದ್ಯಂತ ಹಲವಾರು ಯೋಗ ಪ್ರದರ್ಶನ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯೋಗಾಸನದಲ್ಲಿ ಆಸಕ್ತಿ ವಹಿಸಿದಂತೆ ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿರುವ ಚಂದನ್‍ಗೆ ಕಾಲೇಜು ಆಡಳಿತ ಮಂಡಳಿ ಶುಲ್ಕ ವಿನಾಯಿತಿ ನೀಡಿ ಪ್ರೋತ್ಸಾಹಿಸಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಕಾಲೇಜು ವತಿಯಿಂದ ಆನ್‍ಲೈನ್ ಯೋಗ ತರಬೇತಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT