ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೀಪದ ಸಂಪರ್ಕಕ್ಕೆ ಕಬ್ಬಿಣದ ಕಾಲುಸಂಕ

ರೈತ ಕಿಶೋರ್‌ ಡಿಮೆಲ್ಲೊ ಪ್ರಯೋಗ
Last Updated 7 ಆಗಸ್ಟ್ 2022, 6:29 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳಕ್ಕೆ ಕಾಲುಸಂಕ ನಿರ್ಮಿಸುವುದು ಮಲೆನಾಡಿನಲ್ಲಿ ವಾಡಿಕೆ. ಗ್ರಾಮ ಪಂಚಾಯಿತಿಯಿಂದ ಸಹಾಯಧನಕ್ಕೆ ಕಾಯದೆ, ಸ್ವಂತ ಖರ್ಚಿನಲ್ಲಿ ಕಬ್ಬಿಣದ ಕಾಲುಸಂಕ ನಿರ್ಮಿಸಿದ ರೈತ ಕಿಶೋರ್‌ ಡಿಮೆಲ್ಲೊ ಪ್ರಯೋಗ ಮಲೆನಾಡಿಗರಿಗೆ ಮಾದರಿಯಾಗಿದೆ.

ಸುಮಾರು ಹತ್ತು ದಿನ ಬಿಡುವು ನೀಡಿದ್ದ ವರುಣ ತಾಲ್ಲೂಕಿನಲ್ಲಿ ಮತ್ತೆ ಆರ್ಭಟಿಸುತ್ತಿದ್ದಾನೆ. ಕರಾವಳಿ, ಒಳನಾಡಿನಲ್ಲಿ ಮಳೆಯ ಅಬ್ಬರಕ್ಕೆ ಹಲವೆಡೆ ಸಂಚಾರ ಅಸ್ತವ್ಯಸ್ಥಗೊಂಡಿದೆ. ಕಾಡು, ಗುಡ್ಡ, ಹಳ್ಳ, ಕೊಳ್ಳಗಳ ಆಚೆಗಿನ ಜನವಸತಿ ಸಂಪರ್ಕ ಸ್ಥಗಿತಗೊಳ್ಳುತ್ತಿದೆ. ಇಂತಹ ಪರಿಸ್ಥಿತಿ ನಿಭಾಯಿಸಲು ಗ್ರಾಮೀಣ ಪ್ರದೇಶದಲ್ಲಿ ಶತಮಾನಗಳ ಹಿಂದೆ ಕಂಡುಕೊಂಡ ದಾರಿಯೇ ಕಾಲುಸಂಕ.

ತೀರ್ಥಹಳ್ಳಿ ತಾಲ್ಲೂಕಿನ ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರುಪತಿ–ಗುಡ್ಡೇಕೊಪ್ಪ ಗ್ರಾಮದ ಕೃಷಿ ಕುಟುಂಬದಕಿಶೋರ್‌ ತಮ್ಮ ನಾಲ್ಕೂವರೆ ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ಮುಂದುವರಿಸಿದ್ದಾರೆ. ಮೂಲ ಬೆಳೆಯಾಗಿ ಅಡಿಕೆ, ಬಾಳೆ, ತೆಂಗು, ಭತ್ತವನ್ನು ಆರಿಸಿಕೊಂಡಿದ್ದು, ಹವಾಮಾನ ಆಧಾರಿತ ಬೆಳೆಗಳಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ಭತ್ತ ಕಟಾವಿನ ನಂತರ ಖಾಲಿ ಬೀಳುವ ಗದ್ದೆಯಲ್ಲಿ ಸೌತೆ, ಕುಂಬಳ ಸೇರಿ ಅನೇಕ ತರಕಾರಿ ಬೆಳೆಯಲ್ಲಿಯೂ ಯಶಸ್ಸು ಕಂಡಿದ್ದಾರೆ.

ಸದ್ಯ ಕಿಶೋರ್‌ ದಂಪತಿ ವಾಸವಾಗಿರುವ ಗುಡ್ಡೇಕೊಪ್ಪ ಗ್ರಾಮದ ಸುತ್ತ ದಟ್ಟವಾದ ಕಾಡು ಇದೆ. ಇನ್ನೊಂದು ಭಾಗದಲ್ಲಿ ಮರಡಿ ಹಳ್ಳ ಇದೆ. ಅನಿವಾರ್ಯವಾಗಿ ಹಳ್ಳ ದಾಟಬೇಕು. ಇಲ್ಲದಿದ್ದರೆ ನಾಲ್ಕೈದು ಕಿ.ಮೀ .ಕಾಡಿನ ಹಾದಿ ಹಿಡಿಯಬೇಕು. 2020–21ರವರೆಗೂ ಗ್ರಾಮ ಪಂಚಾಯಿತಿ ನೀಡುವ ₹ 2,500 ಸಹಾಯಧನ ಪಡೆದು ಮರದ ಕಾಲುಸಂಕ ನಿರ್ಮಿಸುತ್ತಿದ್ದರು. ಈಗ ಕಬ್ಬಿಣದ ಸಂಕ ನಿರ್ಮಿಸಿದ್ದಾರೆ.

ಉಕ್ಕಿ ಹರಿಯುವ ಹಳ್ಳ: ಹಳ್ಳಗಳಲ್ಲಿ ಹರಿಯುವ ನೀರು ತಡೆಯಲು ವಡ್ಡು, ಸಣ್ಣ ಚೆಕ್‌ ಡ್ಯಾಂ, ತಡೆಗೋಡೆ ನಿರ್ಮಿಸುವ ಪದ್ಧತಿಗಳು ಜೀವಂತವಾಗಿವೆ. ಅನೇಕ ಕಡೆಗಳಲ್ಲಿ ಇವುಗಳ ಮೇಲೂ ನಡೆದುಹೋಗುತ್ತಾರೆ. ತುಂಬಿ ಹರಿಯುವ
ಹಳ್ಳಗಳ ವೇಗ ತಡೆಯುವುದು, ನೀರು ಸಂಗ್ರಹಿಸುವುದು ಇದರ ಮೂಲ ಉದ್ದೇಶವಾಗಿದ್ದರೂ ಸಂಪರ್ಕಕ್ಕೂ ಆಧಾರವಾಗಿದೆ. ನೀರು ಸಂಗ್ರಹ ಹೆಚ್ಚುತ್ತಿದ್ದಂತೆಯೇ ಈ ಮಾರ್ಗದ ಸಂಚಾರವೂ ಬಂದ್‌ ಆಗುತ್ತದೆ. ಉಕ್ಕಿ ಹರಿಯುವ ಹಳ್ಳ ದಾಟುವುದು ಕಷ್ಟಕರ ಆಗಿದ್ದರಿಂದ ಅಡಿಕೆ ಮರ, ಹಲಗೆ, ಬಿದಿರು ಅಡ್ಡಹಾಕಿ ಅದರ ಮೇಲೆ ನಡೆಯುವ ಅನಿವಾರ್ಯ ಇಲ್ಲಿನ ಜನರದ್ದು.

ಸಹಾಯಧನ ಅಲ್ಪ

‘ಗ್ರಾಮ ಪಂಚಾಯಿತಿ ಸಹಾಯಧನ ತೀರಾ ಕಡಿಮೆ ಎನಿಸಿದರೂ ಸರ್ಕಾರದ ಹಣ ಎಂಬ ಕಾರಣಕ್ಕೆ ಹಲ್ಲು ಗಿಂಜಬೇಕು. ಸಂಕ ನಿರ್ಮಾಣಕ್ಕೆ ವಾರಗಟ್ಟಲೆ ಕೆಲಸ ಮಾಡಬೇಕಾಗುತ್ತದೆ. ಗ್ರಾಮದ ಹತ್ತಾರು ಜನರು ಸೇರಿಕೊಂಡು ಸಂಕ ನಿರ್ಮಿಸಲು ಒದ್ದಾಡಬೇಕಾಗುತ್ತದೆ. ಚಿಕ್ಕ ಹಳ್ಳಗಳಿಗೆ ಹೆಚ್ಚಿನ ಶ್ರಮ ಅಗತ್ಯವಿಲ್ಲದಿದ್ದರೂ, ದೊಡ್ಡ ಹಳ್ಳಗಳ ಸ್ಥಿತಿ ಭಿನ್ನವಾಗಿದೆ. ಇತ್ತೀಚೆಗೆ ಮರಗಳ ಕಡಿತಲೆಗೆ ವಿಪರೀತ ನಿಯಮ ಜಾರಿಯಾಗಿರುವುದು ಹೆಚ್ಚು ಸಂಕಷ್ಟ ತಂದೊಡ್ಡಿದೆ. ಹೀಗಾಗಿ, ಸ್ವಂತ ಖರ್ಚಿನಲ್ಲಿ ಸುಮಾರು ₹ 1.10 ಲಕ್ಷ ವ್ಯಯಿಸಿ 60 ಅಡಿ ಉದ್ದ, ಒಂದೂವರೆ ಅಡಿ ಅಗಲದ ಕಬ್ಬಿಣದ ಸೇತುವೆ ನಿರ್ಮಿಸಿಕೊಂಡಿದ್ದೇನೆ’ ಎನ್ನುತ್ತಾರೆ ರೈತ ಕಿಶೋರ್‌ ಡಿಮೆಲ್ಲೊ.

ಕಾಲುಸಂಕ ಇಲ್ಲವೆಂದರೆ ಸಂಪರ್ಕ ಕಷ್ಟ

‘ಮರದ ಸಂಕ ಸರಿ ಇಲ್ಲದ ಕಾರಣ ಕಳೆದ ವರ್ಷದ ಮಳೆಗಾಲದಲ್ಲಿ ಮರಡಿ ಹಳ್ಳದಲ್ಲಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮಳೆಗಾಲದಲ್ಲಿ ಸಶಕ್ತ ಕಾಲುಸಂಕ ಇಲ್ಲವೆಂದರೆ ಸಂಪರ್ಕಕ್ಕೆ ಪರದಾಡಬೇಕಾಗುತ್ತದೆ. ಸರ್ಕಾರವನ್ನು ನಂಬಿ ಕುಳಿತರೆ ಪ್ರಯೋಜನ ಇಲ್ಲ ಎಂದು ಕಿಶೋರ್‌ ಈ ಆಲೋಚನೆಗೆ ಮುಂದಾಗಿದ್ದಾರೆ’ ಎಂದು ಕೃಷಿಕ ರಾಮಚಂದ್ರ ಕೊಪ್ಪಲು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT