ಶನಿವಾರ, ಡಿಸೆಂಬರ್ 4, 2021
20 °C

ಚರಕ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಹೆಗ್ಗೋಡಿನ ಚರಕ ಸಂಸ್ಥೆ ನಡೆಸುತ್ತಿರುವ ‘ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿ’ ಚಳವಳಿಗೆ ಬೆಂಬಲ ಸೂಚಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಚರಕಕ್ಕೆ ನೀಡಬೇಕಾಗಿರುವ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ‘ದಲಿತ ಸಂಘರ್ಷ ಸಮಿತಿ’ಯಿಂದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಸಮಿತಿ ಮುಖಂಡ ಪರಮೇಶ್ವರ ದೂಗೂರು, ‘ಚರಕ ಸಂಸ್ಥೆಯಲ್ಲಿ 800ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು ಸರ್ಕಾರ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದ ಕಾರಣ ಸಂಸ್ಥೆ ಮುಚ್ಚುವ ಹಂತಕ್ಕೆ ಬಂದಿದೆ. ಮುಖ್ಯಮಂತ್ರಿ ನಮ್ಮ ಜಿಲ್ಲೆಯವರೇ ಆಗಿದ್ದು ಇಲ್ಲಿನ ಸಂಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಚರಕ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ₹ 33 ಲಕ್ಷ, ರಾಜ್ಯ ಸರ್ಕಾರದಿಂದ ‘ಪವಿತ್ರ ವಸ್ತ್ರ’ ಯೋಜನೆಯ ₹ 60 ಲಕ್ಷ ಸೇರಿ ವಿವಿಧ ಯೋಜನೆಗಳಿಂದ ಒಟ್ಟು ₹ 2.40 ಕೋಟಿ ಬಿಡುಗಡೆಯಾಗಬೇಕಿದೆ. ಅಧಿಕಾರಿಗಳು ವಿನಾಕಾರಣ ಇದರ ಬಿಡುಗಡೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಚರಕ ಸಂಸ್ಥೆ ನಡೆಸುವ ಎಲ್ಲಾ ರೀತಿಯ ಹೋರಾಟಗಳಿಗೆ ‘ದಲಿತ ಸಂಘರ್ಷ ಸಮಿತಿ’ಯ ಬೆಂಬಲವಿದೆ’ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಕಬಸೆ ಅಶೋಕಮೂರ್ತಿ, ‘ಹೆಗ್ಗೋಡಿನ ಚರಕ ಹಾಗೂ ನೀನಾಸಂ ಸಂಸ್ಥೆ ಈ ನಾಡಿನ ಗೌರವವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಇಂತಹ ಸಂಸ್ಥೆಗಳ ಉಳಿವಿಗೆ ಸರ್ಕಾರ ಸ್ವಯಂಪ್ರೇರಣೆಯಿಂದ ನೆರವು ನೀಡಲು ಮುಂದಾಗಬೇಕು. ಇಲ್ಲದಿದ್ದರೆ ಮಲೆನಾಡಿನ ಜನರು ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗತ್ತದೆ’ ಎಂದು ಎಚ್ಚರಿಸಿದರು.

ನಗರಸಭೆ ಸದಸ್ಯ ಜಾಕೀರ್, ಮಾಜಿ ಸದಸ್ಯ ರವಿ ಜಂಬಗಾರು, ರಂಗಕರ್ಮಿ ಯೇಸುಪ್ರಕಾಶ್, ಪ್ರಮುಖರಾದ ಡಿ.ದಿನೇಶ್, ವೈ.ಎನ್. ಹುಬ್ಬಳ್ಳಿ, ಎ.ಎ.ಶೇಖ್, ಸುನೀಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು