ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಎಲ್ಲ ರೈತರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿ

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಸೂಚನೆ
Last Updated 23 ಏಪ್ರಿಲ್ 2022, 5:14 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಸರ್ಕಾರದ ಸಾಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಪ್ರತಿಯೊಬ್ಬ ರೈತರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಜಿಲ್ಲೆಯಲ್ಲಿ 1.70 ಲಕ್ಷ ಖಾತೆಗಳನ್ನು ತೆರೆಯಲಾಗಿದ್ದು, ಇದರ ಪೈಕಿ 1.53 ಲಕ್ಷ ಅರ್ಹ ಖಾತೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ತಲಾ ₹ 10 ಸಾವಿರ ಸಹಾಯಧನ ಒದಗಿಸುತ್ತಿದೆ. ಆದರೆ, ಜಿಲ್ಲೆಯಲ್ಲಿ ಕೇವಲ 1.41 ಲಕ್ಷ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಸಾಲ ಪಡೆಯಲು ಅರ್ಹ ರೈತರ ಸಂಖ್ಯೆ ಹೆಚ್ಚಿರುವುದು ಸ್ಪಷ್ಟವಾಗಿದೆ ಎಂದರು.

ಹಾಲು ಉತ್ಪಾದಕರು, ಮೀನುಗಾರರು ಸೇರಿ ಎಲ್ಲಾ ರೈತರಿಗೂ ಸಾಲ ಸೌಲಭ್ಯ ಒದಗಿಸಲು ಅನುಕೂಲವಾಗುವಂತೆ ಪ್ರತಿಯೊಬ್ಬ ಅರ್ಹರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಬೇಕು. ಇದಕ್ಕಾಗಿ ಅಭಿಯಾನದ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚನೆನೀಡಿದರು.

ಬಿತ್ತನೆಗೆ ಸಿದ್ಧತೆ: ಖಾರೀಫ್ ಬಿತ್ತನೆಗೆ ಅಗತ್ಯ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಈಗಲೇ ಸಿದ್ಧತೆಯನ್ನು ಆರಂಭಿಸಬೇಕು. ಕಳೆದ ಒಂದು ವಾರದಲ್ಲಿ ಆಗುತ್ತಿರುವ ಗಾಳಿ ಮಳೆಯಿಂದ ಕೆಲವು ಭಾಗಗಳಲ್ಲಿ ಅಡಿಕೆ ಹಾಗೂ ಬಾಳೆ ತೋಟಗಳಿಗೆ ಉಂಟಾಗಿರುವ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು.

ಗೋಶಾಲೆಗೆ ಜಮೀನು: ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆಯನ್ನು ತೆರೆಯಲು ಹೊಸನಗರ ತಾಲ್ಲೂಕಿನಲ್ಲಿ ಜಮೀನು
ಗುರುತಿಸಲಾಗಿದ್ದು, ಅಂತಿಮಗೊಳಿಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 11 ಖಾಸಗಿ ಗೋಶಾಲೆಗಳಿದ್ದು, ಕಳೆದ ಹಣಕಾಸು ಸಾಲಿನಲ್ಲಿ ಒಟ್ಟು ₹ 27 ಲಕ್ಷ ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಶಿವಯೋಗಿ ಎಲಿ ಮಾಹಿತಿನೀಡಿದರು.

ವಿದ್ಯುತ್ ಸಂಪರ್ಕ: ಗಂಗಾಕಲ್ಯಾಣ ಯೋಜನೆಯಡಿ ವಿವಿಧ ಅಭಿವೃದ್ಧಿ ನಿಗಮಗಳು ಕೈಗೊಂಡಿರುವ ಕಾಮಗಾರಿಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸುವ ಒಟ್ಟು 151 ಅರ್ಜಿಗಳು ಹಾಗೂ ಕುಡಿಯುವ ನೀರು ಯೋಜನೆಗಳ 86 ಅರ್ಜಿಗಳು ಬಾಕಿಯಿದ್ದು, ಇವುಗಳಿಗೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT