ಶಿವಮೊಗ್ಗ: ಇಲ್ಲಿನ ಹನುಮಂತ ನಗರದಲ್ಲಿ ಆರು ವರ್ಷಗಳ ಹಿಂದೆ ನಡೆದಿದ್ದ ಜೈಲರ್ ಸಂತೋಷ್ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ನಾಗವೇಣಿ (27) ಹಾಗೂ ಪರಿಚಿತರಾದ ಜಹೀರಾಬಿ (41) ಅವರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹ 25,000 ದಂಡ ವಿಧಿಸಿ ಆದೇಶಿಸಿದೆ. ದಂಡ ಕಟ್ಟಲು ವಿಫಲವಾದಲ್ಲಿ ನಾಲ್ಕು ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದಲ್ಲಿ ಉಳಿದ ಮೂವರು ಅಪರಾಧಿಗಳಾದ ಹನುಮಂತನಗರದ ಜಬೀವುಲ್ಲಾ (23), ಮೊಹಮ್ಮದ್ ಇಮ್ರಾನ್ (25), ಚಂದ್ರಕುಮಾರ್ (24) ಅವರಿಗೆ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 20,000 ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿ 3 ತಿಂಗಳು ಸಾದಾ ಶಿಕ್ಷೆ ವಿಧಿಸಲಾಗಿದೆ.
ಕೌಟುಂಬಿಕ ಕಲಹದ ಕಾರಣ ಜೈಲರ್ ಸಂತೋಷ್‌ಗೆ (34) 2018ರ ಡಿ. 12ರಂದು ಪತ್ನಿ ನಾಗವೇಣಿ ಹಾಗೂ ಜಹೀರಾಬಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದು, ನಂತರ ಚಂದ್ರಕುಮಾರ, ಇಮ್ರಾನ್ ಹಾಗೂ ಜಬೀವುಲ್ಲಾ ಸೇರಿ ಜಹೀರಾಬಿ ಮನೆಯಲ್ಲಿದ್ದ ಒಮ್ನಿ ವಾಹನದಲ್ಲಿ ಸಂತೋಷ್ ಶವ ಕೊಂಡೊಯ್ದು ಸವಳಂಗ ರಸ್ತೆಯಲ್ಲಿ ಎಸೆದಿರುವ ಬಗ್ಗೆ ಮೃತನ ಸಹೋದರ ಇಲ್ಲಿನ ಜಯನಗರ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆಯನ್ನು ಆಗಿನ ಸರ್ಕಲ್ ಇನ್‌ಸ್ಪೆಕ್ಟರ್ ಜಿ.ದೇವರಾಜ್ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಆ. 23ರಂದು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಎ.ಎಂ.ಸುರೇಶ್‌ಕುಮಾರ್ ವಾದ ಮಂಡಿಸಿದ್ದರು.