ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಮುಳುವಾಗಲಿದೆ ನಾಯಕರ ಸರ್ವಾಧಿಕಾರಿ ನಡೆ: ಬಿ.ಬಿ.ನಿಂಗಯ್ಯ ಭವಿಷ್ಯ

ಮುಖಂಡರು, ಪದಾಧಿಕಾರಿಗಳ ಸಭೆಯಲ್ಲಿ ಜೆಡಿಎಸ್‌ ವೀಕ್ಷಕ
Last Updated 19 ಫೆಬ್ರುವರಿ 2021, 14:59 IST
ಅಕ್ಷರ ಗಾತ್ರ

ಶಿವಮೊಗ್ಗ: ಸರ್ಕಾರದ ತಪ್ಪು ನಿರ್ಧಾರಗಳು, ನಾಯಕರ ಸರ್ವಾಧಿಕಾರಿ ನಡೆಯ ಪರಿಣಾಮ ಬಿಜೆಪಿ ರಾಜ್ಯ ಹಾಗೂ ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಜೆಡಿಎಸ್‌ ವೀಕ್ಷಕ ಬಿ.ಬಿ.ನಿಂಗಯ್ಯ ಭವಿಷ್ಯ ನುಡಿದರು.

ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪಕ್ಷದ ಮುಖಂಡರು, ಪದಾಧಿಕಾರಿಗಳು, ಪ್ರಮುಖ ಕಾರ್ಯಕರ್ತರ ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಬಿಜೆಪಿ ರೈತ ವಿರೋಧಿ, ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಅವರ ನಡೆಯಲ್ಲಿ ಸರ್ವಾಧಿಕಾರ ವಿಜೃಂಭಿಸುತ್ತಿದೆ. ರಾಜ್ಯ ರಾಜಕಾರಣದಲ್ಲಿ ಶಾಸಕರನ್ನೇ ಖರೀದಿ ಮಾಡುವ ಸನ್ನಿವೇಶ ನೋಡುತ್ತಿದ್ದೇವೆ. ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಮೀಸಲಾತಿಯ ವಿರೋಧಿ ಅಲೆ ಎದ್ದಿದೆ. ಬೆಲೆ ಏರಿಕೆ ಜನ ಸಾಮಾನ್ಯರಿಗೆ ಬಿಸಿ ಮುಟ್ಟಿಸಿದೆ. ಜನರು ಬಿಜೆಪಿಗೆ ಬುದ್ಧಿ ಕಲಿಸುವ ಸಮಯ ಬಂದಿದೆ.ರಾಜಕಾರಣ ಬದಲಾವಣೆಯ ಕಾಲಘಟ್ಟದಲ್ಲಿದೆ. ಕೆಟ್ಟ ಆಡಳಿತ ಕೊನೆಯಾಗಲಿದೆ ಎಂದರು.

ಜೆಡಿಎಸ್‌ ಸಮಿತಿಗಳ ವಿಸರ್ಜನೆ

ಜೆಡಿಎಸ್ ಪುನರ್ ಸಂಘಟಿಸಲು ಈಗಿರುವ ಜಿಲ್ಲಾ ಘಟಕಗಳನ್ನು ವಿಸರ್ಜನೆ ಮಾಡಲಾಗಿದೆ. ತಾತ್ಕಾಲಿಕ ಸಮಿತಿ ರಚಿಸಲಾಗುತ್ತಿದೆ. ಪಕ್ಷದ ವರಿಷ್ಠರ ನಿರ್ದೇಶನದ ಮೇರೆಗೆ ಪಕ್ಷವನ್ನು ಪುನರ್ ಸಂಘಟಿಸಲು ವೀಕ್ಷಕರ ನೇಮಕ ಮಾಡಲಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಹೊಣೆ ತಮಗೆ ದೊರೆತಿದೆ. ತಮ್ಮೊಂದಿಗೆ ಪ್ರಜ್ವಲ್ ರೇವಣ್ಣ, ಶಾರದಾ ಪೂರ‍್ಯಾಯನಾಯ್ಕ, ವೈ.ಎಸ್.ವಿ.ದತ್ತ, ಎಚ್.ಟಿ.ಬಳಿಗಾರ್, ಎಂ.ಶ್ರೀಕಾಂತ್‌ ಸೇರಿದಂತೆ 17 ಜನರ ತಂಡವಿದ ಎಂದರು.

ಶಿವಮೊಗ್ಗ ಸಭೆಯಲ್ಲಿ ಪ್ರಮುಖವಾಗಿ ತಾಲ್ಲೂಕು ಮತ್ತು ಜಿಲ್ಲಾ ತಾತ್ಕಾಲಿಕ ಸಮಿತಿಯ ಚರ್ಚೆ ನಡೆಯುತ್ತದೆ. ಈಗ ಸದ್ಯಕ್ಕೆ ಯಾವ ಜಿಲ್ಲಾ ಘಟಕಗಳು ಅಸ್ತಿತ್ವದಲ್ಲಿ ಇರುವುದಿಲ್ಲ. ಸದಸ್ಯತ್ವ ನೋಂದಣಿ, ತಾಲ್ಲೂಕು, ವಿಧಾನಸಭೆ, ಜಿಲ್ಲಾ ಹಂತದ ಘಟಕಗಳ ಪುನರ್‌ರಚನೆಗೆ ಆದ್ಯತೆ ನೀಡಲಾಗುವುದು. ಯುವಕರನ್ನು ಹೆಚ್ಚು ಒಳಗೊಳ್ಳುವಂತೆ ಯೋಜನೆ ರೂಪಿಸಲಾಗುವುದು. ಸಮಿತಿಯಲ್ಲಿ ಎಲ್ಲಾ ವರ್ಗದ ಸಮುದಾಯಗಳಿಗೆ ಆಧ್ಯತೆ ನೀಡುವುದು. ಕಾರ್ಯಕಾರಿಣಿ ರಚಿಸುವುದು ಸೇರಿದಂತೆ ಪಕ್ಷದ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲೆ ಸಮಾಜವಾದದ ನೆಲೆ. ಒಂದು ಕಾಲದಲ್ಲಿ ಜೆಡಿಎಸ್‌ಗೆ ಹೆಚ್ಚಿನ ಆದ್ಯತೆ ದೊರೆತಿತ್ತು. ಈಗ ಮತ್ತೆ ಪಕ್ಷವನ್ನು ಜಿಲ್ಲೆಯಲ್ಲಿ ಬಲಿಷ್ಠಗೊಳಿಸಲು ಪ್ರಯತ್ನಿಸಲಾಗುವುದು. ಎಲ್ಲ ಪಕ್ಷಗಳಲ್ಲೂ ಗೊಂದಲ ಸಹಜ. ಮಧು ಬಂಗಾರಪ್ಪ ಪಕ್ಷ ಬಿಡುವ ಕುರಿತು ಎಲ್ಲೂ ಹೇಳಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಕ್ಷದ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಮರು ಸಂಘಟನೆಗೆ ಒತ್ತು ನೀಡಲಾಗುವುದು ಎಂದರು.

ಮಾಜಿ ಶಾಸಕಿ ಶಾರದ ಪರ್‍ಯಾನಾಯ್ಕ, ಮುಖಂಡರಾದ ಎಂ.ಶ್ರೀಕಾಂತ್, ಹೊದಿಗೆರೆ ರಮೇಶ್, ಎಚ್.ಟಿ.ಬಳಿಗಾರ್, ಕೆ.ಎಂ.ರಾಮಕೃಷ್ಣ, ಕಾಂತ್‌ರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT